ಉಡುಪಿ: ಚುನಾವಣಾ ಅಕ್ರಮ- ಸಿ-ವಿಜಿಲ್‌ನಲ್ಲಿ ದೂರು ಸಲ್ಲಿಸಿ, ಶೀಘ್ರದಲ್ಲೇ ಪರಿಹಾರ

ಉಡುಪಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ತಮ್ಮ ನಾಯಕರುಗಳನ್ನು ಆಯ್ಕೆ ಮಾಡಲು ಮತದಾನದ ಮೂಲಕ ಅವಕಾಶಮಾಡಿಕೊಡಲಾಗಿದೆ. ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ, ನ್ಯಾಯಸಮ್ಮತ, ಮುಕ್ತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಯಲು ಸಾರ್ವಜನಿಕರ ಪಾತ್ರ ಬಹುಮುಖ್ಯವಾಗಿದೆ.

ಚುನಾವಣಾ ಅಕ್ರಮಗಳನ್ನು ತಡೆಯಲು ಮಾದರಿ ನೀತಿ ಸಂಹಿತೆ ತಂಡ, ಸೆಕ್ಟರ್ ಅಧಿಕಾರಿಗಳ ತಂಡ, ಪೊಲೀಸ್ ತಂಡ, ಫ್ಲೈಯಿಂಗ್ ಸ್ಕ್ವಾಡ್ ತಂಡ, ವೀಡಿಯೋ ವೀಕ್ಷಣಾ ತಂಡ ಸೇರಿದಂತೆ ಅನೇಕ ತಂಡಗಳನ್ನು ರಚಿಸಲಾಗಿದೆ. ಇದರ ಜೊತೆಗೆ ಚುನಾವಣಾ ಆಯೋಗವು ಸಿ-ವಿಜಿಲ್ (C-Vigil) ಎಂಬ ಆ್ಯಪ್‌ನ್ನು ಸಹ ರೂಪಿಸಿದೆ.

ಚುನಾವಣೆಗೆ ಸಂಬಂಧಿಸಿದಂತೆ ಯಾವುದಾದರೂ ದೂರುಗಳಿದ್ದಲ್ಲಿ ಸಿ-ವಿಜಿಲ್ ಮೂಲಕ ದೂರು ನೀಡಿದ್ದಲ್ಲಿ ತಕ್ಷಣವೇ ಚುನಾವಣಾ ಅಧಿಕಾರಿಗಳು ದೂರಿನ ಬಗ್ಗೆ ಕ್ರಮ ಜರುಗಿಸಲಿದ್ದಾರೆ. ಯಾವುದೇ ಅಭ್ಯರ್ಥಿ ಅಥವಾ ಪಕ್ಷದವರು ಅಥವಾ ಅವರ ಪರವಾಗಿ ಮತದಾರರನ್ನು ಸೆಳೆಯಲು ಹಣ, ಮದ್ಯ, ಉಡುಗೊರೆಗಳನ್ನು ಹಂಚುವುದು ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಚುನಾವಣಾ ಅಧಿಕಾರಿಗಳಿಗೆ ಅಥವಾ ಪೊಲೀಸರಿಗೆ ದೂರು ನೀಡುವುದು ಯಾರಿಗೆ ಅಥವಾ ಹೇಗೆ?, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಗಳನ್ನು ಹೇಗೆ ನಿರ್ಬಂಧಿಸುವುದು ಎಂಬ ಹಲವು ಪ್ರಶ್ನೆಗಳಿಗೆ ಸಿ-ವಿಜಿಲ್ ಆ್ಯಪ್ (ಸಿಟಿಜನ್-ವಿಜಿಲಿಯನ್ಸ್ ಆ್ಯಪ್) ಮೂಲಕ ಬೆರಳ ತುದಿಯ ಬಳಕೆಯೊಂದಿಗೆ ಸ್ಮಾರ್ಟ್‌ಫೋನ್‌ಗಳ ಮೂಲಕ ತಕ್ಷಣವೇ ದೂರು ನೀಡಬಹುದಾಗಿದೆ.

