ತಂದೆಯ ಹಾದಿಯಲ್ಲಿ ಸಾಗಲು ಆಶೀರ್ವದಿಸಿ: ಗೀತಾ ಶಿವರಾಜ್ ಕುಮಾರ್

ಬೈಂದೂರು: ಜನರು ಆಶಿರ್ವಾದ ಮಾಡಿದರೆ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಡೊಯ್ಯುವ ಮಹತ್ವಾಕಾಂಕ್ಷೆಯಿದೆ. ಮುಖ್ಯಮಂತ್ರಿಗಳಾಗಿದ್ದಾಗ ತಂದೆ ಬಂಗಾರಪ್ಪನವರು ಅನುಷ್ಠಾನಕ್ಕೆ ತಂದ ಯೋಜನೆಗಳು ಇಂದಿಗೂ ಜನಮಾನಸದಲ್ಲಿದೆ. ಅವರು ಹಾಕಿಕೊಟ್ಟ ಅಭಿವೃದ್ಧಿ ಹಾದಿಯಲ್ಲಿಯೇ ಸಾಗುತ್ತೇನೆ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಹೇಳಿದ್ದಾರೆ.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ದಂದು ಬೈಂದೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಗೋಳಿಹೊಳೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಚಿವ ಮಧು ಬಂಗಾರಪ್ಪ ಮಾತನಾಡಿ, ಬಂಗಾರಪ್ಪ ಅಭಿಮಾನಿಗಳಲ್ಲಿ ನಾವು ಬಂಗಾರಪ್ಪರನ್ನು ಕಾಣುತ್ತಿದ್ದೇವೆ. ಇಂದಿಗೂ ಅವರನ್ನು ವಿರೋಧ ಪಕ್ಷದವರ ಸಹಿತ ಎಲ್ಲರೂ ನೆನಪಿಸಿಕೊಳ್ಳುತ್ತಾರೆ. ಸಂಸದರಾಗಿ ಇಲ್ಲಿನ ಜನರ ಸೇವೆ ಮಾಡಲು ಕಾಂಗ್ರೆಸ್ ಅಭ್ಯರ್ಥಿಯಾಗಿ ಬಂಗಾರಪ್ಪ ಪುತ್ರಿ ಗೀತಾ ಶಿವರಾಜ ಕುಮಾರ್ ಕಣಕ್ಕಿಳಿದಿದ್ದು ಅವರನ್ನು ಪ್ರಚಂಡ ಬಹುಮತದೊಂದಿಗೆ ಗೆಲ್ಲಿಸಲು ಪ್ರಬುದ್ಧ ಮತದಾರರ ಸಹಕಾರ ಬೇಕಿದೆ. ಸೇವಾ ಮನೋಭಾವನೆ ಚಿಂತನೆಯಿಂದ ನನ್ನ ಅಕ್ಕನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ ಎಂದರು.

ಮಾಜಿ ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಮಾತನಾಡಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಲೋಕಸಭಾ ಸದಸ್ಯರಾಗಿ ಆರಿಸಿ ಬಂದರೆ ಬೈಂದೂರು ವಿಧಾನಸಭಾ ಕ್ಷೇತ್ರ ಅಭಿವೃದ್ಧಿಯ ಪಥದಲ್ಲಿ ಸಾಗಲಿದೆ. ಮಹಿಳೆಯರಿಗೆ ಜನರ ನೋವು ಅರ್ಥ ಮಾಡಿಕೊಳ್ಳುವ ಶಕ್ತಿಯಿದೆ. ಹೀಗಾಗಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸುವುದರಲ್ಲಿ ಎರಡು ಮಾತಿಲ್ಲ ಎಂದರು.

ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಗಳು ಪರಿಣಾಮಕಾರಿಯಾಗಿ ಪ್ರತಿಮನೆಗೂ ತಲುಪಿದೆ. ಸಾಮಾನ್ಯ ಜನರಿಗೆ ಬದುಕು ಕಟ್ಟಿಕೊಟ್ಟ ಮುಖ್ಯಮಂತ್ರಿಗಳಲ್ಲಿ ದೇವರಾಜ ಅರಸು, ಬಂಗಾರಪ್ಪ ಅವರ ದೂರದೃಷ್ಟಿ ಚಿಂತನೆ ಇಂದಿಗೂ ಜನರಿಗೆ ನೆನಪಿದೆ. ರಾಜ್ಯದ ಈಗಿನ ಸಿಎಂ ಸಿದ್ದರಾಮಯ್ಯ ಸಾಮಾನ್ಯ ಜನರಿಗೆ ನೀಡುತ್ತಿರುವ ಕೊಡುಗೆ ಅಪಾರ ಎಂದರು.

ಈ ಸಂದರ್ಭದಲ್ಲಿ ಚಲನಚಿತ್ರ ನಟ ಡಾ. ಶಿವರಾಜ್ ಕುಮಾರ್, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜು ಪೂಜಾರಿ, ಪದವೀಧರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್, ಮುಖಂಡರಾದ ಪ್ರಕಾಶ್ಚಂದ್ರ ಶೆಟ್ಟಿ ಸೇರಿದಂತೆ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!