ಕಾಪು: ಅನುಮತಿ ಪಡೆಯದೆ ಬಿಜೆಪಿ ಕಾರಿನಲ್ಲಿ ಚುನಾವಣಾ ಪ್ರಚಾರ- ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು
ಕಾಪು, ಎ.4: ಉಳಿಯಾರಗೋಳಿ ಗ್ರಾಮದ ಬಳಿ ಎ.3 ರಂದು ಬೆಳಗ್ಗೆ ಅನುಮತಿ ಪಡೆಯದೆ ಕಾರಿನಲ್ಲಿ ಬಿಜೆಪಿ ಧ್ವಜವನ್ನು ಕಟ್ಟಿಕೊಂಡು ಚುನಾವಣಾ ಪ್ರಚಾರ ಮಾಡುವ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿರುವ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿನಲ್ಲಿ ಚುನಾವಣೆಗೆ ಸಂಬಧಿಸಿದ ಬಾವುಟ ಹಾಗೂ ಇತರ ವಸ್ತುಗಳನ್ನು ಸಾಗಾಟ ಮಾಡಲು ಸಿದ್ಧವಾಗುತ್ತಿರುವ ಬಗ್ಗೆ ಸಿವಿಜಿಲ್ ಆ್ಯಪ್‌ನಲ್ಲಿ ದೂರು ಬಂದಿದ್ದು, ಅದರಂತೆ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಉಮೇಶ್ ತಂಡ ಕಾರ್ಯಾಚರಣೆ ನಡೆಸಿತ್ತು.
ಚಾಲಕ ಕಾರನ್ನು ಕಮಲದ ಚಿಹ್ನೆ ಇರುವ ದೊಡ್ಡ ಬಾವುಟವನ್ನು ನೊಂದಣಿ ನಂಬ್ರ ಕಾಣದಂತೆ ಕಟ್ಟಿಕೊಂಡು ರಸ್ತೆಯಲ್ಲಿ ತೀವ್ರ ನಿರ್ಲಕ್ಷ್ಯತನ ಹಾಗೂ ದುಡುಕುತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಹೋಗುತ್ತಿದ್ದು, ಫ್ಲೈಯಿಂಗ್ ಸ್ಕ್ವಾಡ್‌ನ ಕಾರು ಹತ್ತಿರಕ್ಕೆ ಹೋಗುತ್ತಿದ್ದಂತೆ ಅದರ ಚಾಲಕನು ಮಾಳವಿಕಾ ರೆಸಿಡೆನ್ಸಿ ಎದುರಿನ ಅಂಗಳದಲ್ಲಿ ಕಾರನ್ನು ನಿಲ್ಲಿಸಿ ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ.
ಕಾರಿನ ಚಾಲಕನು ಪಕ್ಷದ ಚಿಹ್ನೆಗಳನ್ನು ಬಳಸಿ ಚುನಾವಣಾ ಪ್ರಚಾರ ಮಾಡಲು ಚುನಾವಣಾಧಿಕಾರಿಗಳಿಂದ ಯಾವುದೇ ಅನುಮತಿಯನ್ನು ಪಡೆದುಕೊಳ್ಳದೇ, ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.