2014ರ ಲೋಕಸಭಾ ಚುನಾವಣೆಯ ಬಿಜೆಪಿ ಭಾಷಣಗಳನ್ನು ಕೇಳಿದರೆ, ಬಿಜೆಪಿಗರೇ ಮತ ನೀಡುವುದಿಲ್ಲ: ಶಿವರಾಜ್ ತಂಗಡಗಿ

ಬೆಂಗಳೂರು: ಬಿಜೆಪಿಯವರು ಸುಳ್ಳು, ಕಪಟ, ಮೋಸ ಮಾಡುವುದರ ಜೊತೆಗೆ ಯುವಕರು, ಮಕ್ಕಳ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ನಾನು ಕಾರಟಗಿಯಲ್ಲಿ ಹೇಳಿದ ಹೇಳಿಕೆಗೆ ಬದ್ದನಾಗಿದ್ದೇನೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸ್ಪಷ್ಟನೆ ನೀಡಿದ್ದಾರೆ.

ಮಂಗಳವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಧ್ಯಮದವರು ನನ್ನ ಭಾಷಣದ ಪೂರ್ಣಪಾಠವನ್ನು ಹಾಕಬೇಕು. ಬಿಜೆಪಿಯವರು ನಮ್ಮ ಮಕ್ಕಳ ದಾರಿ ತಪ್ಪಿಸುವವರ ವಿರುದ್ಧ ಮಾತನಾಡಿದ್ದೇನೆ ಎಂದರು.

ಕಾರಟಗಿಯ ಕಾರ್ಯಕ್ರಮದ ಸಂಪೂರ್ಣ ಭಾಷಣ ಕೇಳಿ. ನಾನು ಸಂವಿಧಾನ ಬದಲಾವಣೆ ಹೇಳಿಕೆ ವಿರುದ್ಧ ಮಾತನಾಡಿದ್ದೇನೆ. ನಾನು ಬಳಸಿದ್ದು ಉತ್ತರ ಕರ್ನಾಟಕದ ಸಹಜವಾದ ಭಾಷೆ. ನಾನು ಬಿಜೆಪಿಯ ವರಿಗೆ, ಸಿ.ಟಿ.ರವಿಗೆ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿದ್ದೇನೆಯೇ?. ಬಿಜೆಪಿಯವರೇ ನನ್ನ ಭಾಷಣವನ್ನು ಪೂರ್ತಿ ಕೇಳಿ ನಂತರ ಮಾತನಾಡಲಿ ಎಂದು ಅವರು ತಿಳಿಸಿದರು.

ಸಿ.ಟಿ.ರವಿ ಅವರು ಅಪ್ಪನಿಗೆ ಹುಟ್ಟಿದ್ದರೇ ಎನ್ನುವ ಮಾತನ್ನು ಆಡಿದ್ದಾರೆ. ನಾನು ಸಹ ಯಾರಿಗೆ ಹುಟ್ಟಿದ್ದೀರಿ ಎಂದು ಕೇಳಬಹುದಿತ್ತು. ಆದರೆ, ಅವರಷ್ಟು ಕೆಳಮಟ್ಟಕ್ಕೆ ನಾನು ಇಳಿಯಲು ಇಷ್ಟಪಡುವುದಿಲ್ಲ ಎಂದು ಶಿವರಾಜ್ ತಂಗಡಗಿ ತಿಳಿಸಿದರು.

ನಾವು ಯಾರಿಗೆ ಹುಟ್ಟಿದ್ದೇವೆ ಎಂದು ನಮ್ಮ ತಾಯಂದಿರಿಗೆ ಗೊತ್ತಿರುತ್ತದೆ. ನೀವು ಸವಾಲಿಗೆ ಸಿದ್ದರಿದ್ದರೆ ನನ್ನ ತಾಯಿಯನ್ನು ಬಿಜೆಪಿ ಕಚೇರಿಗೆ ಕರೆದುಕೊಂಡು ಬರುತ್ತೇನೆ, ತಯಾರಿದ್ದೀರಾ. ದಿನಾಂಕ ಹೇಳಿದರೆ ನಾನು ಕರೆದುಕೊಂಡು ಬರಲು ತಯಾರಿದ್ದೇನೆ. 2 ಕೋಟಿ ಉದ್ಯೋಗ, ನರೇಗಾ ಅನ್ಯಾಯದ ಬಗ್ಗೆ ಉತ್ತರ ಕೊಡಲು ಸಿದ್ದರಿದ್ದೀರಾ ಎಂದು ಶಿವರಾಜ್ ತಂಗಡಗಿ ಪ್ರಶ್ನಿಸಿದರು.

