ಮಂಗಳೂರು ‘ಸೌಜನ್ಯಗಳಿಗಾಗಿ ನೋಟಾ’ ಚಳವಳಿ ಪ್ರಾರಂಭ- ರಾಜಕೀಯ ಲೆಕ್ಕಾಚಾರ ಬುಡಮೇಲು!
ಮಂಗಳೂರು: ದಕ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ನೋಟಾ ಅಭಿಯಾನದ ಘೋಷಣೆಯ ಸದ್ದು ಕೇಳಿಬರುತ್ತಿದೆ…
ಈ ಬಾರಿ ನಾವು ಯಾವ ಅಭ್ಯರ್ಥಿಗೂ ಮತ ನೀಡುವುದಿಲ್ಲ ನಮ್ಮ ಮತ ‘ನೋಟಾ’ಗೆ ಎಂದು ಸೌಜನ್ಯ ಪರ ಹೋರಾಟಗಾರರು ಮತ್ತು ಸೌಜನ್ಯ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಲಕ್ಷಾಂತರ ಮಂದಿ ಹೇಳುತ್ತಿದ್ದಾರೆ.
ಆ ಮೂಲಕ ಮಂಗಳೂರು ಲೋಕಸಭಾ ಕ್ಷೇತ್ರ ಹೊಸದೊಂದು ಹೋರಾಟಕ್ಕೆ ಸಾಕ್ಷಿಯಾಗಿದೆ. ನಮ್ಮ ಮತ NOTA ಗಾಗಿ (None of the above) ಎನ್ನುವ ನಿರ್ಧಾರಕ್ಕೆ ಕರಾವಳಿಯ ಜನ ಬಂದಿದ್ದಾರೆ. ಯಾವ ಅಭ್ಯರ್ಥಿಗಳು ಕೂಡಾ ತನಗೆ ಸೂಕ್ತ ಅಲ್ಲ ಅನ್ನುವ ಸಂದರ್ಭದಲ್ಲಿ ‘ನೋಟಾ’ ಮತ ಚಲಾಯಿಸಲಾಗುತ್ತದೆ.
ಈಗಾಗಲೇ ದೇಶಾದ್ಯಂತ ಪ್ರತಿಭಟನೆ ಮೂಲಕ ಧರ್ಮಸ್ಥಳದಲ್ಲಿ ಸೌಜನ್ಯ ಎಂಬ ಒಕ್ಕಲಿಗ ಹುಡುಗಿಯನ್ನು ಬರ್ಬರ ಹತ್ಯೆಯ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಲಾಗಿತ್ತು.
ಈ ಕೊಲೆಯನ್ನು ಮುಚ್ಚಿ ಹಾಕಲು ಧರ್ಮಸ್ಥಳದ ಪಟ್ಟ ಭದ್ರ ಹಿತಾಸಕ್ತಿಗಳು ಕಳೆದ 12 ವರ್ಷಗಳಿಂದ ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ನಮಗೆ ಈ ಸಲ ಯಾವ ರಾಜಕೀಯ ಪಕ್ಷವೂ ಬೇಡ, ಸೌಜನ್ಯ ಹೋರಾಟಕ್ಕೆ ಬೆಂಬಲ ಕೊಡುವ ಪಕ್ಷ ಯಾವುದೂ ಇಲ್ಲದೆ ಹೋದರೂ ಸರಿ, ನಾವು ದೇಶದಲ್ಲಿ ಒಂದು ವಿಶಿಷ್ಟವಾದಂತಹ ಹೋರಾಟವನ್ನು ಕೈಗೊಳ್ಳುತ್ತಿದ್ದೇವೆ. ಈ ಸಲ ಲಕ್ಷಾಂತರ ಮತಗಳನ್ನು ನೋಟಾಗೆ ಹಾಕಿಸುವ ಮೂಲಕ ದೇಶದ ಸಂಸತ್ತನ್ನು, ದೇಶದ ಹಲವಾರು ರಾಜ್ಯಗಳ ಹೋರಾಟಗಾರರನ್ನು, ಸುಪ್ರೀಂಕೋರ್ಟ್ ನ್ನು ಮತ್ತು ವಿದೇಶಗಳ ಸರ್ಕಾರಗಳನ್ನು ಕೂಡಾ ಗಮನ ಸೆಳೆಯಬೇಕು ಎನ್ನುವ ಉದ್ದೇಶದಿಂದ ಸೌಜನ್ಯಾಳಿಗಾಗಿ ನೋಟ ಅಭಿಯಾನ ದೊಡ್ಡದಾಗಿ ಶುರುವಾಗಿದೆ.
ಕಳೆದ ಸಲ ಬಿಜೆಪಿಯ ನಳಿನ್ ಕುಮಾರ್ ಕಟೀಲ್ 7,74,284 ಮತಗಳನ್ನು ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಮಿಥುನ್ ರೈ (ಪಡೆದ ಮತ 4,99,664) ವಿರುದ್ಧ 2,74,621 ಮತಗಳ ಅಂತರದಿಂದ ವಿಜಯಿಯಾಗಿದ್ದರು. ಇಲ್ಲಿಯತನಕ ಸೌಜನ್ಯ ಹೋರಾಟದಲ್ಲಿ ಸಕ್ರಿಯರಾಗಿ ಪಾಲ್ಗೊಂಡವರ ಸಂಖ್ಯೆ ಏಳು ಲಕ್ಷಕ್ಕೂ ಅಧಿಕವಿದೆ ಅನ್ನೋ ಮಾಹಿತಿಯಿದೆ. ಈ ಅಂಕಿ ಅಂಶವನ್ನು ನೋಡಿದರೆ, ಅಭ್ಯರ್ಥಿ ಪಡೆಯುವ ಮತಗಳಿಗಿಂತಲೂ ನೋಟಾ ಮತಗಳೇ ಅಧಿಕವಾಗುವ ಸಂಭವ. ಅಂತಹಾ ನೋಟಾ ಚಳವಳಿ ಇದೀಗ ಆರಂಭವಾಗಿದ್ದು, ತೀವ್ರ ಸಂಚಲನ ಮತ್ತು ಕುತೂಹಲವನ್ನು ಉಂಟುಮಾಡಿದೆ. ‘ಸೌಜನ್ಯಳಿಗಾಗಿ ನೋಟಾ’ ಚಳವಳಿ ಮಂಗಳೂರು ಲೋಕಸಭಾ ಕ್ಷೇತ್ರದ ಒಟ್ಟಾರೆ ಚಿತ್ರಣವನ್ನೇ ಉಲ್ಟಾಪಲ್ಟಾ ಮಾಡಲಿದೆ ಅನ್ನುವುದಂತೂ ಸತ್ಯ.