ಪೊಳ್ಳು ಹಿಂದುತ್ವ ವಾದಿಗಳಿಂದ ನಮಗೆ ಪಾಠ ಬೇಕಾಗಿಲ್ಲ: ಈಶ್ವರಪ್ಪ ವಿರುದ್ಧ ಬಿ.ವೈ. ರಾಘವೇಂದ್ರ ವಾಗ್ದಾಳಿ

ಬೈಂದೂರು, ಎ.2: ಪಕ್ಷದ ಚೌಕಟ್ಟಿನಲ್ಲಿ ಚುನಾವಣೆಗೆ ಪಕ್ಷದ ಅಭ್ಯರ್ಥಿ ಘೋಷಣೆ ಆದ ನಂತರದಲ್ಲಿ ಅದೇ ಅಧಿಕೃತವಾಗಲಿದೆ. ಹಿಂದುತ್ವವಾದ ವಿಚಾರದಲ್ಲಿ ನಮ್ಮ ಮೈಯಲ್ಲಿ ಹರಿಯುತ್ತಿರುವ ಒಂದೊಂದು ಹನಿ ರಕ್ತವೂ ಕೂಡ ಹಿಂದುವೇ ಆಗಿದೆ. ಪೊಳ್ಳು ಹಿಂದುತ್ವವಾದಿ ಗಳಿಂದ ನಮಗೆ ಪಾಠ ಬೇಕಾಗಿಲ್ಲ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರರವರು ಕೆ.ಎಸ್. ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಬೈಂದೂರು ಸಮೀಪದ ನಾಗೂರಿನಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾನೇ ಎಂಬುದನ್ನು ಪಕ್ಷವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಇಡೀ ಬಿಜೆಪಿ, ಪರಿವಾರ ನಮ್ಮ ಜತೆಗೆ ಇದೆ. ಪ್ರಚಾರಕ್ಕಾಗಿ ಹಿಂದುತ್ವ ಪ್ರದರ್ಶಿಸುವವರು ನಾವಲ್ಲ. ಪ್ರಚಾರಕ್ಕಾಗಿ ಹಿಂದುತ್ವ ಪ್ರದರ್ಶನ ಮಾಡುವ ಅವಶ್ಯಕತೆಯೂ ನಮಗಿಲ್ಲ ಎಂದರು.

ಯಡಿಯೂರಪ್ಪರ ಕುಟುಂಬ ಎಲ್ಲ ಸಮಾಜವನ್ನು ಸಮಾನವಾಗಿ ಕಾಣುತ್ತಿದೆ ಎಂದು ಎರಡು ವಾರದ ಹಿಂದೆ ಈಶ್ವರಪ್ಪ ಶಿಕಾರಿಪುರಕ್ಕೆ ಬಂದಿದ್ದಾಗ ಹೇಳಿದ್ದರು. ಐದು ಲಕ್ಷಕ್ಕೂ ಅಧಿಕ ಅಂತರದಲ್ಲಿ ರಾಘವೇಂದ್ರರನ್ನು ಗೆಲ್ಲಿಸಬೇಕು ಎಂದು ಅವರೇ ಹೇಳಿದ್ದರು. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಒಳ್ಳೆಯ ಕಾರ್ಯ ಮಾಡುತ್ತಿದ್ದಾರೆ ಎಂದು ಅವರೇ ಹಾರೈಸಿದ್ದರು. ಕೇವಲ ಎರಡೇ ವಾರದಲ್ಲಿ ಈಶ್ವರಪ್ಪರಲ್ಲಿ ಈ ಬದಲಾವಣೆ ಏಕಾಯಿತು? ಇದನ್ನೆಲ್ಲವನ್ನು ಮತದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!