ಉಡುಪಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ- ಹಲವು ಪ್ರಕರಣ ದಾಖಲು
ಉಡುಪಿ: ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳಲ್ಲಿ ಎಂಟು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳನ್ನು ದಾಖಲಿಸಲಾಗಿದೆ. ಕಳೆದ ರಾತ್ರಿ ಅಬಕಾರಿ ಇಲಾಖೆಯ ವತಿಯಿಂದ ಒಟ್ಟು 40,580 ರೂ. ಮೌಲ್ಯದ 38.430 ಲೀ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಬುಧವಾರದಂದು ಎಸ್ಎಸ್ಟಿ ತಂಡವು ಹೆಜಮಾಡಿ ಚೆಕ್ಪೋಸ್ಟ್ನಲ್ಲಿ ದಾಖಲೆಗಳಿಲ್ಲದೇ ಸಾಗಿಸುತಿದ್ದ 85,000ರೂ. ಗಳನ್ನು ವಶಪಡಿಸಿಕೊಂಡರೆ, ಅಬಕಾರಿ ಇಲಾಖೆ ವತಿಯಿಂದ 8,210ರೂ. ಮೌಲ್ಯದ 109 ಲೀ.ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಎಫ್ಎಸ್ ತಂಡ ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ 7,500 ರೂ ಮೌಲ್ಯದ 100 ಲೀ. ಕಳ್ಳು (ಶೇಂದಿ) ವಶಪಡಿಸಿಕೊಂಡಿದ್ದು, ಪೊಲೀಸ್ ಇಲಾಖೆ 44,000 ರೂ. ಮೌಲ್ಯದ 1.108 ಕೆ.ಜಿ ಗಾಂಜಾವನ್ನು ವಶಪಡಿಸಿಕೊಂಡು ಉಡುಪಿ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಹೆಜಮಾಡಿ ಚೆಕ್ಪೋಸ್ಟ್ನಲ್ಲಿ ಎಸ್ಎಸ್ಟಿ ತಂಡ 79,737 ರೂ. ಮೌಲ್ಯದ 25 ಶರ್ಟ್ ಹಾಗೂ 30 ಪ್ಯಾಂಟ್ ಬಟ್ಟೆಗಳನ್ನು ವಶ ಪಡಿಸಿಕೊಂಡಿದೆ. ಅಲ್ಲದೇ ಕುಂದಾಪುರ ಗ್ರಾಮಾಂತರ ಪೊಲೀಸರು 1440 ರೂ. ಮೌಲ್ಯದ 3.240 ಲೀ ಮದ್ಯ ವಶಪಡಿಸಿಕೊಂಡಿದ್ದು ಮೊಕದ್ದಮೆ ದಾಖಲಿಸಿರುವು ದಾಗಿ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.