ಈಶ್ವರಪ್ಪರನ್ನು ಭೇಟಿಯಾಗದ ಅಮಿತ್ ಶಾ- ದಿಲ್ಲಿಯಿಂದ ಬರಿಗೈಯಲ್ಲಿ ವಾಪಸ್
ಬೆಂಗಳೂರು: ಕೇಂದ್ರ ಗೃಹಸಚಿವ ಅಮಿತ್ ಶಾ ಭೇಟಿಗೆಂದು ದಿಲ್ಲಿಗೆ ತೆರಳಿದ್ದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ಬರಿಗೈಯಲ್ಲಿ ಮರಳಿದ್ದು, ಶಿವಮೊಗ್ಗದಿಂದ ತಾನು ಸ್ಪರ್ಧಿಸುವುದು ಖಚಿತ ಎಂದು ಮತ್ತೆ ಸ್ಪಷ್ಟಪಡಿಸಿದರು.
ಬುಧವಾರ ರಾತ್ರಿ ದಿಲ್ಲಿಯಲ್ಲಿ ಮಾತನಾಡಿದ ಈಶ್ವರಪ್ಪ, ಮಂಗಳವಾರ ಬೆಂಗಳೂರಿಗೆ ಬಂದಿದ್ದ ಅಮಿತ್ ಶಾ, ತಮಗೆ ದೂರವಾಣಿ ಕರೆ ಮಾಡಿ ವಿಚಾರಿಸಿ ಕೊಂಡಿದ್ದರು. ಈ ವೇಳೆ ನನ್ನ ನಿಲುವುಗಳನ್ನು ಸ್ಪಷ್ಟ ಪಡಿಸಿದ್ದೆ. ಬುಧವಾರ ದಿಲ್ಲಿಯಲ್ಲಿ ಭೇಟಿ ಮಾಡಿ ಎಂದಿದ್ದರು. ಅದಕ್ಕಾಗಿ ಬಂದಿದ್ದೆ ಎಂದರು.
ಹಿಂದೂಪರ ಹೋರಾಟಗಾರರಾದ ಯತ್ನಾಳ್, ಅನಂತ ಕುಮಾರ್ ಹೆಗಡೆ, ಸದಾನಂದ ಗೌಡರನ್ನು ಪಕ್ಕಕ್ಕೆ ಸರಿಸಲಾಗುತ್ತಿದೆ. ಮಗನಿಗಾಗಿ ಯಡಿಯೂರಪ್ಪ ಹೊಂದಾಣಿಕ ರಾಜಕಾರಣ ಮಾಡುತ್ತಿದ್ದಾರೆ ಎಂಬುದನ್ನು ಅಮಿತ್ ಶಾ ಗಮನಕ್ಕೆ ತಂದಿದ್ದೆ. ಅಲ್ಲದೆ, ಪಕ್ಷ ಕಟ್ಟಿದ, ಕಟ್ಟುತ್ತಿರುವ ಅನೇಕರು ನೋವಿನಲ್ಲಿ ದ್ದಾರೆ. ಅವರ ನೋವಿಗೆ ಧ್ವನಿಯಾಗುತ್ತಿದ್ದೇನೆ. ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಒತ್ತಾಯ ಮಾಡಬೇಡಿ ಎಂದಿದ್ದೆ.
ಹಿಂದುಳಿದ ವರ್ಗ, ದಲಿತರನ್ನು ಸೇರಿಸಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿದ್ದನ್ನು ಒಳ್ಳೆಯ ಕೆಲಸ ಎಂದು ಬೆನ್ನುತಟ್ಟಬೇಕಿದ್ದ ಯಡಿಯೂರಪ್ಪ ಅದಕ್ಕೆ ತಡೆಯೊಡ್ಡಿದರು. ಅಮಿತ್ ಶಾಗೆ ದೂರು ಕೊಟ್ಟರು. ರಾಯಣ್ಣ ಬ್ರಿಗೇಡ್ ಇದ್ದಿದ್ದರೆ ದೊಡ್ಡ ಸಂಘಟನೆ ಆಗಿರುತ್ತಿತ್ತು. ಯಾಕೆ ವಿರೋಧಿಸುತ್ತಿದ್ದೀರಿ ಎಂಬ ನನ್ನ ಪ್ರಶ್ನೆಗಾಗಲೀ, ಅಮಿತ್ ಶಾ ಪ್ರಶ್ನೆಗಾಗಲೀ ಇದುವರೆಗೆ ಯಡಿಯೂರಪ್ಪ ಉತ್ತರ ಕೊಟ್ಟಿಲ್ಲ. ಇದನ್ನೂ ಅಮಿತ್ ಶಾ ಗಮನಕ್ಕೆ ಮತ್ತೊಮ್ಮೆ ತಂದೆ ಎಂದು ಈಶ್ವರಪ್ಪ ಹೇಳಿದ್ದಾರೆ.
ನಾಳೆ ರಾತ್ರಿ ದಿಲ್ಲಿಗೆ ಬನ್ನಿ ಎಂದಿದ್ದರು. ಈಗ ಸಿಗುವುದಿಲ್ಲ ಎಂಬುದು ಗೊತ್ತಾಗಿದೆ. ಬಹುಶಃ ನಾನು ಚುನಾವಣೆಗೆ ನಿಲ್ಲಲಿ, ರಾಘವೇಂದ್ರ ಸೋಲಲಿ ಎಂಬ ಅಪೇಕ್ಷೆ ಅವರಿಗೂ ಇದ್ದಂತಿದೆ. ಅದಕ್ಕೇ ಭೇಟಿ ಮಾಡಿಲ್ಲ ಎನ್ನಿಸುತ್ತದೆ. ಅವರ ಅಪೇಕ್ಷೆಯಂತೆ ನಾನು ಸ್ಪರ್ಧಿಸುತ್ತೇನೆ. ನಾನು ಚುನಾವಣೆಗೆ ಸ್ಪರ್ಧಿಸಲಿ, ಕುಟುಂಬ ರಾಜಕಾರಣ ಅಂತ್ಯವಾಗಲಿ, ಅದಕ್ಕೆ ನಮ್ಮ ಆಶೀರ್ವಾದ ಇದೆ ಎಂಬುದನ್ನು ಪ್ರಧಾನಿ ಮೋದಿ, ಅಮಿತ್ ಶಾ ಈ ಮೂಲಕ ನನಗೆ ತಿಳಿಸಿದ್ದಾರೆಂದು ಭಾವಿಸಿದ್ದೇನೆ. ಅವರ ಭೇಟಿ ಆಗಿದ್ದರೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರಲಿಲ್ಲ ಎಂದು ಪುನರುಚ್ಚರಿಸಿದರು.