ಮುನಿಯಾಲು: ಆಧುನಿಕ ವಸ್ತುಗಳಿಂದ ನಾವು ದುರ್ಬಲರಾಗುತ್ತಿದ್ದೇವೆ- ವಿದ್ವಾನ್ ಕೃಷ್ಣರಾಜ ಕುತ್ಪಾಡಿ

ಕಾರ್ಕಳ: ಆಧುನಿಕ ವಸ್ತುಗಳಿಂದ ನಾವು ದುರ್ಬಲರಾಗುತ್ತಿದ್ದೇವೆ ಎಂದು ವಿದ್ವಾನ್ ಕೃಷ್ಣರಾಜ ಕುತ್ಪಾಡಿ ತಿಳಿಸಿದರು.

ಹೆಬ್ರಿ ಮುನಿಯಾಲಿನ ಗೋಧಾಮದಲ್ಲಿ ಭಾನುವಾರ ಗೋಕುಲಾನಂದ ವಿಹಾರ ಪ್ರಕೃತಿ ಮಾತೆಯ ಮಡಿಲಲ್ಲಿ ಒಂದು ಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಈ ಪರಿಸರ ಎಲ್ಲವನ್ನೂ ಒಳಗೊಂಡಿರುವಂತಹದು. ಅಂದರೆ ಮರ, ಗಿಡ, ಹರಿಯುವ ನೀರು ಇವುಗಳ ಜೊತೆಗೆ ಚಿಕ್ಕ ಜೀವಿಗಳೂ ಪರಿಸರದ ಅಂಶಗಳಾಗಿವೆ. ಪ್ರಕೃತಿ ನಮ್ಮ ಭೋಗಕ್ಕಲ್ಲ, ನಮ್ಮ ಬದುಕಿಗೆ. ಗುಬ್ಬಚ್ಚಿ, ಚಿಟ್ಟೆ ಇವುಗಳ ಪರಾಗ ಸ್ಪರ್ಶದಿಂದಲೇ ಹೂವು ಕಾಯಿ ಹಣ್ಣು ನಮಗೆ ದೊರೆಯುತ್ತವೆ. ಹೀಗಾಗಿ ನಮ್ಮ ಆಹಾರ ಮೂಲವಾದ ಕೃಷಿಗೆ ಗೋವೇ ಆಧಾರ. ಗೋವು ಇಲ್ಲದ ಕೃಷಿ ಅಪೂರ್ಣ. ಗೋವು ಕೃಷಿಕನ ಮನೆಯ ಸದಸ್ಯ. ಗೋವಿದ್ದಲ್ಲಿ ಗೋವಿಂದ ಇರುತ್ತಾನೆ. ಪ್ರಕೃತಿ ಗೋವಿನ ರೂಪದಲ್ಲಿ ಸ್ಪಂದಿಸುತ್ತದೆ. ಮನೆ ಪ್ರವೇಶಕ್ಕೆ ಮೊದಲು ಗೋವನ್ನು ತಂದು ಪ್ರವೇಶ ಮಾಡಿಸುತ್ತಾರೆ. ಪ್ರಾಕೃತಿಕ ಅಪಾಯ ಮೊದಲು ತಿಳಿಯುವುದು ಗೋವಿಗೆ. ಪರಿಸರ ನಮ್ಮ ರಕ್ಷಣೆಗಾಗಿ ಜೀವಿಗಳ ರೂಪದಲ್ಲಿ ಕಾಯುತ್ತಿರುತ್ತವೆ. ನಮ್ಮನ್ನು ನಾವು ಪ್ರಕೃತಿಗೆ ಸಹಜವಾಗಿ ತೆರೆದು ಕೊಂಡಷ್ಟು ನಾವು ಶ್ರೀಮಂತರೆನಿಸುತ್ತೇವೆ. ನಾವು ಪರಿಸರ ವನ್ನು ಪ್ರೀತಿಸಿದರೆ ಸಾಧ್ಯ ಎಂದರು.

