ಚುನಾವಣೆಯಲ್ಲಿ ಮೋದಿ ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆ- ರಾಹುಲ್ ಗಾಂಧಿ
ನವದೆಹಲಿ, ಮಾ 31: ಮ್ಯಾಚ್ ಫಿಕ್ಸಿಂಗ್ ಇಲ್ಲದೇ ಬಿಜೆಪಿ ʻ400 ಪಾರ್ʼ ಘೋಷಣೆ ಮಾಡಲು ಸಾಧ್ಯವಿಲ್ಲ. 400 ಸೀಟು ಗೆಲ್ಲಲು ಪ್ರಧಾನಿ ಮೋದಿ ಅಂಪೈರ್‌ಗಳನ್ನ ಆಯ್ಕೆ ಮಾಡಿದ್ದಾರೆ. ಮೋದಿ ಒಬ್ಬರೇ ಈ ಕೆಲಸ ಮಾಡುತ್ತಿಲ್ಲ. ಅವರ ಜೊತೆಗೆ ಕೆಲವು ಉದ್ಯಮಿಗಳೂ ಸೇರಿಕೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಇಡಿ ಬಂಧನ ಖಂಡಿಸಿ ದೆಹಲಿಯ ರಾಮ್‌ಲೀಲಾ ಮೈದಾನದಲ್ಲಿ ಇಂಡಿಯಾ ಒಕ್ಕೂಟದ ʻಪ್ರಜಾಪ್ರಭುತ್ವ ಉಳಿಸಿʼ ಪ್ರತಿಭಟನಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಗೆದ್ದು ಸಂವಿಧಾನವನ್ನ ಬದಲಾಯಿಸಿದ್ರೆ, ದೇಶವೇ ಹೊತ್ತಿ ಉರಿಯುತ್ತದೆ. ಸಂವಿಧಾನ ಹೋದರೆ ಬಡವರ ಹಕ್ಕುಗಳು ಮತ್ತು ಮೀಸಲಾತಿಯೂ ಹೋಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಪ್ರಯತ್ನಗಳಲ್ಲಿ ಯಶಸ್ವಿಯಾದರೆ, ದೇಶದ ಸಂವಿಧಾನವನ್ನು ಬದಲಾಯಿಸುತ್ತದೆ. ಬಡವರ ಹಕ್ಕುಗಳನ್ನು ಹಣವನ್ನು ಕಸಿದುಕೊಳ್ಳುತ್ತಾರೆ, ಸಂವಿಧಾನ ಬದಲಾದ ದಿನವೇ ದೇಶ ಒಡೆದು ಹೋಗುತ್ತದೆ ಎಂದರು.ಇಂತಹ ಚುನಾವಣೆಯನ್ನು ಮ್ಯಾಚ್ ಫಿಕ್ಸಿಂಗ್ ಮಾಡಲಾಗುತ್ತಿದೆ. ವಿಪಕ್ಷಗಳು ಚುನಾವಣೆ ಎದರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತಿದೆ. ನ್ಯಾಯಂಗದ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದ್ದಾರೆ.
ನಮ್ಮ ಮುಂದೆ ಲೋಕಸಭೆ ಚುನಾವಣೆ ಇದೆ. ಅಂಪೈರ್‌ಗಳನ್ನು ಆಯ್ಕೆ ಮಾಡಿದವರು ಯಾರು? ಪಂದ್ಯ ಆರಂಭವಾಗುವ ಮುನ್ನ ಇಬ್ಬರು ಆಟಗಾರರನ್ನು (ಇಬ್ಬರು ಸಿಎಂ) ಬಂಧಿಸಲಾಗಿದೆ. ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಮ್ಯಾಚ್ ಫಿಕ್ಸಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಗುಡುಗಿದ್ದಾರೆ.