ಸಿ-ವಿಜಿಲ್ ಆ್ಯಪ್ ಡೌನ್‌ಲೋಡ್: ಮೊದಲು ಗೂಗಲ್ ಪ್ಲೇಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್‌ನಿಂದ ಸಿ-ವಿಜಿಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ. ಯಾವುದೇ ಚುನಾವಣಾ ಸಂಬಂಧಿತ ಉಲ್ಲಂಘನೆ ಗಳ ಫೋಟೋಗಳು ಅಥವಾ ವೀಡಿಯೊಗಳನ್ನು ಸೆರೆಹಿಡಿಯಿರಿ. ನಿಮ್ಮ ವರದಿಯನ್ನು ಅಪ್ಲಿಕೇಶನ್ ಮೂಲಕ ಅಪ್‌ಲೋಡ್ ಮಾಡಿ. ಘಟನೆ ಮತ್ತು ಸ್ಥಳದ ವಿವರಗಳನ್ನು ಒದಗಿಸಿ. ನಿಮ್ಮ ವರದಿಯನ್ನು ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ತ್ವರಿತವಾಗಿ ರವಾನಿಸಲಾಗುತ್ತದೆ.

ಸಿ-ವಿಜಿಲ್ ಆ್ಯಪ್ ಕಾರ್ಯ ಹೇಗೆ?: ಆ್ಯಪ್ ಓಪನ್ ಮಾಡಿದಾಗ ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ಹಾಕಿ ರಿಜಿಸ್ಟರ್ ಮಾಡಿ ಕೊಳ್ಳಬೇಕು. ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಹಣ, ಮದ್ಯ, ಉಡುಗೊರೆಗಳನ್ನು ಹಂಚುವ ಸಂದರ್ಭದಲ್ಲಿ ಸಾರ್ವಜನಿಕರು ಫೋಟೋ ಮತ್ತು ವೀಡಿಯೋವನ್ನು (2 ನಿಮಿಷ) ಸೆರೆಹಿಡಿದು ಈ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬಹುದು. ಅಲ್ಲಿನ ವಿಳಾಸವನ್ನು ನಮೂದಿಸ ಬೇಕು. ಜೊತೆಗೆ ಇದು ಸಂಪೂರ್ಣ ಉಚಿತವಾಗಿದೆ.

ಏನೆಲ್ಲಾ ದೂರು ನೀಡಬಹುದು?: ವ್ಯಕ್ತಿಯೊಬ್ಬರು ನಿರ್ದಿಷ್ಟ ವ್ಯಕ್ತಿ ಅಥವಾ ಪಕ್ಷಕ್ಕೆ ಹಣ ವಿತರಣೆ ಮಾಡಿದರೆ, ಉಡುಗೊರೆ, ಮದ್ಯ ಹಂಚಿಕೆ, ಅನುಮತಿ ಪಡೆಯದೇ ಬ್ಯಾನರ್ ಅಥವಾ ಪೋಸ್ಟರ್, ಬೆದರಿಕೆ ಹಾಕುವುದು, ಬಂದೂಕು ಪ್ರದರ್ಶನ, ಧಾರ್ಮಿಕ ಅಥವಾ ಕೋಮು ಕುರಿತು ಪ್ರಚೋದನಕಾರಿ ಭಾಷಣ, ಮತಗಟ್ಟೆಯ 200ಮೀ. ಪ್ರದೇಶದಲ್ಲಿ ನಿಷೇಧದ ಅವಧಿಯಲ್ಲೂ ಪ್ರಚಾರ, ಮತದಾನದ ದಿನದಂದು ಮತದಾರರನ್ನು ಸಾಗಿಸುವುದು. ಹೀಗೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳು ಕಂಡು ಬಂದಲ್ಲಿ ಈ ಆ್ಯಪ್‌ನಲ್ಲಿ ತಕ್ಷಣವೇ ದೂರು ಸಲ್ಲಿಬಹುದು.

