ಉಡುಪಿ ಚಿಕ್ಕಮಗಳೂರು ಕ್ಷೇತ್ರ: ಎ.3 ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ

ಉಡುಪಿ, ಮಾ.28: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಮೊದಲ ಬಾರಿ ಆಯ್ಕೆಯಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರು ಎ.3ರ ಬುಧವಾರ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ ತಿಳಿಸಿದ್ದಾರೆ.

ಕಡಿಯಾಳಿಯ ಬಿಜೆಪಿ ಕಚೇರಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.3 ರಂದು ಬೆಳಗ್ಗೆ 10:30ಕ್ಕೆ ಬಿಜೆಪಿ ಕಚೇರಿ ಬಳಿ ಕಾರ್ಯಕರ್ತರ ಸಮಾವೇಶ ನಡೆಯಲಿದ್ದು, ಅದು ಮುಗಿದ ಬಳಿಕ ಕೋಟ ಅವರು ಮೆರವಣಿಗೆಯಲ್ಲಿ ತೆರಳಿ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.

ಜಿಲ್ಲೆಯಾದ್ಯಂತ ಬಿಜೆಪಿ ಗೆಲುವಿಗೆ ಪೂರಕ ವಾತಾವರಣ ಇದ್ದು, ಅಭ್ಯರ್ಥಿಯ ಜೊತೆಗೆ ಪಕ್ಷದ ಮುಖಂಡರು, ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಬಿರುಸಿನ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನಪರ ಯೋಜನೆಗಳು ಹಾಗೂ ಕೋಟ ಅವರ ಸಚ್ಚಾರಿತ್ರ್ಯದ ವ್ಯಕ್ತಿತ್ವ ಬಿಜೆಪಿ ಪಾಲಿಗೆ ವರದಾನವಾಗ ಲಿದೆ ಎಂದು ಅಭಿಪ್ರಾಯಪಟ್ಟರು.

ಲೋಕಸಭಾ ಚುನಾವಣೆಗೆ ಪೂರಕವಾಗಿ ಬಿಜೆಪಿ ಉಡುಪಿ ಜಿಲ್ಲಾ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯ ಕರ್ತರ ಸಮಾವೇಶಗಳನ್ನು ಹಮ್ಮಿಕೊಂಡಿದೆ. ಕುಂದಾಪುರ ಸಮಾವೇಶವು ಮಾ.29 ರಂದು ಸಂಜೆ 4ಗಂಟೆಗೆ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ, ಕಾಪು ಸಮಾವೇಶ ಮಾ.30ರ ಸಂಜೆ 4ಗಂಟೆಗೆ ಹೊಟೇಲ್ ಕೆಒನ್ ಹಾಲ್‌ ನಲ್ಲಿ, ಉಡುಪಿ ಸಮಾವೇಶ ಎ.3ರಂದು 10:30ಕ್ಕೆ ಹಾಗೂ ಕಾರ್ಕಳ ಸಮಾವೇಶ ಎ.5ರ ಬೆಳಗ್ಗೆ 10:30ಕ್ಕೆ ಕಾರ್ಕಳ ಮಂಜುನಾಥ ಪೈ ಸಭಾಂಗಣದಲ್ಲಿ ನಡೆಯಲಿದೆ ಎಂದರು.

ಅಲ್ಲದೇ ಜಿಲ್ಲಾ ವ್ಯಾಪ್ತಿಯಲ್ಲಿ ಮಹಿಳಾ ಸಮಾವೇಶ, ಹಿಂದುಳಿದ ವರ್ಗಗಳ ಸಮಾವೇಶ ಹಾಗೂ ಯುವ ಕಾರ್ಯಕರ್ತರ ಯುವ ಮೋರ್ಚಾ ಸಮಾವೇಶವೂ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಕೆ.ರಾಘವೇಂದ್ರ ಕಿಣಿ ತಿಳಿಸಿದರು.

ಬಿಜೆಪಿ ವಕ್ತಾರ ಮುಟ್ಲುಪಾಡಿ ಸತೀಶ್ ಶೆಟ್ಟಿ ಅವರ ಮಾತನಾಡಿ, ಕಾಂಗ್ರೆಸ್ ಮುಖಂಡ, ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರ ಹೇಳಿಕೆಯನ್ನು ಖಂಡಿಸಿದರು. ತಾಕತ್ತಿದ್ದರೆ ಮೋದಿ ಬೆಂಬಲಿಗರನ್ನು ಅವರು ಮುಟ್ಟಿ ನೋಡಲಿ ಎಂದು ಸವಾಲು ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕಿರಣ್‌ಕುಮಾರ್ ಬೈಲೂರು, ಜಿಲ್ಲಾ ವಕ್ತಾರ ವಿಜಯ ಕುಮಾರ್ ಉದ್ಯಾವರ, ಜಿಲ್ಲಾ ಮಾಧ್ಯಮ ಪ್ರಮುಖ ಶ್ರೀನಿಧಿ ಹೆಗ್ಡೆ, ಶಿವಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!