ಅಯೋಧ್ಯೆಯಲ್ಲಿರುವುದು ‘ಚುನಾವಣಾ ರಾಮ’ನೇ ಹೊರತು ಅಯೋಧ್ಯೆಯ ರಾಮನಲ್ಲ
ಉಡುಪಿ: ಇಂದು ಅಯೋಧ್ಯೆಯಲ್ಲಿರುವುದು ‘ಚುನಾವಣಾ ರಾಮ’ನೇ ಹೊರತು ಅಯೋಧ್ಯೆಯ ರಾಮನಲ್ಲ. ಕೇವಲ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಯೋಧ್ಯೆಯಲ್ಲಿ ತರಾತುರಿಯಿಂದ ರಾಮಮಂದಿರ ಉದ್ಘಾಟನೆ ಮಾಡಲಾಗಿದೆ ಎಂದು ಕೆಪಿಸಿಸಿಯ ನೂತನ ಕಾರ್ಯಾಧ್ಯಕ್ಷರಾದ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿ ಮಂಜುನಾಥ ಭಂಡಾರಿ ಹೇಳಿದ್ದಾರೆ.
ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ದೇಶದಲ್ಲಿ ಆಗಬೇಕಾದ ಎಷ್ಟೊಂದು ಕಾರ್ಯಗಳ ನಡುವೆ ರಾಮಮಂದಿರವನ್ನು ಆದ್ಯತೆಯಲ್ಲಿ ಉದ್ಘಾಟಿಸಲಾಗಿದೆ. ರಾಮನನ್ನು ಹಾಗೂ ರಾಮಮಂದಿರವನ್ನು ಚುನಾವಣೆಗೆ ಬಳಸಬೇಡಿ ಎಂದರು.
ಬಿಜೆಪಿಯವರು ಗ್ಯಾರೆಂಟಿಗೆ ವಾರೆಂಟಿ ಇಲ್ಲ ಅಂದವರು, ಗ್ಯಾರಂಟಿಯನ್ನು ಕಸದ ಬುಟ್ಟಿಗೆ ಹಾಕಿ ಎಂದವರು ಇಂದು ಅವರೇ ತಮ್ಮ ಹೆಸರಿನಲ್ಲಿ, ಗ್ಯಾರಂಟಿ ನೀಡುತಿದ್ದಾರೆ. ನಾವು ಕಳೆದ ಚುನಾವಣೆ ವೇಳೆ ನೀಡಿದ ಗ್ಯಾರಂಟಿ ಭರವಸೆಯನ್ನು ನಂಬಿದ ರಾಜ್ಯದ ಜನರು ನಮಗೆ ಸಂಪೂರ್ಣ ಬಹುಮತದ ಸರಕಾರ ಕೊಟ್ಟಿದ್ದಾರೆ. ಸರಕಾರ ಅಸ್ತಿತ್ವಕ್ಕೆ ಬಂದ ಆರು ತಿಂಗಳಲ್ಲೇ ಎಲ್ಲಾ ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ಶೇ.98ರಷ್ಟು ಜನತೆಗೆ ಗ್ಯಾರೆಂಟಿ ಗಳನ್ನು ತಲುಪಿಸಿದ್ದೇವೆ ಎಂದರು.
ಇದು ನಮ್ಮ ಆತ್ಮವಿಶ್ವಾಸ ಹೆಚ್ವಿಸಿದೆ. ರಾಜ್ಯದ 1.20 ಲಕ್ಷ ಕುಟುಂಬಗಳಿಗೆ 5- 6 ಕೋಟಿ ಜನರಿಗೆ ರಾಜ್ಯದ ಗ್ಯಾರಂಟಿ ತಲುಪಿದ್ದು, ಅವರಿದರ ಫಲಾನುಭವಿಗಳಾಗಿದ್ದಾರೆ. ಶೇ.15 ರಷ್ಟು ಮೂಲಧನವನ್ನು 1.20 ಕೋಟಿ ಕುಟುಂಬಗಳಿಗೆ ವಾಪಾಸ್ ಕೊಟ್ಟಿದ್ದೇವೆ. ಈ ಮೂಲಕ ಸಾರ್ವತ್ರಿಕ ಮೂಲ ಆದಾಯ (ಯುಬಿಐ) ಕೊಟ್ಟಿದ್ದೇವೆ ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಿ ಇದೀಗ ಲೋಕಸಭಾ ಚುನಾವಣೆಗೆ ಹೋಗ್ತಿದ್ದೇವೆ. ಹೀಗಾಗಿ 20ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಗೆಲುವು ಭರವಸೆ ನಮಗಿದೆ. ಅಭಿವೃದ್ಧಿಗೆ ಮತವೇ ಹೊರತು ಉದ್ರೇಕ ಹೇಳಿಕೆಗಳಿಗಲ್ಲ ಎಂದು ಮಂಜುನಾಥ ಭಂಡಾರಿ ಹೇಳಿದರು.
