ಭಾರತ್ ಕೋ ಆ.ಬ್ಯಾಂಕ್ ಸ್ಥಾಪಕ, ಬಿಲ್ಲವ ಮುಖಂಡ ಜಯ ಸಿ. ಸುವರ್ಣ ಇನ್ನಿಲ್ಲ
ಮಂಗಳೂರು: (ಉಡುಪಿ ಟೈಮ್ಸ್ ವರದಿ)ಬಿಲ್ಲವ ಭವನ ಮುಂಬಯಿ ಮತ್ತು ಭಾರತ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪಕ ಜಯ ಸಿ. ಸುವರ್ಣ(75) ಮಂಗಳವಾರ ತಡರಾತ್ರಿ ಅಲ್ಪಕಾಲದ ಅಸೌಖ್ಯದಿಂದ ಮೃತರಾದರು.
ಮೂಲತಃ ಮೂಲ್ಕಿಯವರಾಗಿದ್ದು, ಚಿಕ್ಕಂದಿನಲ್ಲೇ ಮುಂಬೈಗೆ ತೆರಳಿ ತಮ್ಮ ಶ್ರಮದಿಂದ ಹೋಟೆಲ್ ಉದ್ಯಮ ಕಟ್ಟಿದವರು. ಮುಂಬೈನಲ್ಲಿ ಮಾತ್ರವಲ್ಲದೆ ಹಲವೆಡೆ ಬಿಲ್ಲವರ ಯೂನಿಯನ್ ಸ್ಥಾಪಿಸಿ ಏಳಿಗೆಗೆ ಕಾರಣರಾದವರು.
ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಮುಂಬಯಿ ಭಾರತ್ ಕೋ-ಅಪರೇಟಿವ್ ಬ್ಯಾಂಕ್ ನ ಅಧ್ಯಕ್ಷರಾಗಿ, ಅಭಿವೃದ್ಧಿಯ ರೂವಾರಿಯಾಗಿದ್ದರು.
ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಗೆ ಜನಾರ್ಧನ್ ಪೂಜಾರಿಯವರೊಂದಿಗೆ ಕೈಜೋಡಿಸಿದವರು ಸುವರ್ಣರು, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಸ್ಥಾಪಕಾಧ್ಯಕ್ಷರು, ಬಿಲ್ಲವ ಸಮುದಾಯದ ಸುಧಾರಣೆಗೆ ಬಹಳಷ್ಟು ಶ್ರಮಿಸಿದ ಸುವರ್ಣರು ಪತ್ನಿ, ನಾಲ್ವರು ಪುತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು (ಅ.21) ಮಧ್ಯಾಹ್ನ 3 ಗಂಟೆಗೆ ಮುಂಬೈಯಲ್ಲಿ ನಡೆಯಲಿದೆ.