ಉಡುಪಿ: ನಗರದಲ್ಲಿ ಬಿಸಿಲಿನ ತಾಪ ಹೆಚ್ಚಳಕಂಡಿದ್ದು, ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸಾರ್ವಜನಿಕರ ದಾಹ ತಣಿಸುವ ಉದ್ಧೇಶದಿಂದ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಹಾಗೂ ಜೋಸ್ ಆಲೂಕ್ಕಾಸ್ ಆಭರಣ ಮಳಿಗೆ ಜಂಟಿಯಾಗಿ ಮಾರುಥಿ ವೀಥಿಕಾದಲ್ಲಿ ಜಲ ಕುಟೀರ ಸ್ಥಾಪಿಸಿದ್ದು, ಇದರ ಉದ್ಘಾಟನಾ ಕಾರ್ಯಕ್ರಮವು ಮಂಗಳವಾರ ನಡೆಯಿತು.
ಜಲಕುಟೀರವನ್ನು ಕಾನೂನು ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಶರ್ಮಿಳಾ ಎಸ್,ಹಾಗೂ ಪೌರಾಯುಕ್ತ ರಾಯಪ್ಪ ಜಂಟಿಯಾಗಿ, ಅಯೋಧ್ಯೆಯಲ್ಲಿ ಬಾಲರಾಮನಿಗೆ ಅಭಿಷೇಕಕ್ಕೆ ಉಪಯೋಗಿಸಿದ ಬೆಳ್ಳಿಯ ಕಳಶದ ಮೂಲಕ ನೀರನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು,ಉಡುಪಿ ಜೋಸ್ ಆಲೂಕ್ಕಾಸ್ ಆಭರಣ ಮಳಿಗೆಯ ವ್ಯವಸ್ಥಾಪಕ ರಾಜೇಶ್ ಏನ್.ಆರ್, ಗೋಪಾಲ್, ಉದ್ಯಮಿ ಉದಯ ಕುಮಾರ್ ಉಪಸ್ಥಿತರಿದ್ದರು.
ಶುದ್ಧ ಕುಡಿಯುವ ನೀರನ್ನು,ಸದಾ ತಂಪಾಗಿಡುವ ಮೃತ್ತಿಕೆಯ ಹೂಜಿಯಲ್ಲಿ ಸಂಗ್ರಹಿಸಿಡಲಾಗುತ್ತದೆ. ಬಿಸಿಲಿನ ಧಗೆಯಿಂದ ಬಳಲಿದವರಿಗೆ ದಾಹ ತಣಿಸಲು ಇಲ್ಲಿಯ ಜಲಕುಟೀರದಿಂದ ಅನುಕೂಲವಾಗಲಿದೆ.ಈ ಯೋಜನೆ ಮಳೆಗಾಲ ಬರುವರೆಗೆ ಮುಂದುವರಿಯಲಿದೆ ಎಂದು ನಾಗರೀಕ ಸಮಿತಿಯ ನಿತ್ಯಾನಂದ ಒಳಕಾಡುವರು ತಿಳಿಸಿದ್ದಾರೆ.