ನೇಜಾರು ತಾಯಿಮಕ್ಕಳ ಹತ್ಯೆ ಪ್ರಕರಣ: ಕೋರ್ಟ್‌ನಲ್ಲಿ ಆರೋಪ ನಿರಾಕರಿಸಿದ ಪ್ರವೀಣ್ ಚೌಗುಲೆ

ಉಡುಪಿ, ಮಾ.27: ನೇಜಾರು ತಾಯಿ ಮತ್ತು ಮೂವರು ಮಕ್ಕಳ ಕಗ್ಗೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮುಂದೆ ತನ್ನ ಮೇಲಿನ ಆರೋಪವನ್ನು ನಿರಾಕರಿಸಿರುವ ಬಗ್ಗೆ ವರದಿಯಾಗಿದೆ.

ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ಆರೋಪಿ ಪ್ರವೀಣ್ ಚೌಗುಲೆಯನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಪ್ರಕರಣದ ತನಿಖಾಧಿಕಾರಿ ಯಾಗಿರುವ ಮಲ್ಪೆ ಪೊಲೀಸ್ ವೃತ್ತ ನಿರೀಕ್ಷಕ ಕೃಷ್ಣ ಎಸ್.ಕೆ. ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಧೀಶ ದಿನೇಶ್ ಹೆಗ್ಡೆ ಆರೋಪಿ ಮೇಲಿನ ಆಪಾದನೆಯನ್ನು ವಾಚಿಸಿದರು. ಆದರೆ ಚೌಗುಲೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದಾನೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಈ ಗಂಭೀರ ಪ್ರಕರಣದ ವಿಚಾರಣೆಗೆ ಪೂರ್ವಭಾವಿಯಾಗಿ ಎ.5 ರಂದು ಪ್ರಿ ಟ್ರಾಯಲ್ ಕಾನ್ಫರೆನ್ಸ್ ನಡೆಸಲು ಆದೇಶ ನೀಡಿದರು. ನ್ಯಾಯಾಧೀಶರ ಸಮಕ್ಷಮದಲ್ಲಿ ನಡೆಯುವ ಈ ಕಾನ್ಪರೆನ್ಸ್‌ನಲ್ಲಿ ಪ್ರಕರಣದ ತನಿಖಾಧಿಕಾರಿ, ವಿಶೇಷ ಪಿಪಿ, ಆರೋಪಿ ಪರ ವಕೀಲರು ಭಾಗವಹಿಸಿ, ಮುಂದಿನ ವಿಚಾರಣೆ ಯಾವ ರೀತಿ ನಡೆಸಬೇಕೆಂಬುದರ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಯಾವ ವಿಚಾರಣೆ ಅಗತ್ಯ ಇದೆ ಎಂಬುದರ ಬಗ್ಗೆ ಈ ಸಭೆಯಲ್ಲಿ ತೀರ್ಮಾನಿಸಿ, ವಿಚಾರಣೆ ಆರಂಭಿಸಲು ಸಾಕ್ಷಿಗಳಿಗೆ ಸಮನ್ಸ್ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!