ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕನಿಷ್ಠ ವೇತನ ದಿನಕ್ಕೆ ರೂ.400: ಕಾಂಗ್ರೆಸ್ ಭರವಸೆ

ಹೊಸದಿಲ್ಲಿ: ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಕನಿಷ್ಠ ವೇತನವನ್ನು 400 ರೂ.ಗೆ ಏರಿಸುವುದಾಗಿ ಕಾಂಗ್ರೆಸ್ ಪಕ್ಷ ಭರವಸೆ ನೀಡಿದೆ. ಇದೇ ವೇತನ ನರೇಗಾ ಯೋಜನೆಗೂ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಹೇಳಿಕೆ ನೀಡಿ, ಕಳೆದ ಹತ್ತು ವರ್ಷಗಳಲ್ಲಿ ಮೋದಿ ಸರ್ಕಾರ ಕೇವಲ ಶೇ. 1ರಷ್ಟು ಮಾತ್ರ ವೇತನವನ್ನು ಏರಿಸಿದೆ. ಯುಪಿಎ ಅಧಿಕಾರದ ಅವಧಿಯಲ್ಲಿ ಅಂದರೆ 2009-14ರ ಅವಧಿಯಲ್ಲಿ ಕೃಷಿ ಹಾಗೂ ಕೃಷಿಯೇತರ ವಲಯಗಳಲ್ಲಿ ಇದು ಕ್ರಮವಾಗಿ ಶೇಕಡ 8.6 ಮತ್ತು 6.9ರಷ್ಟಿತ್ತು ಎಂದು ಅವರು ಅಂಕಿ ಅಂಶ ನೀಡಿದ್ದಾರೆ. ಪ್ರಸ್ತುತ ಕನಿಷ್ಠ ವೇತನ ದಿನಕ್ಕೆ 176 ರೂಪಾಯಿ ಇದ್ದು, ಈ ಹಿನ್ನೆಲೆಯಲ್ಲಿ ಖರ್ಗೆ ಹೇಳಿಕೆ ಮಹತ್ವ ಪಡೆದಿದೆ.

ಕಳೆದ ಹತ್ತು ವರ್ಷಗಳಲ್ಲಿ ನಿರುದ್ಯೋಗ ಹಲವು ಪಟ್ಟು ಹೆಚ್ಚಿದೆ. ಕೃಷಿಯನ್ನು ಅವಲಂಬಿಸಿರುವ ಜನರ ಸಂಖ್ಯೆ 2016ರಲ್ಲಿ ಶೇ. 41ರಷ್ಟಿದ್ದುದು ಈಗ ಶೇಕಡ 47ಕ್ಕೆ ಹೆಚ್ಚಿರುವುದು ಇದಕ್ಕೆ ನಿದರ್ಶನ ಎಂದು ಕಾಂಗ್ರೆಸ್ ವಕ್ತಾರ ಸಂದೀಪ್ ದೀಕ್ಷಿತ್ ಹೇಳಿದ್ದಾರೆ.

ಮೋದಿ ಅಧಿಕಾರದ ಅವಧಿಯಲ್ಲಿ ನೈಜ ವೇತನ ಏರಿಕೆ ಸ್ಥಗಿತಗೊಂಡಿತ್ತು. ವೇತನ ಏರಿಕೆಗಿಂತ ಹೆಚ್ಚು ಹಣದುಬ್ಬರ ದಾಖಲಾಗಿತ್ತು. ದುಡಿಯುವ ವರ್ಗಕ್ಕೆ ವೇತನ ಏರಿಕೆಯನ್ನು ಬಹುತೇಕ ಶೂನ್ಯಕ್ಕೆ ಕಡಿಮೆ ಮಾಡಿದ್ದಾರೆ. ಹೆಚ್ಚುತ್ತಿರುವ ಬೆಲೆಗಳು ಹೆಚ್ಚುವರಿ ಹೊರೆ ಎಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಆಪಾದಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!