ಅಜೆಕಾರು ಪದ್ಮಗೋಪಾಲ್‌ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ ಅವರು ಮಾತನಾಡಿ ಕೃಷಿಕರಾದ ನಮ್ಮ ಪೂರ್ವಜರು ಗೋಸಾಕಣೆ, ಬೆಕ್ಕು, ನಾಯಿಗಳನ್ನು ಪ್ರೀತಿಯಿಂದ ಸಾಕುವ ಮೂಲಕ ಪರಿಸರ ಪ್ರೀತಿ ಹೊಂದಿದ್ದರು. ಅದರಿಂದ ಅವರ ಪರಿಸರ ಸುಂದರ ಸ್ವಚ್ಛ ವಾಗಿ ಪ್ರೇಮಮಯವಾಗಿತ್ತು. ಪರಿಸರದಿಂದ ಅವರು ಧೈರ್ಯ, ಆನಂದ, ಸ್ವಸ್ಥರಾಗಿ ದೀರ್ಘಾಯುಗಳೆನಿದರು. ಇದನ್ನು ನಮ್ಮ ವಿದ್ಯಾರ್ಥಿ ಸಮುದಾಯಕ್ಕೆ ತಿಳಿಸಿ ಕೊಡಬೇಕು. ಈಗಿನ ಆಹಾರ, ವಾತಾವರಣ ರೋಗ ಮೂಲವಾಗುತ್ತಿವೆ. ಮಾನಸಿಕ ಸ್ಥೈರ್ಯ ಪ್ರಕೃತಿಯಿಂದ ದೊರೆಯುತ್ತದೆ. ಅನ್ನದಾತ ರೈತನೇ ದೇಶದ ದೊಡ್ಡ ಸಂಪತ್ತು. ಮುನಿಯಾಲು ಗೋಧಾಮದ ಸುಂದರ ಪರಿಸರದಲ್ಲಿ ದೇಶೀಯ ಪ್ರಭೇದಗಳ ಗೋಸಾಕಣೆ, ಅಪರೂಪದ ಮೊಲಗಳು, ವರ್ಣಮಯ ಗಿಳಿಗಳು, ಬಾತುಕೋಳಿ, ಕುದುರೆಗಳು, ಬಾತುಕೋಳಿ, ಉಷ್ಟ್ರಪಕ್ಷಿಗಳಾದಿ ನಾನಾ ಪಕ್ಷಿಗಳು ತುಂಬಿದ ಪರಿಸರ ಒಂದು ಪ್ರಕೃತಿಯ ದೇಗುಲವಾಗಿ ಕಂಡಿತು. ಇಂತಹ ಪರಿಸರದಿಂದ ನಾವು ತಿಳಿದುಕೊಳ್ಳ ಬೇಕಾದುದು ತುಂಬಾ ಇದೆ. ಇದರ ಹಿಂದೆ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಪರಿಶ್ರಮ ಸಾರಥಕವಾಗಿದೆ ಎಂದರು.

ಗೋಧಾಮದ ಡಾ.ಜಿ.ರಾಮಕೃಷ್ಣ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಹಲವು ದೇಶಗಳನ್ನು ಸುತ್ತಿ ಪಡೆದ ಅನುಭವದ ಹಿನ್ನೆಲೆಯಲ್ಲಿ ಈ ಗೋಧಾಮದ ಕನಸನ್ನು ಸು. 35 ಎಕರೆ ಜಾಗದಲ್ಲಿ ನನಸು ಮಾಡಲು ಪ್ರಯತ್ನಿಸಲಾಗಿದೆ. ಇದು ಅಧ್ಯಯನದ ತಾಣವಾಗಿ, ಇತರರಿಗೂ ತಾವು ಪ್ರಕೃತಿಗೆ ಹತ್ತಿರವಾಗುವ ಪ್ರೇರಣೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಗೋಧಾಮದ ಪುಂಗನೂರು ತಳಿಯ ಎರಡು ಕರುಗಳಿಗೆ ವಿಷ್ಣು ಹಾಗೂ ಲಕ್ಷ್ಮೀ ಎಂದು ನಾಮಕರಣ ಮಾಡಲಾಯಿತು.

ಗೋಧಾಮದ ಪರವಾಗಿ ಡಾ.ಸುಧಾಕರ ಶೆಟ್ಟಿ ಅವರನ್ನು ಗೌರವಿಸಲಾಯಿತು. ಜ್ಞಾನ ಸುಧಾ ಶಿಕ್ಷಣ ಸಂಸ್ಥೆಯ ವತಿಯಿಂದ ಗೋಧಾಮದ ಪ್ರವರ್ತಕ ಡಾ. ಜಿ.ರಾಮಕೃಷ್ಣ ಆಚಾರ್ ಅವರನ್ನು ಅಭಿನಂದಿಸಲಾಯಿತು. ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ದಿನೇಶ್ ಎಂ ಕೊಡುವೂರು, ತ್ರಿವಿಕ್ರಮ ಕಿಣಿ, ಡಾ.ಪ್ರಸನ್ನ, ಜ್ಯೋತಿ ಪದ್ಮನಾಭ ಬಂಡಿ ಉಪಸ್ಥಿತರಿದ್ದರು. ದಾಮೋದರ ಶರ್ಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!