ಬೈಂದೂರು ಅಭಿವೃದ್ಧಿ ಸಹಿಸದ ಕಾಂಗ್ರೆಸ್ ನಿಂದ ಸುಳ್ಳು ಆರೋಪ: ಸುಕುಮಾರ್ ಶೆಟ್ಟಿ

ಬೈಂದೂರು: ‘ಕಾರ್ಯಕರ್ತರೊಂದಿಗೆ ಕ್ಷೇತ್ರದ ಮೂಲೆಮೂಲೆಗೂ ಸಂಚರಿಸಿ ಪಕ್ಷ ಸಂಘಟನೆ ಮಾಡಿದ್ದರಿಂದಾಗಿ ಕಾಂಗ್ರೆಸ್‌ ಪಕ್ಷದ ಭದ್ರಕೋಟೆಯಾಗಿದ್ದ ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿಗೆ ಒಲಿದಿದೆ. ಅಭಿವೃದ್ಧಿಯನ್ನು ಸಹಿಸದ ಕಾಂಗ್ರೆಸ್ ಮುಖಂಡರು ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ಅದು ಚುನಾವಣಾ ಗಿಮಿಕ್‌’ ಎಂದು ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಹೇಳಿದರು. 

ಚಿತ್ತೂರಿನಲ್ಲಿ ಮಂಗಳವಾರ ನಡೆದ ಬೈಂದೂರು ಬಿಜೆಪಿ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು. ‘ಶಾಸಕನಾದ ಬಳಿಕ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಸಂಸದ ಬಿ.ವೈ.ರಾಘವೇಂದ್ರ ಅವರ ಸಹಕಾರದಲ್ಲಿ ಕಾರ್ಯಗಳು ನಡೆಯುತ್ತಿವೆ’ ಎಂದರು.

ಬಿಜೆಪಿ ಜಿಲ್ಲಾ ಸಮಿತಿ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯ್ಕ್‌ ಮಾತನಾಡಿ, ‘ಗ್ರಾಮ ಮಟ್ಟದಿಂದ ಕೇಂದ್ರದವರೆಗೂ ಅಧಿಕಾರದಲ್ಲಿರುವ ಬಿಜೆಪಿ ರಾಜಕೀಯವಾಗಿ ಇದೇ ರೀತಿ ಮುಂದುವರೆಯಬೇಕಾದರೆ, ವಿಶೇಷ ಕಾರ್ಯಕಾರಿಣಿಗಳನ್ನು ನಡೆಸಿ, ಶಕ್ತಿ ತುಂಬುವ ಅಗತ್ಯ ಇದೆ’ ಎಂದರು.

ಮೂಡುಬಿದಿರೆ ಶಾಸಕ ಉಮನಾಥ ಕೋಟ್ಯಾನ್‌, ಬಿಜೆಪಿ ವಿಭಾಗ ಪ್ರಭಾರಿ ಉದಯ್ ‌ಕುಮಾರ ಶೆಟ್ಟಿ, ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಮಂಡಲ ಪ್ರಭಾರಿ ಶ್ರೀಶ ನಾಯಕ್, ಮೀನುಗಾರ ಮುಖಂಡ ಎ.ಆನಂದ ಖಾರ್ವಿ, ಸಂಸಾಡಿ ಅಶೋಕ ಕುಮಾರ ಶೆಟ್ಟಿ ಇದ್ದರು. ವಿನೋದ್ ಭಂಡಾರಿ ಸ್ವಾಗತಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ್ ಪೂಜಾರಿ ಜೆಡ್ಡು ವಂದಿಸಿದರು, ರಾಜ್ಯ ಯೋಜನಾ ಸಮಿತಿ ಸದಸ್ಯೆ ಪ್ರಿಯಾದರ್ಶಿನಿ ದೇವಾಡಿಗ ನಿರೂಪಿಸಿದರು. ಕೊಡೇರಿ ಬಂದರು ದೋಣಿ ದುರಂತದಲ್ಲಿ ನಿಧನರಾದ ಮೀನುಗಾರರಿಗೆ ಹಾಗೂ ಪಕ್ಷದ ಪ್ರಮುಖರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕುಂದಾಪುರ : ‘ವಂಡ್ಸೆಯಲ್ಲಿ ಹೊಲಿಗೆ ಕೇಂದ್ರವನ್ನು ನಡೆಸುತ್ತಿದ್ದ ಸ್ವಾವಲಂಬಿ ಮಹಿಳೆಯರನ್ನು  ಬೀದಿಗೆ ಹಾಕಿಲ್ಲ. ಜಿಲ್ಲಾ ಆರೋಗ್ಯ ಅಧಿಕಾರಿ ಜೊತೆ ಚರ್ಚಿಸಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದೇವೆ’ ಎಂದು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಹೇಳಿದರು.

