ಬಿಜೆಪಿ ವಿರುದ್ಧ 40% ಕಮಿಷನ್‌ ಜಾಹೀರಾತು: ಸಿದ್ದು, ಡಿಕೆಶಿಗೆ ಸಮನ್ಸ್‌ ಮರು ಜಾರಿ

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯ ವೇಳೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ವಿವಿಧ ಹುದ್ದೆಗಳಿಗೆ ದರ ನಿಗದಿಪಡಿಸಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್‌, ಈ ಸಂಬಂಧ ರಾಜ್ಯದ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ʼಭ್ರಷ್ಟಾಚಾರ ದರ ಪಟ್ಟಿʼ ಎಂಬ ಹೆಸರಿನಲ್ಲಿ ಜಾಹೀರಾತು ಪ್ರಕಟಿಸುವ ಮೂಲಕ ಮಾನಹಾನಿ ಮಾಡಿದೆ ಎಂದು ಬಿಜೆಪಿ ಹೂಡಿದ್ದ ದಾವೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ.

ಬಿಜೆಪಿಯು ಕಾಂಗ್ರೆಸ್‌ ವಿರುದ್ಧ ಹೂಡಿದ್ದ ಖಾಸಗಿ ದೂರಿನ ಸಂಜ್ಞೇ ಪರಿಗಣಿಸಿ ದಾಖಲಿಸಿರುವ ಮಾನಹಾನಿ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ (ಮ್ಯಾಜಿಸ್ಟ್ರೇಟ್‌) ನ್ಯಾಯಾಲಯದ ನ್ಯಾಯಾಧೀಶೆ ಜೆ ಪ್ರೀತ್‌ ಅವರು ನಡೆಸಿದರು.

ಪ್ರಕರಣದಲ್ಲಿ 4ನೇ ಆರೋಪಿಯಾಗಿರುವ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ದೆಹಲಿಯಿಂದ ಪ್ರಕರಣದ ವಿಚಾರಣೆಗೆ ಬರಬೇಕಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಮುಂದೆ ಹಾಜರಾಗಲಾಗುತ್ತಿಲ್ಲ. ಹೀಗಾಗಿ, ಪ್ರಕರಣದ ವಿಚಾರಣೆಯನ್ನು ಜೂನ್‌ಗೆ ನಿಗದಿಪಡಿಸುವಂತೆ ಅವರ ವಕೀಲರು ಕೋರಿದ್ದಾರೆ.

ಆದ್ದರಿಂದ, ಜೂನ್‌ 1ರಂದು ವಿಚಾರಣೆಗೆ ಹಾಜರಾಗಲು ರಾಹುಲ್‌ ಗಾಂಧಿ ಅವರಿಗೆ ದಿನ ನಿಗದಿಪಡಿಸಲಾಗಿದೆ. ಉಳಿದ ಆರೋಪಿಗಳಾದ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್‌ ಅವರಿಗೆ ಯಾವುದೇ ಲೋಪ ಎಸಗದೇ ಏಪ್ರಿಲ್‌ 29ರೊಳಗೆ ಸಮನ್ಸ್‌ ಅನ್ನು ತಲುಪಿಸಲು ಪೊಲೀಸರಿಗೆ ನಿರ್ದೇಶಿಸಲಾಗಿದೆ” ಎಂದು ನ್ಯಾಯಾಲಯವು ಆದೇಶಿಸಿದೆ.

ಏನಿದು ದೂರು…?

ಕಳೆದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಭ್ರಷ್ಟಾಚಾರವನ್ನು ಪ್ರಧಾನ ಅಸ್ತ್ರವಾಗಿಸಿದ್ದ ಕಾಂಗ್ರೆಸ್‌ 2023ರ ಮೇ 5ರಂದು ಎಲ್ಲಾ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ಭ್ರಷ್ಟಾಚಾರ ದರ ಪಟ್ಟಿ ಎಂಬ ಹೆಸರಿನ ಅಡಿ ವಿವಿಧ ಹುದ್ದೆಗಳಿಗೆ ಬಿಜೆಪಿ ಲಂಚ ನಿಗದಿಪಡಿಸಿದೆ ಎಂದು ಆರೋಪಿಸಿತ್ತು. ಅಲ್ಲದೇ, ಕೋವಿಡ್‌ ಸಾಮಗ್ರಿಗಳ ಪೂರೈಕೆ, ಲೋಕೋಪಯೋಗಿ ಗುತ್ತಿಗೆಗಳು, ಮಠಗಳಿಗೆ ಅನುದಾನ, ಶಾಲೆಗಳಿಗೆ ಮೊಟ್ಟೆ ಪೂರೈಕೆ, ರಸ್ತೆ ಕಾಮಗಾರಿಗಳಲ್ಲಿ ಶೇ 75-30% ಕಮಿಷನ್‌ ಪಡೆಯಲಾಗುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿತ್ತು.

ಪತ್ರಿಕೆಗಳಿಗೆ ನೀಡಿದ ಜಾಹೀರಾತಿನ ಕೊನೆಯಲ್ಲಿ ಶೇ. 40 ಕಮಿಷನ್ ನ (ಬಿಜೆಪಿ) ಸರ್ಕಾರವು 1.5 ಲಕ್ಷ ಕೋಟಿಯನ್ನು ಕಳೆದ ನಾಲ್ಕು ವರ್ಷಗಳಲ್ಲಿ ಲೂಟಿ ಮಾಡಿದೆ ಎಂದು ಆರೋಪಿಸಿತ್ತು. ಡಬಲ್‌ ಎಂಜಿನ್‌ ಸರ್ಕಾರಕ್ಕೆ ಬದಲಾಗಿ ಟ್ರಬಲ್‌ ಎಂಜಿನ್‌ ಸರ್ಕಾರ ಎಂದು ಹೇಳುವ ಮೂಲಕ ಬಿಜೆಪಿಯ ವರ್ಚಸ್ಸಿಗೆ ಹಾನಿ ಮಾಡಿ, ಚುನಾವಣೆಯಲ್ಲಿ ಗೆಲುವಿಗೆ ಅಡ್ಡಿಪಡಿಸಲಾಗಿದೆ. ಕೊನೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಆರೋಪಿಗಳು ಕೇಳಿದ್ದಾರೆ. ಸುಳ್ಳು ಜಾಹೀರಾತು ನೀಡಲು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ ಹಾಗೂ ರಾಹುಲ್‌ ಗಾಂಧಿ ಅವರು ನೇರ ಕಾರಣವಾಗಿದ್ದಾರೆ.

ರಾಹುಲ್‌ ಗಾಧಿ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಸುಳ್ಳು ಜಾಹೀರಾತನ್ನು ಹಂಚಿಕೊಂಡು ಬಿಜೆಪಿಗೆ ಮಾನಹಾನಿ ಮಾಡುವ ಪ್ರಯತ್ನ ಮಾಡಲಾಗಿದೆ. ಹೀಗಾಗಿ, ಕಾಂಗ್ರೆಸ್‌, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್‌ ಮತ್ತು ರಾಹುಲ್‌ ಗಾಂಧಿ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಬೇಕು ಎಂದು ಬಿಜೆಪಿಯು ಖಾಸಗಿ ದೂರು ದಾಖಲಿಸಿತ್ತು. ಇದರ ಸಂಜ್ಞೇ ಪರಿಗಣಿಸಿದ್ದ ವಿಶೇಷ ನ್ಯಾಯಾಲಯವು ಫೆಬ್ರವರಿ 23ರಂದು ಮಾನಹಾನಿ ದಾವೆ ದಾಖಲಿಸಲು ಆದೇಶಿಸಿ, ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಿತ್ತು. ಆದರೆ, ಸಮನ್ಸ್‌ ಅನ್ನು ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್‌ ಅವರಿಗೆ ತಲುಪಿಸದ ಹಿನ್ನೆಲೆಯಲ್ಲಿ ಮರು ಜಾರಿ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!