ಬಿಜೆಪಿಗೆ ಮತ ನೀಡುವುದಿಲ್ಲ

ಬಿಜೆಪಿಯವರು 2014ರ ಲೋಕಸಭಾ ಚುನಾವಣೆ ವೇಳೆ ಮಾಡಿದ ಭಾಷಣಗಳನ್ನು ಅವರೇ ಕೇಳಲಿ. ಅವರ ಭಾಷಣ ಕೇಳಿ ಅವರೇ ಬಿಜೆಪಿಗೆ ಮತ ನೀಡುವುದಿಲ್ಲ. 2 ಕೋಟಿ ಉದ್ಯೋಗ ನೀಡುತ್ತೇನೆ ಎಂದಿದ್ದರು, ಎರಡು ಕೋಟಿ ಉದ್ಯೋಗ ನೀಡಲಾಗಿದೆಯೇ?, ಸ್ಮಾರ್ಟ್ ಸಿಟಿಯಲ್ಲಿ ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಉತ್ತರಿಸಲಿ ಎಂದು ಶಿವರಾಜ್ ತಂಗಡಗಿ ಸವಾಲು ಹಾಕಿದರು.

ಉತ್ತರ ಕರ್ನಾಟಕದಲ್ಲಿ ಈ ಹಿಂದೆ ನೆರೆ ಬಂದು ಮನೆ, ಬೆಳೆ ಸೇರಿದಂತೆ ಎಲ್ಲಾ ಹಾಳಾಯಿತು. ಆಗ ಮೋದಿಯವರು ಬರಲೇ ಇಲ್ಲ. ಈಗ ಚುನಾವಣೆ ಹೊತ್ತಲ್ಲಿ ಬಂದರೆ ಏನು ಪ್ರಯೋಜನ. ಎಷ್ಟು ರೈತರ ಸಾಲ ಮನ್ನಾ ಮಾಡಿದ್ದಾರೆ. ಎಷ್ಟು ಅಣೆಕಟ್ಟು ಕಟ್ಟಿದ್ದಾರೆ. ಅಭಿವೃದ್ದಿ ವಿಚಾರ ಬೇಡ ಎಂದರೆ ಎಷ್ಟು ಕಂಪೆನಿಗಳನ್ನು ಮಾರಿದ್ದಾರೆ, ಈ ಬಗ್ಗೆಯಾದರೂ ಮಾಹಿತಿ ನೀಡಲಿ ಎಂದು ಶಿವರಾಜ್ ತಂಗಡಗಿ ತಿಳಿಸಿದ್ದಾರೆ.

ಸಿದ್ದರಾಮಯ್ಯ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಬಿಜೆಪಿಯವರು ನೂರಾರು ಬಾರಿ ಕೆಟ್ಟದಾಗಿ ಮಾತನಾಡಿದ್ದಾರೆ. ‘ಮೋದಿ ವಿರುದ್ಧ ಮಾತನಾಡಿದವರಿಗೆ ಗುಂಡಿಕ್ಕಿ ಕೊಲ್ಲಿ’ ಎಂದು ಬಿಜೆಪಿ ಸಚಿವ ಅನುರಾಗ್ ಠಾಕೂರ್ ಹೇಳುತ್ತಾರೆ. ಅವರನ್ನು ವಜಾ ಮಾಡುವ ಶಕ್ತಿ ನಿಮ್ಮಲ್ಲಿಲ್ಲವೇ, ನಿಮ್ಮದು ಸಂಸ್ಕೃತಿಯ ಮಾತೆ ಎಂದು ಶಿವರಾಜ್ ತಂಗಡಗಿ ಪ್ರಶ್ನಿಸಿದರು.

ನುಡಿದಂತೆ ನಡೆದಿದ್ದರೆ ನಾನೂ ಜೈ ಎನ್ನುತ್ತಿದ್ದೆ: ಬಿಜೆಪಿಯವರು ಯುವಕರಿಗೆ ಮೋದಿ, ಮೋದಿ ಎಂದು ದಾರಿ ತಪ್ಪಿಸುತ್ತಾ ಇದ್ದೀರಿ. ಈ 10 ವರ್ಷಗಳ ಮೋದಿ ಸಾಧನೆಯ ಪಟ್ಟಿಕೊಡಿ. ಭಾವನಾತ್ಮಕ ವಿಷಯ ಇಟ್ಟುಕೊಂಡು ಯುವಕರ ದಾರಿ ತಪ್ಪಿಸುತ್ತಿದ್ದೀರಿ. ಯುವಕರಿಗೆ ಬುದ್ದಿ ಹೇಳಿ ಎಂದು ಹೇಳಿದ್ದೇನೆ. ನಾನು ಅವಾಚ್ಯ ಶಬ್ದಗಳನ್ನು ಬಳಸಿಲ್ಲ. ಬಿಜೆಪಿಯವರು ನುಡಿದಂತೆ ನಡೆದಿದ್ದರೆ ಮೋದಿಗೆ ನಾನೂ ಜೈ ಎನ್ನುತ್ತಿದ್ದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.

Leave a Reply

Your email address will not be published. Required fields are marked *

error: Content is protected !!