ಯಾವುದೇ ರಾಜಕೀಯ ಪಕ್ಷ ಆದಾಯ ತೆರಿಗೆ ಕಟ್ಟಲ್ಲ, ನಮ್ಮ ಬ್ಯಾಂಕ್ ಆಕೌಂಟ್ ಫ್ರೀಜ್ ಯಾಕೆ? ಕಾಂಗ್ರೆಸ್ ಪ್ರಶ್ನೆ

ನವದೆಹಲಿ: ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆ ಫ್ರೀಜ್ ಹಾಗೂ ಚುನಾವಣಾ ಬಾಂಡ್‌ ವಿಚಾರವಾಗಿ ಆಡಳಿತಾರೂಢ ಬಿಜೆಪಿ ಪಕ್ಷದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಗುರುವಾರ ವಾಗ್ದಾಳಿ ನಡೆಸಿದೆ. ಪಕ್ಷದ ಕೇಂದ್ರ ಕಚೇರಿಯಲ್ಲಿಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ, ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು. ಬಿಜೆಪಿ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಆದಾಯ ತೆರಿಗೆ ಪಾವತಿಸುವುದಿಲ್ಲ, ಆದರೆ ಕಾಂಗ್ರೆಸ್ ಪಕ್ಷದ 11 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಏಕೆ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಜನಸಾಮಾನ್ಯರು ನೀಡಿದ ದೇಣಿಗೆಯನ್ನು ಬಿಜೆಪಿ ಲೂಟಿ ಮಾಡಿದ್ದು, ನಮ್ಮ ಖಾತೆಗಳನ್ನು ಫ್ರೀಜ್ ಮಾಡಿ ಬಲವಂತವಾಗಿ 115.32 ಕೋಟಿ ಹಿಂಪಡೆದಿದೆ. ಬಿಜೆಪಿ ಸೇರಿದಂತೆ ಯಾವುದೇ ರಾಜಕೀಯ ಪಕ್ಷಗಳು ಆದಾಯ ತೆರಿಗೆ ಪಾವತಿಸುವುದಿಲ್ಲ, ಆದರೆ ಕಾಂಗ್ರೆಸ್ ಪಕ್ಷದ 11 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಏಕೆ? ಬ್ಯಾಂಕ್ ಖಾತೆ ಫ್ರೀಜ್ ಮಾಡುವ ಸಮಯವನ್ನು ನೋಡಿ, ಕಾಂಗ್ರೆಸ್ 2017-18 ರಲ್ಲಿ ₹199 ಕೋಟಿ ದೇಣಿಗೆಯನ್ನು ಸ್ವೀಕರಿಸಿದ್ದೇವೆ, ಆದರೆ 7 ವರ್ಷಗಳ ನಂತರ, 13ನೇ ಫೆಬ್ರವರಿ 2024 ರಂದು, 210.25 ಕೋಟಿ ಹೊಣೆಗಾರಿಕೆ ಗುರುತಿಸಲಾಗಿದೆ. ನಮ್ಮ ಬ್ಯಾಂಕ್ ಖಾತೆಗಳನ್ನು ವಾಸ್ತವಿಕವಾಗಿ ಸೀಲ್ ಮಾಡಲಾಗಿದೆ ಮತ್ತು ನಂತರ, ₹115.32 ಕೋಟಿಯನ್ನು ಬಲವಂತವಾಗಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

210 ಕೋಟಿ ರೂ.ಗಳನ್ನು ಸೀಲ್ ಮಾಡಿದ್ದು ಮಾತ್ರವಲ್ಲದೆ, ಕಾಂಗ್ರೆಸ್ ತನ್ನ ಠೇವಣಿ ಮೊತ್ತವಾದ 285 ಕೋಟಿ ರೂ.ಗಳನ್ನು ಬಳಸದಂತೆ ತಡೆಹಿಡಿಯಲಾಗಿದೆ. ಇದು ವಾಸ್ತವಿಕವಾಗಿ ಪ್ರಧಾನ ವಿರೋಧ ಪಕ್ಷದ ಆರ್ಥಿಕತೆಯನ್ನು ಕುಂಠಿತಗೊಳಿಸುವ ಪ್ರಯತ್ನವಾಗಿದೆ. ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಷ್ ಪಕ್ಷಪಾತ ಚುನಾವಣೆ ಅನೀವಾರ್ಯವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತನಾಡಿ, ಈ ಸಮಸ್ಯೆಯು ಕೇವಲ ಕಾಂಗ್ರೆಸ್‌ನ ಮೇಲೆ ಪರಿಣಾಮ ಬೀರುವುದಿಲ್ಲ, ಇದು ನಮ್ಮ ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರುತ್ತದೆ. ಕಾಂಗ್ರೆಸ್ ಪಕ್ಷವನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಪ್ರಧಾನಿ ವ್ಯವಸ್ಥಿತ ಪ್ರಯತ್ನ ನಡೆಸಿದ್ದಾರೆ. ಆದಾಗ್ಯೂ ಅತ್ಯಂತ ಸವಾಲಿನ ಸಂದರ್ಭದಲ್ಲಿಯೂ ನಮ್ಮ ಚುನಾವಣಾ ಪ್ರಚಾರದ ಪರಿಣಾಮಕಾರಿತ್ವವನ್ನು ಕಾಪಾಡಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ .ಒಂದೆಡೆ, ಚುನಾವಣಾ ಬಾಂಡ್ ಸಮಸ್ಯೆ ಸುಪ್ರೀಂ ಕೋರ್ಟ್‌ನಿಂದ ಅಸಂವಿಧಾನಿಕ ಎಂದು ