ಬಿಜೆಪಿ 4,600 ಕೋಟಿ ರೂ.ದಂಡಕ್ಕೆ ಅರ್ಹ, ಐಟಿ ಇಲಾಖೆ ಕ್ರಮ ತೆಗೆದುಕೊಳ್ಳುತ್ತದೆಯೇ?: ಕಾಂಗ್ರೆಸ್ ಪ್ರಶ್ನೆ
ಹೊಸದಿಲ್ಲಿ: 2017-18ರಲ್ಲಿ, 1,297 ವ್ಯಕ್ತಿಗಳಿಂದ ಪಡೆದುಕೊಂಡಿರುವ 42 ಕೋಟಿ ರೂಪಾಯಿ ಮೊತ್ತದ ನಿಧಿಗೆ ಬಿಜೆಪಿಯು ವಿವರಗಳನ್ನು ಸಲ್ಲಿಸಿಲ್ಲ, ಇದು ಜನತಾ ಪ್ರಾತಿನಿಧ್ಯ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಖಜಾಂಚಿ ಅಜಯ್ ಮಾಕೆನ್ ಹೇಳಿದರು. ಅದಕ್ಕಾಗಿ ಆದಾಯ ತೆರಿಗೆ ಇಲಾಖೆಯು ಆ ಪಕ್ಷಕ್ಕೆ 4,600 ಕೋಟಿ ರೂಪಾಯಿ ದಂಡ ವಿಧಿಸ ಬೇಕು’ಎಂದು ಅವರು ಹೇಳಿದರು. ಈ ಮೊತ್ತದಲ್ಲಿ ಕಳೆದ ಏಳು ವರ್ಷಗಳ ಬಡ್ಡಿಯೂ ಒಳಗೊಂಡಿದೆ ಎಂದರು.
ಈ ನೋಟಿಸನ್ನು ಕಾಂಗ್ರೆಸ್ ಮುಂದಿನ ವಾರ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಿದೆ ಎಂದು ಮಾಕೆನ್ ನುಡಿದರು.
ಯಾವ ನ್ಯಾಯಾಲಯವೂ ಏನೂ ಹೇಳುತ್ತಿಲ್ಲ. ಚುನಾವಣಾ ಆಯೋಗ ಮೌನವಾಗಿದೆ. ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆಹೊತ್ತಿರುವ ಇತರ ಯಾವ ಸಂಸ್ಥೆಗಳೂ ಮಾತನಾಡುತ್ತಿಲ್ಲ. ಭಾರತೀಯರಿಂದ ಅವರ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದರೋಡೆಗೈಯಲಾಗುತ್ತಿದೆಂದು ಅವರು ಹೇಳಿದರು.
8,200 ಕೋಟಿ ರೂ. ಬಾಂಡ್ ಹಗರಣದ ತನಿಖೆ ಮಾಡಿ:
‘‘ಚುನಾವಣಾ ಬಾಂಡ್ ಗಳ ಹಗರಣ’’ದ ಮೂಲಕ ಬಿಜೆಪಿಯು 8,200 ಕೋಟಿ ರೂಪಾಯಿ ಸಂಗ್ರಹಿಸಿದೆ. ಇದಕ್ಕಾಗಿ ಪಕ್ಷವು ‘‘ಪ್ರಿ-ಪೇಡ್, ಪೋಸ್ಟ್ ಪೇಡ್, ಪೋಸ್ಟ್-ರೇಡ್ ಲಂಚಗಳು ಮತ್ತು ಶೆಲ್ ಕಂಪೆನಿಗಳ ಮಾರ್ಗಗಳನ್ನು ಅನುಸರಿಸಿದೆ’’ ಎಂದು ಜೈರಾಮ್ ರಮೇಶ್ ಆರೋಪಿಸಿದರು.
ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ಕರೆ:
1,823 ಕೋಟಿ ರೂಪಾಯಿ ದಂಡ ಕಟ್ಟುವಂತೆ ಸೂಚಿಸಿ ಆದಾಯ ತೆರಿಗೆ ಇಲಾಖೆ ಕಳುಹಿಸಿರುವ ನೋಟಿಸ್ ಗಳ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ಕಾಂಗ್ರೆಸ್ ಘೋಷಿಸಿದೆ.
ಶನಿವಾರ ಮತ್ತು ರವಿವಾರ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಪ್ರಧಾನ ಕಚೇರಿಗಳ ಆವರಣದಲ್ಲಿ ಧರಣಿ ನಡೆಸುವಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣು ಗೋಪಾಲ್ ಎಲ್ಲಾ ರಾಜ್ಯ ಘಟಕಗಳಿಗೆ ಸೂಚನೆ ನೀಡಿದ್ದಾರೆ.
ಮಹತ್ವದ ಲೋಕಸಭಾ ಚುನಾವಣೆಯ ಮುನ್ನ ನಮ್ಮ ಪಕ್ಷದ ವಿರುದ್ಧ ನಡೆಸಲಾಗುತ್ತಿರುವ ತೆರಿಗೆ ಭಯೋತ್ಪಾದನೆ ಮತ್ತು ಪ್ರಜಾಪ್ರಭುತ್ವದ ಮೇಲೆ ನಡೆಯುತ್ತಿರುವ ಅವ್ಯಾಹತ ದಾಳಿಯ ಹಿನ್ನೆಲೆಯಲ್ಲಿ, ಶನಿವಾರ ಮತ್ತು ರವಿವಾರ ರಾಜ್ಯ ಮತ್ತು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಚೇರಿಗಳ ಆವರಣಗಳಲ್ಲಿ ಬೃಹತ್ ಪ್ರದರ್ಶನಗಳನ್ನು ನಡೆಸುವಂತೆ ಎಲ್ಲಾ ಪ್ರದೇಶ ಕಾಂಗ್ರೆಸ್ ಸಮಿತಿಗಳಿಗೆ ಮನವಿ ಮಾಡಲಾಗಿದೆ. ನಮ್ಮ ಪಕ್ಷದ ಅಭ್ಯರ್ಥಿಗಳ ನೇತೃತ್ವದಲ್ಲಿ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಬೃಹತ್ ಪ್ರತಿಭಟನೆಗಳು ನಡೆಯಬೇಕು ಎಂದು ಅವರು ಹೇಳಿದ್ದಾರೆ.