ಮಹಿಳಾ ವಿರೋಧಿ ಕಾಂಗ್ರೆಸ್ಸಿಗೆ ಜನತೆ ತಕ್ಕ ಪಾಠ ಕಳಿಸಲಿದ್ದಾರೆ: ಗೀತಾಂಜಲಿ ಸುವರ್ಣ
ಉಡುಪಿ: ಕರ್ನಾಟಕದಲ್ಲಿ ಸಂವಿಧಾನ ವಿರೋಧಿ ಮತ್ತು ಮಹಿಳಾ ವಿರೋಧಿ ಕಾಂಗ್ರೆಸ್ ಸರಕಾರ ದುರಾಡಳಿತ ನಡೆಸುತ್ತಿದೆ. ಕಾಂಗ್ರೆಸ್ ಸರಕಾರ ಬಂದಾಗಲೆಲ್ಲ ಮಹಿಳಾ ವಿರೋಧಿ ಧೋರಣೆಗಳು ಕಾಣಿಸುತ್ತವೆ.
ಮಹಿಳಾ ವಿರೋಧಿ ಕಾಂಗ್ರೆಸ್ಸಿಗೆ ಜನತೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಳಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ವಕ್ತಾರೆ ಗೀತಾಂಜಲಿ ಎಮ್. ಸುವರ್ಣ ಹೇಳಿದರು.
ಅವರು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಸಚಿವ ಪ್ರಿಯಾಂಕ್ ಖರ್ಗೆಯವರು ಹಿಂದೆಯೂ ಮಹಿಳೆಯರು ಸರಕಾರಿ ಕೆಲಸ ಪಡೆಯಲು ಮಂಚ ಹತ್ತಬೇಕು ಎಂದಿದ್ದರು. ಈ ಮೂಲಕ ಇಡೀ ಮಹಿಳಾ ಸಮುದಾಯಕ್ಕೆ ಅವಮಾನ ಮಾಡಿದ್ದರು. ಇದೀಗ ಮಹಿಳೆಯರ ತಾಳಿ, ಕಾಲುಂಗುರ ತೆಗೆಸುವ ಕಾರ್ಯಕ್ಕೆ ರಾಜ್ಯ ಕಾಂಗ್ರೆಸ್ ಸರಕಾರ ಕೈ ಹಾಕಿದೆ. ಇಂತಹ ಅವಮಾನಕ್ಕೆ ಮಹಿಳೆಯರು ಭವಿಷ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುವ ಮೂಲಕ ಸೂಕ್ತ ಉತ್ತರ ನೀಡಲಿದ್ದಾರೆ ಎಂದರು.
ಹಿಂದೂ ಧರ್ಮದ ಪ್ರಕಾರ ಮಹಿಳೆಯರಿಗೆ ಮಾಂಗಲ್ಯ ಮತ್ತು ಕಾಲುಂಗುರಗಳು ಅತ್ಯಂತ ಪವಿತ್ರವಾದ ವಸ್ತುಗಳು. ಅವುಗಳನ್ನು ಸಾಮಾನ್ಯವಾಗಿ ಮಹಿಳೆಯರು ವೈಧವ್ಯ ಬಂದಾಗ ಮತ್ತು ಸಂಪೂರ್ಣ ದೇಹದ ಸ್ಕ್ಯಾನಿಂಗ್ ಮಾಡಬೇಕಾದ ಸಂದರ್ಭದಲ್ಲಿ ಮಾತ್ರ ತೆಗೆಯುತ್ತಾರೆ. ಪರೀಕ್ಷೆ ಬರೆಯುವ ವೇಳೆ ಮಾಂಗಲ್ಯ ಮತ್ತು ಕಾಲುಂಗುರ ತೆಗೆಯುವಂತೆ ಮಾಡುವ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರ ದೇಶದ ಸಮಸ್ತ ಮಹಿಳೆಯರನ್ನು ಅವಮಾನಿಸಿದೆ. ಕಾಂಗ್ರೆಸ್ಸಿನ ಮಹಿಳಾ ವಿರೋಧಿ ಧೋರಣೆ ಮತ್ತೊಮ್ಮೆ ಅನಾವರಣಗೊಂಡಿದೆ ಎಂದರು.
ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುವ ಕಾಂಗ್ರೆಸ್ ಸರಕಾರ ಪರೀಕ್ಷೆಯಲ್ಲಿ ಹಿಜಾಬ್ ಧರಿಸಲು ಅವಕಾಶ ಕೊಡುತ್ತಿದೆ. ಪರೀಕ್ಷೆಗೆ ಬಂದ ಹಿಂದೂ ಮಹಿಳೆಯರ ತಾಳಿ, ಕಾಲುಂಗುರ ತೆಗೆಸುತ್ತಾರೆ. ಹಿಂದುತ್ವ, ಹಿಂದೂ ಸಂಸ್ಕೃತಿಗೆ ಈ ಸರಕಾರ ಬೆಲೆ ಕೊಡುತ್ತಿಲ್ಲ. ಹಿಂದೂ ಮಹಿಳೆಯರ ಮಾಂಗಲ್ಯ ತೆಗೆಸುವ ದುಸ್ಸಾಹಸದಿಂದ ಈ ಸರಕಾರದ ಮನಸ್ಥಿತಿ ಯಾವ ಮಟ್ಟಕ್ಕೆ ಇಳಿದಿದೆ ಎಂಬುದು ಅರ್ಥವಾಗುತ್ತದೆ ಎಂದು ಅವರು ತಿಳಿಸಿದರು.
