ಸುಳ್ಳನ್ನೇ ಸತ್ಯವಾಗಿಸುವ ಕೋಟಗಿಂತ ನುಡಿದಂತೆ ನಡೆಯುವ ಜಯಪ್ರಕಾಶ ಹೆಗ್ಡೆಯವರಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ- ಕಾಂಚನ್

ಉಡುಪಿ: ಸುಳ್ಳನ್ನೇ ಸತ್ಯವಾಗಿಸುವ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿಯವರಿಗಿಂತ ನುಡಿದಂತೆ ನಡೆಯುವ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರಿಂದ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕಳೆದ 10 ವರ್ಷಗಳಲ್ಲಿ ಉಡುಪಿ-ಚಿಕ್ಕಮಂಗಳೂರು ಜನತೆ ದೆಹಲಿಯ ನಾಯಕರನ್ನು ನೋಡಿ ಮತ ಹಾಕಿರುವುದರ ಪರಿಣಾಮ ಉಭಯ ಜಿಲ್ಲೆಗಳು ಯಾವುದೇ ರೀತಿಯ ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗಿಲ್ಲ. ಮೀನುಗಾರರ ಸಮಸ್ಯೆ, ಅಡಿಕೆ ಬೆಳೆಗಾರರ ಸಮಸ್ಯೆ, ಮೂರ್ತೆದಾರರ ಸಮಸ್ಯೆ ಇಂತಹ ಹತ್ತು ಹಲವು ಸಮಸ್ಯೆಗಳಿಗೆ ಪರಿಹಾರವೇ ಸಿಗದೆ ಜನರು ನಲುಗುತ್ತಿದ್ದಾರೆ.

ಉಡುಪಿ ಜಿಲ್ಲೆಯ ಇತಿಹಾಸದ ದೊಡ್ಡ ದುರಂತವಾದ ಸುವರ್ಣ ತ್ರಿಭುಜ ಬೋಟ್ ದುರಂತಕ್ಕೆ ಇಲ್ಲಿಯ ತನಕ ತಾತ್ವಿಕ ಅಂತ್ಯ ಕಾಣಲು, ಇದರ ನಿಜವಾದ ಕಾರಣ ಏನು ಎನ್ನುವುದನ್ನು ಕಂಡು ಹುಡುಕುವಲ್ಲಿ ಹಿಂದಿನ ಸಂಸದೆ ಶೋಭಾ ಕರಂದ್ಲಾಜೆಯವರು ವಿಫಲರಾಗಿದ್ದು ಮೀನುಗಾರ ಸಮುದಾಯಕ್ಕೆ ಮಾಡಿದ ಬಹುದೊಡ್ಡ ಮೋಸವಾಗಿದೆ.

ಜಿಲ್ಲೆಯ ಮಲ್ಪೆ-ಮೊಳಕಾಲ್ಮೂರು ರಾಷ್ಟ್ರೀಯಹೆದ್ದಾರಿಗೆ ಹಿಂದೆ ಸಂಸದರಾಗಿದ್ದ ಕೆ.ಜಯಪ್ರಕಾಶ್ ಹೆಗ್ಡೆ ಕಾಲದಲ್ಲಿ ಮಂಜೂರಾತಿ ಲಭಿಸಿದ್ದರೂ ಇಂದಿಗೂ ಕೂಡ ಕೆಲಸ ಪೂರ್ಣವಾಗದೆ ಕುಂಟುತ್ತಾ ಸಾಗಿದೆ. ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ, ಇಂದ್ರಾಳಿ ರೈಲ್ವೆ ಬ್ರಿಡ್ಜ್ ರಸ್ತೆಯ ಸಮಸ್ಯೆಯನ್ನು ಕೇಳುವವರೇ ಇಲ್ಲದಂತಾಗಿದೆ. ಇದು ಹಿಂದಿನ ಬಿಜೆಪಿ ಸಂಸದರ ವೈಫಲ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಇದಕ್ಕಾಗಿಯೇ ಅವರನ್ನು ಗೋ ಬ್ಯಾಕ್ ಎನ್ನುವ ಮೂಲಕ ಮತ್ತೆ ಈ ಕ್ಷೇತ್ರದ ಅಭ್ಯರ್ಥಿಯಾಗದಂತೆ ನೋಡಿಕೊಳ್ಳಲಾಗಿದೆ.

