ಭಾರತದಲ್ಲಿ ನಿರುದ್ಯೋಗ ಉಲ್ಬಣ- ವಿಶ್ವ ಸಂಸ್ಥೆಯ ಅಂತಾರಾಷ್ಟ್ರೀಯ ಕಾರ್ಮಿಕರ ಸಂಘಟನೆಯ ವರದಿ
ಹೊಸದಿಲ್ಲಿ: ಭಾರತದಲ್ಲಿ ನಿರುದ್ಯೋಗ “ಗಂಭೀರ ಸ್ಥಿತಿ’ಗೆ ತಲುಪಿದೆ ಎಂದು ವಿಶ್ವ ಸಂಸ್ಥೆ ಯ ಅಂತಾರಾಷ್ಟ್ರೀಯ ಕಾರ್ಮಿಕರ ಸಂಘಟನೆ(ಐಎಲ್ಒ) ವರದಿ ತಿಳಿಸಿದೆ. ಭಾರತದಲ್ಲಿ ನಿರುದ್ಯೋಗ ಪಡೆಯುವಲ್ಲಿ ಶೇ.83ರಷ್ಟು ಯುವಕರಿದ್ದಾರೆ ಮತ್ತು ಉದ್ಯೋಗರಹಿತ ಸುಶಿಕ್ಷಿತರ ಸಂಖ್ಯೆ ಶೇ.54.2ರಿಂದ ಶೇ.65.7ಕ್ಕೆ ಏರಿಕೆಯಾಗಿದೆ ಎಂದು ಐಎಲ್ಒ ವರದಿಯಲ್ಲಿ ತಿಳಿಸಲಾಗಿದೆ.
ಒಂದೊಮ್ಮೆ ಭಾರತವೇನಾದರೂ ಉದ್ಯೋಗ ಸೃಷ್ಟಿ, ಗುಣಮಟ್ಟದ ಉದ್ಯೋಗ, ಕಾರ್ಮಿಕ ಮಾರುಕಟ್ಟೆಯಲ್ಲಿನ ಅಸಮಾನತೆ, ಕೌಶಲ ಮತ್ತು ನೀತಿಗಳ ಅನುಷ್ಠಾನ, ಕಾರ್ಮಿಕ ಮಾರುಕಟ್ಟೆ ಹಾಗೂ ಯುವಕರಿಗೆ ಜ್ಞಾನದ ಕೊರತೆಯಂಥ 5 ಸಂಗತಿಗಳ ಕುರಿತು ಭಾರತ ಕೆಲಸ ಮಾಡಿದರೆ, ಮುಂದಿನ 10 ವರ್ಷದಲ್ಲಿ ಕನಿಷ್ಠ 70ರಿಂದ 80 ಲಕ್ಷ ಉದ್ಯೋಗಿಗಳನ್ನು ಹೆಚ್ಚಿಸಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ವಿದೇಶಿ ರೇಟಿಂಗ್ ನಂಬುವ ಅಗತ್ಯ ಏನಿದೆ?: ಸಚಿವ ಠಾಕೂರ್: ನಾವು ಇನ್ನೂ ಗುಲಾಮಿ ಮನಸ್ಥಿತಿಯಿಂದ ಹೊರ ಬಂದಿಲ್ಲ. ಈಗಲೂ ನಾವು ವಿದೇಶಿ ರೇಟಿಂಗ್ ನಂಬುತ್ತಿದ್ದೇವೆ. ಇದರಿಂದ ಹೊರಬಂದು, ನಮ್ಮ ದೇಶದ ಸಂಘಟನೆಗಳ ಮೇಲೆ ವಿಶ್ವಾಸ ತೋರುವ ಅಗತ್ಯವಿದೆ ಎಂದು ಕೇಂದ್ರ ಯವಜನ ವ್ಯವಹಾರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಉದ್ಯೋಗ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ)ಗೆ 6.4 ಕೋಟಿ ಜನರು ನೋಂದಣಿ ಮಾಡಿಕೊಂಡಿದ್ದಾರೆ. ಇದು ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಹಾಗೂ ಇತರ ಅನೇಕ ದೇಶಗಳಿಗಿಂತಲೂ ಹೆಚ್ಚು. 34 ಕೋಟಿ ಮುದ್ರಾ ಸಾಲ ನೀಡಲಾಗಿದೆ. ಇದರಿಂದಲೂ ಉದ್ಯೋಗ ಸೃಷ್ಟಿಯಾಗುತ್ತಿದೆ ಎಂದು ಖಾಸಗಿ ಸುದ್ದಿ ವಾಹಿನಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.