ಬಿಜೆಪಿಗರಿಗೆ ಮಾತನಾಡಲು ಅಭಿವೃದ್ಧಿ ವಿಷಯಗಳಿಲ್ಲದೇ, ರಾಷ್ಟ್ರಪ್ರೇಮ- ರಾಷ್ಟ್ರದ್ರೋಹ ನಡುವಿನ ಚುನಾವಣೆ ಅಂತಾರೆ. ನಾವೇನು ಮಂದಿರ ವಿರೋಧಿಗಳಲ್ಲ…ಕೈ ಕೆಸರಾದರೆ ಬಾಯಿ ಮೊಸರು ನಮ್ಮ ಸಿದ್ದಾಂತ. ನಮ್ಮ ಪಕ್ಷದ ಅಕೌಂಟುಗಳನ್ನು ಸೀಜ್ ಮಾಡುತ್ತಿದ್ದಾರೆ. ನಿಮಗೆ ಯಾಕೆ ಬೇಕು ಈ ಸಣ್ಣತನ ಎಂದು ಖಾರವಾಗಿ ಪ್ರಶ್ನಿಸಿದರು.
ಆರು ದಶಕಗಳ ಕಾಲ ದೇಶದ ಆಡಳಿತ ಮಾಡಿದರೂ ನಮ್ಮಲ್ಲಿ 800 ಕೋಟಿ ರೂ. ಹಣ ಇರಬಹುದು. ಆದರೆ ಕೇವಲ ಹತ್ತು ವರ್ಷ ಆಡಳಿತ ಮಾಡಿ 6,000 ಕೋಟಿ ಹಣ ನಿಮಗೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಭಂಡಾರಿ, ಇವರ ಅಕೌಂಟು ಯಾಕೆ ಸೀಝ್ ಆಗಿಲ್ಲ ಎಂದು ಪ್ರಶ್ನಿಸಿದರಲ್ಲದೇ, ಸೋಲಿನ ಭಯದಲ್ಲಿ ಈ ರೀತಿ ಮಾಡಿದ್ದಾರೆ ಎಂದರು.
ಭ್ರಷ್ಟಾಚಾರಿಗಳನ್ನು ಸ್ವಚ್ಛಗೊಳಿಸಿ ಕ್ಲೀನ್ ಚಿಟ್ ಕೊಡುವ ವಾಷಿಂಗ್ ಮಷೀನ್ ಬಿಜೆಪಿ ಆಗಿದೆ. ವಿರೋಧ ಪಕ್ಷದ ನಾಯಕರನ್ನು ಹುಡುಕಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಇಡಿ, ಸಿಬಿಐ ಬಳಸಿಕೊಂಡು ಈ ರೀತಿ ಮಾಡುತ್ತಿದ್ದಾರೆ. ಎಲೆಕ್ಷನ್ ಬಾಂಡ್ ವಿಶ್ವದ ಅತಿ ದೊಡ್ಡ ಹಗರಣ ಎಂದು ನಿರ್ಮಲಾ ಸೀತಾರಾಮನ್ ಪತಿ ಹೇಳಿದ್ದಾರೆ ಎಂದು ಬಿಜೆಪಿಯನ್ನು ವ್ಯಂಗ್ಯವಾಡಿದರು.