ಮಂಗಳವಾರ ಚಿತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ 29 ಗ್ರಾಮಗಳಿಗೆ ಅವಶ್ಯವಿರುವ ನಾಡಕಚೇರಿಯನ್ನು ಜನರಿಗೆ ಅನೂಕೂಲವಿರುವಂತಹ ಜಾಗದಲ್ಲಿ ಮಾಡಲಾಗಿದೆ. ಹೊಸ ನಾಡ ಕಚೇರಿ ಮಂಜೂರಾಗಿದ್ದರೂ, ಕಾಂಗ್ರೆಸ್ ಪಕ್ಷದ ದ್ವೇಷದ ರಾಜಕಾರಣದಿಂದ ತಡೆಯಾಜ್ಞೆ ತಂದು ಜನರಿಗೆ ಅನೂಕೂಲವಾಗುವುದನ್ನು ತಪ್ಪಿಸಲಾಗಿದೆ. ಸ್ವಾವಲಂಬನಾ ಹೊಲಿಗೆ ಕೇಂದ್ರದ ಸ್ಥಳಾಂತರದ ವಿಷಯದಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿಯವರು ರಾಜಕೀಯ ಮಾಡುತ್ತಿದ್ದು, ಇದು ಅವರಿಗೆ ಶೋಭೆ ತರುವಂಥದ್ದಲ್ಲ’ ಎಂದರು. ‘ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯ ಪ್ರಯುಕ್ತ ಈ ರಾಜಕೀಯ ನಡೆಯುತ್ತಿದ್ದು, ಈ ಬಾರಿ ವಂಡ್ಸೆಯಲ್ಲಿಯೂ ಬಿಜೆಪಿ ಪಕ್ಷದ ಬೆಂಬಲಿತರು ಅಧಿಕಾರಕ್ಕೆ ಬರಲಿದ್ದಾರೆ’ ಎಂದು ಹೇಳಿದರು.  ‘ಕೊರೊನಾ ಚಿಕಿತ್ಸೆಗೆ ಸರ್ಕಾರಕ್ಕೆ ಬಿಲ್‌ ನೀಡಿರುವುದಾಗಿ ದೂರಿದ್ದಾರೆ. ಆದರೆ ಬಿಲ್‌ ನೀಡಿರುವುದು ನನ್ನ ಕಣ್ಣಿನ ಶಸ್ತ್ರ ಚಿಕಿತ್ಸಾ ವೆಚ್ಚಕ್ಕೆ. ಆರೋಗ್ಯದ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಪಡೆಯುವ ಅವಕಾಶ ಶಾಸಕರಿಗೆ ಇದೆ. ಶಾಸಕರಾಗಿದ್ದ ಗೋಪಾಲ ಪೂಜಾರಿಯವರಿಗೆ ಇದು ಗೊತ್ತಿಲ್ಲದೆ ಇರುವುದು ವಿಪರ್ಯಾಸ’ ಎಂದು ತಿರುಗೇಟು ನೀಡಿದರು.

‘ಸೌಕೂರು ಯೋಜನೆ ನಮ್ಮದೇ ಶ್ರಮ’
‘ಸೌಕೂರು ಏತ ನೀರಾವರಿ ಯೋಜನೆ ನಾವೂ ಮಾಡಿದ್ದು ಎಂದು ಮಾಜಿ ಶಾಸಕ ಗೋಪಾಲ ಪೂಜಾರಿ ಹೇಳಿದ್ದಾರೆ. ಆದರೆ ಅವರು ಪ್ರಾಸ್ತಾವ ಮಾತ್ರ ಮಾಡಿದ್ದರು. ಯೋಜನೆಯನ್ನು ಮಂಜೂರು ಮಾಡಿಸಿರುವುದು ನಾನು ಮತ್ತು ಸಂಸದ ಬಿ.ವೈ ರಾಘವೇಂದ್ರ ಅವರು. ಬೈಂದೂರಿನ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಈಗಾಗಲೇ ₹1350 ಕೋಟಿ ಅನುದಾನ ಬಂದಿದೆ. ವಿಮಾನ ನಿಲ್ದಾಣ ಕೇಂದ್ರ ಸೇರಿದಂತೆ ಈ ಹಿಂದೆ ಭರವಸೆ ನೀಡಿದ್ದ ಎಲ್ಲ ಯೋಜನೆಗಳ ಅನುಷ್ಠಾನಕ್ಕೂ ಪ್ರಯತ್ನ ನಡೆಯುತ್ತಿದೆ. ಮಾಜಿ ಶಾಸಕ ಗೋಪಾಲ ಪೂಜಾರಿ  ಅವರ ಎಲ್ಲ ದೂರುಗಳಿಗೂ ನನ್ನ ಬಳಿ ದಾಖಲೆ ಇದ್ದು, ಎಲ್ಲಿ ಬೇಕಾದರೂ ಒದಗಿಸಲು ನಾನು ಸಿದ್ದನಿದ್ದೇನೆ’ ಎಂದು ಶಾಸಕ ಸುಕುಮಾರ ಶೆಟ್ಟಿ ತಿಳಿಸಿದರು. 

Leave a Reply

Your email address will not be published. Required fields are marked *

error: Content is protected !!