ಪ್ರಸ್ತುತ ಬಿಜೆಪಿ ಅಭ್ಯರ್ಥಿ ತನ್ನ ಸುಧೀರ್ಘ ರಾಜಕೀಯ ದಾರಿಯಲ್ಲಿ ಹೇಳಿಕೊಳ್ಳುಗವಂತಹ ಯಾವುದೇ ಕೆಲಸಗಳನ್ನು ಮಾಡಿಲ್ಲ ಎನ್ನುವುದು ಜಿಲ್ಲೆಯ ಜನರಿಗೆ ತಿಳಿದಿರುವ ವಿಚಾರ. ಕೇವಲ ಸುಳ್ಳೆ ತಮ್ಮ ಬಂಡವಾಳ ಎಂಬಂತೆ ಕರಾವಳಿಗರಿಗೆ ಕುಚ್ಚಲಕ್ಕಿ ನೀಡುವುದಾಗಿ ಹೇಳಿ ಕಿವಿಯ ಮೇಲೆ ಹೂ ಇಟ್ಟಿದ್ದು ಬಿಟ್ಟರೆ ಇಲ್ಲಿಯ ತನಕ ಕುಚ್ಚಲಕ್ಕಿ ನೀಡಲು ಸಾಧ್ಯವಾಗಿಲ್ಲ. ಅಲ್ಲದೆ ತಾನು ಬಿಲ್ಲವ ಸಮುದಾಯಕ್ಕೆ ಸೇರಿದ್ದು ಅದೇ ಸಮುದಾಯಕ್ಕೆ ಆಗಿಂದಾಗ್ಗೆ ಅನ್ಯಾಯಗಳು ನಡೆದಾಗಲು ಕಣ್ಣು ಮತ್ತು ಕಿವಿಯನ್ನು ಮುಚ್ಚಿಕೊಂಡವರು ಕೋಟ ಶ್ರೀನಿವಾಸ ಪೂಜಾರಿಯವರು. ನಾರಾಯಣ ಗುರುಗಳ ವಿಚಾರವನ್ನು ಪಠ್ಯಪುಸ್ತಕದಿಂದ ಕೈಬಿಟ್ಟಾಗ, ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋ ನಿಷೇಧ ಮಾಡಿದಾಗ ಕೂಡ ಕೋಟ ಶ್ರೀನಿವಾಸ ಪೂಜಾರಿಯವರು ತುಟಿಕ್ ಪಿಟಿಕ್ ಎನ್ನದೆ ಮೌನವಾಗಿದ್ದರು. ಈಗ ತಾನು ಬಿಲ್ಲವ ಎಂದು ಹೇಳಿಕೊಂಡು ಸಿಂಪತಿ ಪಡೆಯಲು ಹೊರಟಿದ್ದು ಜಿಲ್ಲೆಯ ಜನರ ಮತ ಕೇಳಲು ಯಾವುದೇ ನೈತಿಕತೆ ಇಲ್ಲ. ತಾನು ಸಿಂಪಲ್ ರಾಜಕಾರಣಿ ಎಂದು ಹೇಳಿಕೊಂಡು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಮನೆಯೊಂದನ್ನು ತನ್ನ ಹುಟ್ಟೂರಿನಲ್ಲಿ ಕಟ್ಟಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸಿಂಪಲ್ ಎಂಬ ಪದವನ್ನು ಅರ್ಥ ಹೀನ ಮಾಡುತ್ತಿದ್ದಾರೆ ಎನ್ನುವ ಸಂಶಯ ಕಾಡುತ್ತಿದೆ.

ಕಾಂಗ್ರೆಸ್ ಪಕ್ಷ ಈ ಬಾರಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ರಾಜಕೀಯದಲ್ಲಿ ಅಪಾರ ಅನುಭವದೊಂದಿಗೆ ಸಜ್ಜನ ರಾಜಕಾರಣ ಮಾಡಿಕೊಂಡು ಬಂದವರು. ಉಡುಪಿ ಜಿಲ್ಲೆಯ ಉಗಮಕ್ಕೆ ಕಾರಣರಾಗಿದ್ದು ಅಲ್ಲದೆ ಮೀನುಗಾರಿಕಾ ಸಚಿವರಾಗಿ ಉತ್ತಮ ಯೋಜನೆಗಳನ್ನು ನೀಡಿದವರು ಜಯಪ್ರಕಾಶ್ ಹೆಗ್ಡೆ. ಅವರ ಅವಧಿಯಲ್ಲಿ ಮೀನುಗಾರ ಸಮುದಾಯಕ್ಕೆ ಆಗಿರುವ ಉಪಯೋಗ ಇಂದಿಗೂ ಜನರು ಮರೆತಿಲ್ಲ. ಕೇವಲ 2 ವರ್ಷಗಳ ಅವಧಿಗೆ ಸಂಸದರಾಗಿದ್ದರೂ ಕೂಡ ಅತೀ ಹೆಚ್ಚಿನ ಅಭಿವೃದ್ಧಿ ಹಾಗೂ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ಮಾಡುವ ಮೂಲಕ ರಾಜಕೀಯ ಮುತ್ಸದ್ದಿತನ ತೋರಿಸಿದ್ದಾರೆ. ಇನ್ನೊಮ್ಮೆ ಅವರು ಸಂಸದರಾಗಿ ಆಯ್ಕೆಯಾದಲ್ಲಿ ಜಿಲ್ಲೆಯ ಸಮಸ್ಯೆಗಳನ್ನು ಖುದ್ದಾಗಿ ಮುಂದೆ ನಿಂತು ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಲಿದ್ದಾರೆ ಎನ್ನುವುದರಲ್ಲಿ ಇನ್ನೊಂದು ಮಾತಿಲ್ಲ.

ಕೇವಲ ಸಿಂಪಲ್ ಎಂಬ ಟ್ಯಾಗ್ ಲೈನ್ ಬಿಟ್ಟು ನೈಜ ಅಭಿವೃದ್ದಿ ಮಾಡುವ ವ್ಯಕ್ತಿಗಳ ಬಗ್ಗೆ ಎರಡು ಜಿಲ್ಲೆಗಳ ಜನರು ಒಲವು ತೋರಬೇಕಾದ ಅಗತ್ಯವಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!