100 ನಿಮಿಷಗಳ ಒಳಗೆ ಕ್ರಮ: ಆ್ಯಪ್‌ನಲ್ಲಿ ದಾಖಲಿಸುವ ದೂರುಗಳ ಬಗ್ಗೆ ಜಿಲ್ಲಾ ಮಟ್ಟದ ಸಿ-ವಿಜಿಲ್ ನೋಡೆಲ್ ಅಧಿಕಾರಿ ಗಳು ದೂರಿಗೆ ಸಂಬಂಧಿಸಿದಂತೆ ಆ ಕ್ಷೇತ್ರ ವ್ಯಾಪ್ತಿಯ ಎಫ್‌ಎಸ್‌ಟಿ ತಂಡದವರಿಗೆ ಕ್ರಮ ಕೈಗೊಳ್ಳಲು ಕಳುಹಿಸಿ ಕೊಡುತ್ತಾರೆ. ಅವರು ಸಾರ್ವಜನಿಕರ ದೂರುಗಳಿಗೆ 100 ನಿಮಿಷಗಳ ಒಳಗೆ ಕ್ರಮ ಕೈಗೊಳ್ಳುತ್ತಾರೆ. ಇದರಿಂದ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರ ಆಮಿಷಗಳು ಸಾಕ್ಷಿ ಸಮೇತ ದಾಖಲಾಗಲಿವೆ.

ದೂರಿನೊಂದಿಗೆ ಸೆರೆಡಿಯಲಾದ ಜಿಪಿಎಸ್ ಮಾಹಿತಿಯು ಅದನ್ನು ಸಂಬಂಧಪಟ್ಟ ಜಿಲ್ಲಾ ನಿಯಂತ್ರಣ ಕೊಠಡಿಗೆ ಸ್ವಯಂ ಚಾಲಿತವಾಗಿ ಫ್ಲಾಗ್ ಮಾಡುತ್ತದೆ. ಫ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ರವಾನಿಸಲು ಇದು ಅನುವು ಮಾಡಿಕೊಡುತ್ತದೆ.

ಉಡುಪಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಈಗಾಗಲೇ ಕಂಟ್ರೋಲ್ ರೂಂ ಮತ್ತು ಸಿ-ವಿಜಿಲ್ ತಂಡ ಕಾರ್ಯನಿರ್ವಹಿಸುತಿದೆ. ಮಾದರಿ ನೀತಿ ಸಂಹಿತೆ ಜಾರಿಯಾದಾಗಿನಿಂದ ಇಲ್ಲಿಯ (ಮಾ.30) ವರೆಗೆ ಒಟ್ಟು 245 ದೂರುಗಳು ಸಿ-ವಿಜಿಲ್ ಮುಖಾಂತರ ದಾಖಲಾಗಿದ್ದು, ಎಲ್ಲಾ 245 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.

ವಿಳಾಸ ಗೌಪ್ಯ: ದೂರು ನೀಡುವಾಗ ದೂರುದಾರರ ಹೆಸರು, ವಿಳಾಸವನ್ನು ಗೌಪ್ಯವಾಗಿ ಇಡಲಾಗುತ್ತದೆ. ಚುನಾವಣೆ ಮುಗಿಯುವವರೆಗೂ ಮೂರು ಪಾಳಿಗಳಲ್ಲಿ ದಿನದ 24 ಗಂಟೆಯೂ ಚುನಾವಣಾ ಸಿಬ್ಬಂದಿ ಕಾರ್ಯ ನಿರ್ವಹಿಸುವರು ಎಂದು ಜಿಲ್ಲಾ ಸಿ-ವಿಜಿಲ್ ನೋಡೆಲ್ ಅಧಿಕಾರಿ ಯಾಗಿರುವ ಕುಮಾರ್ ಬಿ.ಆರ್ ತಿಳಿಸಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯ ಯುತವಾಗಿ ನಡೆಸಲು ಯಾವುದೇ ಚುನಾವಣೆ ಅಕ್ರಮ ಹಾಗೂ ಆಮಿಷ ಗಳನ್ನು ತಡೆಯಲು ಸಿ-ವಿಜಿಲ್ ಬಳಸುವ ಮೂಲಕ ಎಲ್ಲರೂ ಒಟ್ಟಾಗಿ ಕಾರ್ಯ ನಿರ್ವಹಿಸಿ, ಪ್ರಜಾಪ್ರಭುತ್ವ ವನ್ನು ದೃಢಗೊಳಿಸೋಣ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!