ದೆಹಲಿ: ಬಿಜೆಪಿ ತೊರೆದ ತೇಜಸ್ವಿನಿ ಗೌಡ ಮತ್ತೆ ಕಾಂಗ್ರೆಸ್ಗೆ ಮರು ಸೇರ್ಪಡೆ
ನವ ದೆಹಲಿ: ಲೋಕಸಭೆ ಚುನಾವಣೆಯ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ MLC ತೇಜಸ್ವಿನಿ ಗೌಡ ಶನಿವಾರ ಬಿಜೆಪಿ ತೊರೆದು ದೆಹಲಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ವಿಧಾನ ಪರಿಷತ್ ಮಾಜಿ ಸದಸ್ಯೆ ತೇಜಸ್ವಿನಿ ಗೌಡ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆಯಾಗುವ ಮೂಲಕ ಘರ್ ವಾಪಸಿ ಮಾಡಿದ್ದಾರೆ. ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ಜೈರಾಮ್ ರಮೇಶ್, ಪವನ್ ಖೇರಾ ಸಮ್ಮುಖದಲ್ಲಿ ಸೇರ್ಪಡೆಯಾದರು.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡಿದ್ದೇನೆ. ಬಿಜೆಪಿಗೆ ರಾಜಕೀಯ ಬರಗಾಲ ಇತ್ತು ಆಗ ನಾನು ಬಿಜೆಪಿ ಸೇರಿದ್ದೆ. ನರೇಂದ್ರ ಮೋದಿಯವರು ಗುಜರಾತ್ ಸಿಎಂ ಆಗಿದ್ದರು, ಪ್ರಧಾನಿ ಆಗಿರಲಿಲ್ಲ. ಈಗ ಬಿಜೆಪಿ ಸಮೃದ್ಧವಾಗಿದೆ, ಬಿಜೆಪಿ ಬಿಟ್ಟು ಬಂದಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ನಿಜವಾಗಲು ಬರಗಾಲ ಇದೆ, ಕಷ್ಟದ ಪರಿಸ್ಥಿತಿ ಇದೆ. ಡಿಕೆ ಶಿವಕುಮಾರ್ ಅವರು ಒಕ್ಕಲಿಗ ಸಮುದಾಯ ನಾಯಕ. ಬಿಜೆಪಿಯಲ್ಲಿರುವ ಒಕ್ಕಲಿಗ ಸಮುದಾಯದ ನಾಯಕರನ್ನು ತುಳಿಯಲಾಗಿದೆ. ಪ್ರತಾಪ್ ಸಿಂಹ, ಸಿ.ಟಿ.ರವಿ, ಸದಾನದಂದಗೌಡರಿಗೆ ಟಿಕೆಟ್ ಕೊಟ್ಟಿಲ್ಲ. ಎಲ್ಲಾ ಮ್ಯಾಚ್ ಫಿಕ್ಸ್ ಮಾಡಿಕೊಂಡು ಪಕ್ಷ ಸಂಘಟನೆ ಮಾಡಿಲ್ಲ. ಕಾಂಗ್ರೆಸ್ ನಲ್ಲಿ ನನಗೆ ಏನೇ ಜವಾಬ್ದಾರಿ ಕೊಟ್ಟರೂ ಮಾಡುತ್ತೇನೆ. ಡಿ.ಕೆ ಸುರೇಶ್ ಅವರ ಪರವಾಗಿಯೂ ಕೆಲಸ ಮಾಡುತ್ತೇನೆ. ರಾಜ್ಯದ 28 ಕ್ಷೇತ್ರಗಳಲ್ಲಿಯೂ ಪ್ರಚಾರ ಮಾಡುತ್ತೇನೆ ಎಂದರು.
ತೇಜಸ್ವಿನಿ ಗೌಡ ಅವರು 2004ರಲ್ಲಿ ಕಾಂಗ್ರೆಸ್ ಟಿಕೆಟ್ನಿಂದ ಕನಕಪುರ ಲೋಕಸಭೆ ಇಂದಿನ ಈಗಿನ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ ಅವರನ್ನು ಸೋಲಿಸಿದ್ದರು.