ವಂಟಮೂರಿ ಗ್ರಾಮದಲ್ಲಿ ಮಹಿಳೆಯ ಮೇಲಿನ ದೌರ್ಜನ್ಯ, ನಗ್ನಗೊಳಿಸಿ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಖಂಡನೀಯ. ಇಂತಹ ಪ್ರಕರಣಗಳು ಕಾಂಗ್ರೆಸ್ ಆಡಳಿತದಲ್ಲಿ ಸಾಕಷ್ಟು ನಡೆದಿದ್ದು, ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದೆ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ ಎಂದರು.
ಇತ್ತೀಚಿನ ಕಾಂಗ್ರೆಸ್ ನಾಯಕರ ಹೇಳಿಕೆಗಳು ಮಹಿಳಾ ವಿರೋಧಿ ಧೋರಣೆಯನ್ನು ಎತ್ತಿ ತೋರಿಸುತ್ತಿದೆ:
- ಶಾಮನೂರು ಶಿವಶಂಕರಪ್ಪ, ಸುಪ್ರಿಯಾ ಶ್ರೀನಾತೆ ಅವರ ಹೇಳಿಕೆಗಳು ಕಾಂಗ್ರೆಸ್ ಪಕ್ಷದ ಸ್ತ್ರೀವಿರೋಧಿ ಮನಸ್ಥಿತಿಯ ಅಭಿವ್ಯಕ್ತಿಗೊಳಿಸುತ್ತದೆ.
- ಶಾಮನೂರು ಶಿವಶಂಕರಪ್ಪ ಅವರು ‘ಮಹಿಳೆಯರು ಅಡುಗೆಮನೆಯಲ್ಲಿರಲು ಮಾತ್ರ ಲಾಯಕ್ಕು’ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ. ಇದು ಅತ್ಯಂತ ವಿಷಾದನೀಯ ಮತ್ತು ಖಂಡನೀಯ.
- ಶಾಮನೂರು ಅವರ ಪಕ್ಷದ ‘ಮಹಿಳೆ ಈ ರಾಷ್ಟ್ರದ ಪ್ರಧಾನಿ ಆಗಿದ್ದರು. ಈಗ ಆ ಪಕ್ಷದಲ್ಲಿ ಪ್ರಿಯಾಂಕ ವಾದ್ರಾ ಮತ್ತು ಸೋನಿಯಾ ಗಾಂಧಿಯವರು ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಮತ್ತೊಂದು ಪಕ್ಷದ ಅಭ್ಯರ್ಥಿಯ ಬಗ್ಗೆ ಅಗೌರವದ ಮಾತನಾಡುವುದು ಖಂಡನೀಯ.
- ನಮ್ಮ ಆದರಣೀಯ ಪ್ರಧಾನಿ ನರೇಂದ್ರ ಮೋದಿಯವರು ಸ್ತ್ರೀಯರನ್ನು ಪ್ರತ್ಯೇಕವಾಗಿ ಗುರುತು ಮಾಡಿಕೊಂಡು ಆರ್ಥಿಕತೆ ಮತ್ತು ಸಾಮಾಜಿಕವಾಗಿ ಸಶಕ್ತ ಮಾಡಲು ಅನೇಕ ಯೋಜನೆಗಳನ್ನು ಕಳೆದ 10 ವರ್ಷಗಳಲ್ಲಿ ಜಾರಿಗೊಳಿಸಿದ್ದಾರೆ. ಮಹಿಳೆಯರಿಗೆ ಅನುಕೂಲವಾಗಲೆಂದು ಮೋದಿಯವರು ಜನ್ ಧನ್, ಸ್ವಚ್ಛ ಭಾರತ್ ಮತ್ತಿತರ ‘ನೂರಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ಮಹಿಳಾ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದರು.
ರಾಜಕೀಯ ಸಶಕ್ತಿಕರಣಕ್ಕಾಗಿ ‘ನಾರಿ ಶಕ್ತಿ ವಂದನ್’ ಕಾಯ್ದೆಯನ್ನು ಜಾರಿಗೊಳಿಸಿಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಕಲ್ಪಿಸಿದ್ದಾರೆ. ಕಾಂಗ್ರೆಸ್ಸಿನ ಐ.ಟಿ. ಸೆಲ್ನ ಸುಪ್ರಿಯಾ ಶ್ರೀನಾತೆ ಎಂಬವರು ನಮ್ಮ ಪಕ್ಷದ ಇನ್ನೋರ್ವ ಅಭ್ಯರ್ಥಿ ಕಂಗನಾ ರಣಾವತ್ ಕುರಿತು ಅತ್ಯಂತ ಕೀಳು ಮಟ್ಟದ ಭಾಷೆಯಲ್ಲಿ ಫೇಸ್ಟುಕ್, ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದರು. ದೇಶಾದ್ಯಂತ ವಿರೋಧ ವ್ಯಕ್ತವಾದಾಗ ಅದನ್ನು ನಾನು ಮಾಡಿಲ್ಲ ಎಂದು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದರು ಎಂದರು.
ಈ ಎಲ್ಲ ಘಟನೆಗಳು ಮಹಿಳೆಯರ ಮೇಲಿನ ಕಾಂಗ್ರೆಸ್ಸಿನ ಕೊಳಕು ಮನಸ್ಥಿತಿಗೆ ಹಿಡಿದ ಕನ್ನಡಿಯಂತಿದೆ. ರಾಜ್ಯದ ಜನತೆ ಕಾಂಗ್ರೆಸ್ಸಿನ ಮಹಿಳಾ ವಿರೋಧಿ ನೀತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗೀತಾಂಜಲಿ ಸುವರ್ಣ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಜಿಲ್ಲಾ ಮಾಧ್ಯಮ ಪ್ರಮುಖ್ ಶ್ರೀನಿಧಿ ಹೆಗ್ಡೆ ಉಪಸ್ಥಿತರಿದ್ದರು.