ಬಿಜೆಪಿಗರು ಕಾಂಗ್ರೆಸ್ನ ಯೋಜನೆಗಳ ಹೆಸರು ಬದಲಾಯಿಸಿ ಜಾರಿಗೆ ತಂದಿದ್ದಾರೆ. ಭಾವನಾತ್ಮಕ ಹೇಳಿಕೆ ಕೊಡುತ್ತಾರೆ ಹೊರತು ಅಭಿವೃದ್ದಿ ಬಗ್ಗೆ ಮಾತನಾಡಲ್ಲ. ಹಿಂದುತ್ವ ಅಂದರೆ ಏನು. ನನಗೆ ನಮ್ಮ ತಂದೆ ತಾಯಿ ಹೇಳಿಕೊಟ್ಟ ಹಿಂದುತ್ವ ಗೊತ್ತಿದೆ. ಬುದ್ದ, ಬಸವಣ್ಣ, ಅಂಬೇಡ್ಕರ್ ಹೇಳಿಕೊಟ್ಟ ಹಿಂದುತ್ವ ನಾವು ಪಾಲಿಸುತ್ತೇವೆ. ಭಾವನಾತ್ಮಕ ಹಿಂದುತ್ವಕ್ಕೆ ನಾವು ಹೋಗಲ್ಲ ಒಪ್ಪಿಕೊಳ್ಳಲ್ಲ. ಕೋಮು ಪ್ರಚೋದನೆ ಕೊಡುವ ಹಿಂದುತ್ವ ನಮಗೆ ಬೇಡ ಎಂದರು.
ಪ್ರೀತಿ ಮಾಡುವ, ಅಪ್ಪಿಕೊಳ್ಳುವ ಹಿಂದುತ್ವ, ಗಾಂಧೀಜಿ ಹೇಳಿದ ಹಿಂದುತ್ವವನ್ನು ನಾವು ಒಪ್ಪಿಕೊಂಡಿದ್ದೇವೆ. ಅಪ್ಪಿಕೊಂಡಿ ದ್ದೇವೆ. ಇವರ ಹಿಂದುತ್ವವನ್ನು ಜನ ಒಪ್ಪಿಕೊಂಡಿದ್ದರೆ ಸಿ.ಟಿ.ರವಿ, ಜೀವರಾಜ್ ಯಾಕೆ ಸೋಲಬೇಕಿತ್ತು. ಸುನಿಲ್ ಕುಮಾರ್ ಯಾಕೆ ಅತೀ ಕಡಿಮೆ ಅಂತರದಲ್ಲಿ ಗೆಲ್ಲಬೇಕಿತ್ತು ಎಂದು ಭಂಡಾರಿ ಪ್ರಶ್ನಿಸಿದರು.
ಜಯಪ್ರಕಾಶ್ ಹೆಗ್ಡೆ ಎ.3ಕ್ಕೆ ನಾಮಪತ್ರ
ಎ.6ರಂದು ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಗಳು ಉಡುಪಿಗೆ ಬರುತ್ತಾರೆ. ಸಾರ್ವಜನಿಕ ಸಭೆಯಲ್ಲಿ ಭಾಗವಹಿ ಸಲಿದ್ದಾರೆ. ಸ್ಥಳ ಹಾಗೂ ಉಳಿದ ವಿಷಯಗಳು ಇನ್ನಷ್ಟೇ ನಿರ್ಧಾರವಾಗಬೇಕಿದೆ ಎಂದರು.
ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಅವರು ಎ.3ರಂದು ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಅಂದು ಬೆಳಗ್ಗೆ ಕಾಂಗ್ರೆಸ್ ಭವನದಲ್ಲಿ ಪಕ್ಷದ ಸಭೆ ನಡೆದು 11 ಗಂಟೆ ಸುಮಾರಿಗೆ ಹೆಗ್ಡೆ ಸೇರಿದಂತೆ ಐವರು ಮಣಿಪಾಲಕ್ಕೆ ತೆರಳಿ ನಾಮಪತ್ರ ಸಲ್ಲಿಸುತ್ತೇವೆ. ಈ ವೇಳೆ ಚುನಾವಣಾ ಉಸ್ತುವಾರಿ ಸಚಿವರಾಗಿರುವ ಕೆ. ಜೆ.ಜಾರ್ಜ್ ಉಪಸ್ಥಿತರಿರುವ ಸಾಧ್ಯತೆ ಇದೆ ಎಂದರು.