ಚುನಾವಣಾ ಬಾಂಡ್ ಇಲ್ಲದೆಯೂ ರಾಜಕೀಯ ಪಕ್ಷಗಳಿಗೆ 7,726 ಕೋಟಿ ರೂ.ದೇಣಿಗೆ!
ಹೊಸದಿಲ್ಲಿ: ಚುನಾವಣಾ ಆಯೋಗದ ದತ್ತಾಂಶಗಳಂತೆ 2013 ಮತ್ತು 2023ರ ನಡುವೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ಗಳನ್ನು ಹೊರತುಪಡಿಸಿ ಇತರ ರೂಪದಲ್ಲಿ 7,726 ಕೋಟಿ ರೂ.ಗಳ ದೇಣಿಗೆಗಳನ್ನು ಸ್ವೀಕರಿಸಿವೆ. ಈ ಪೈಕಿ ಸುಮಾರು 5,000 ಕೋಟಿ ರೂ.(ಶೇ.64.7)ಗಳು ಬಿಜೆಪಿ ಬೊಕ್ಕಸಕ್ಕೆ ಸೇರಿದ್ದರೆ, ಕಾಂಗ್ರೆಸ್ ಶೇ.10.7, ಬಿಆರ್ಎಸ್ ಶೇ.3.3 ಮತ್ತು ಆಪ್ ಶೇ.3.1ರಷ್ಟು ಪಾಲನ್ನು ಸ್ವೀಕರಿಸಿವೆ.
ವರದಿಯ ಪ್ರಕಾರ ಒಟ್ಟು ದೇಣಿಗೆಗಳ ದೊಡ್ಡ ಭಾಗವನ್ನು ರಾಜಕೀಯ ಧನಸಹಾಯದ ಪಾರದರ್ಶಕ ವಿಧಾನಗಳ ಮೂಲಕ ಮಾಡಲಾಗಿದೆ.
2018ರಲ್ಲಿ ಚುನಾವಣಾ ಬಾಂಡ್ ಯೋಜನೆ ಜಾರಿಗೆ ಮುನ್ನ ರಾಜಕೀಯ ಪಕ್ಷಗಳಿಗೆ 20,000 ರೂ.ಗಳಿಗೂ ಹೆಚ್ಚಿನ ದೇಣಿಗೆಗಳನ್ನು 2003ರಲ್ಲಿ ಬಿಜೆಪಿ ನೇತೃತ್ವದ ಸರಕಾರವು ತಂದಿದ್ದ ರಾಜಕೀಯ ಹಣಕಾಸುಗಳ ಕಾಯ್ದೆಯಡಿ ಘೋಷಿಸಬೇಕಾಗಿತ್ತು. ಶೇ.100ರಷ್ಟು ತೆರಿಗೆ ವಿನಾಯಿತಿಯನ್ನು ಹೊಂದಿದ್ದ ಈ ದೇಣಿಗೆಗಳ ಮೊತ್ತ ವಿತ್ತವರ್ಷ 2014ರಲ್ಲಿ 309 ಕೋಟಿ ರೂ.ಗಳಿದ್ದರೆ ವಿತ್ತವರ್ಷ 2020ರಲ್ಲಿ 1,247 ಕೋಟಿ ರೂ.ಗಳಿಗೆ ಗಮನಾರ್ಹವಾಗಿ ಏರಿಕೆಯಾಗಿತ್ತು. ಆದರೆ ವಿತ್ತವರ್ಷ 2023ರಲ್ಲಿ ಈ ದೇಣಿಗೆಗಳ ಮೊತ್ತ 1,101 ಕೋಟಿ ರೂ.ಗಳಿಗೆ ಇಳಿಕೆಯಾಗಿತ್ತು.
ಕಾರ್ಪೊರೇಟ್ ದೇಣಿಗೆಗಳು ಸಹ ಮಹತ್ವದ ಪಾತ್ರವನ್ನು ಹೊಂದಿದ್ದು,ಪ್ರುಡಂಟ್ ಎಲೆಕ್ಟೋರಲ್ ಟ್ರಸ್ಟ್(ಪಿಇಟಿ)ನಂತಹ ಸಂಸ್ಥೆಗಳು ಪ್ರಮುಖ ದಾನಿಗಳಾಗಿ ಹೊರಹೊಮ್ಮಿವೆ. ವಿತ್ತವರ್ಷ 2023ರಲ್ಲಿ ಪಿಇಟಿ ಬಿಜೆಪಿಗೆ 256 ಕೋ.ರೂ. ಮತ್ತು ಬಿಆರ್ಎಸ್ಗೆ 90 ಕೋಟಿ ರೂ.ಗಳನ್ನು ನೀಡಿತ್ತು. ಜೊತೆಗೆ ಎಂಕೆಜೆ ಎಂಟರ್ಪ್ರೈಸಸ್ ಕಾಂಗ್ರೆಸ್ಗೆ 45 ಕೋಟಿ ರೂ. ಮತ್ತು ಬಿ.ಜಿ.ಶಿರ್ಕೆ ಕನ್ಸ್ಟ್ರಕ್ಷನ್ ಟೆಕ್ನಾಲಜಿ ಪ್ರೈ.ಲಿ. ಬಿಜೆಪಿಗೆ 35 ಕೋಟಿ ರೂ.ಗಳ ದೇಣಿಗೆ ನೀಡಿದ್ದವು.
ಪಾರದರ್ಶಕ ರಾಜಕೀಯ ದೇಣಿಗೆಗಳು ಅಪಾರದರ್ಶಕವಾಗಿ ಪರಿವರ್ತನೆಗೊಂಡಿರುವುದನ್ನು ವಿವರಿಸಿದ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್)ನ ಮುಖ್ಯಸ್ಥ ಅನಿಲ ವರ್ಮಾ ಅವರು, ಈ ಎಲ್ಲ ವರ್ಷಗಳಲ್ಲಿ ಭಾರತದಲ್ಲಿ ಪಕ್ಷ ರಾಜಕೀಯವು ಹೆಚ್ಚು ಸ್ಪರ್ಧಾತ್ಮಕವಾಗಿದ್ದು,ಇದು ಚುನಾವಣೆಗಳಿಗಾಗಿ ಪಕ್ಷಗಳು ಮಾಡುವ ವೆಚ್ಚಗಳು ಹೆಚ್ಚಲು ಕಾರಣವಾಗುತ್ತಿದೆ. ಈ ಹೆಚ್ಚುತ್ತಿರುವ ವೆಚ್ಚಗಳನ್ನು ಪೂರೈಸಲು ಪಕ್ಷಗಳು ಹೆಚ್ಚಾಗಿ ಕಾರ್ಪೊರೇಟ್ ವಲಯಗಳಿಂದ ಉತ್ಪತ್ತಿಯಾಗುವ ಸಂಪನ್ಮೂಲಗಳನ್ನು ಅವಲಂಬಿಸಿವೆ. ಇದು ಅಪಾರದರ್ಶಕ ದೇಣಿಗೆಗಳ ಕಾರ್ಯವಿಧಾನ ಹೆಚ್ಚಲು ಕಾರಣವಾಗಿದೆ. ಯಾವುದೇ ಪಕ್ಷವು ಅಧಿಕಾರದಲ್ಲಿರಲಿ,ಪಕ್ಷಗಳು ತಮ್ಮ ಅನುಕೂಲಕ್ಕಾಗಿ ಇಂತಹ ಕಾರ್ಯವಿಧಾನಗಳನ್ನೇ ಬಳಸಿಕೊಳ್ಳುತ್ತವೆ ಎಂದು ಹೇಳಿದರು.
‘ಕಾಸ್ಟ್ ಆಫ್ ಡೆಮಾಕ್ರಸಿ:ಪೊಲಿಟಿಕಲ್ ಫೈನಾನ್ಸ್ ಇನ್ ಇಂಡಿಯಾ’ ಕೃತಿಯ ಲೇಖಕರಾದ ಈಶ್ವರನ್ ಶ್ರೀಧರನ್ ಮತ್ತು ಮಿಲನ್ ವೈಷ್ಣವ ಅವರ ಪ್ರಕಾರ,ಆರು ರಾಷ್ಟ್ರೀಯ ಪಕ್ಷಗಳು ಸ್ವೀಕರಿಸಿರುವ ಸುಮಾರು ಶೇ.75ರಷ್ಟು ಹಣವು 20,000 ರೂ.ಗಳ ಮಿತಿಗಿಂತ ಕಡಿಮೆ ಅನಾಮಧೇಯ ದೇಣಿಗೆಗಳ ಮೂಲಕ ಹರಿದುಬಂದಿದೆ.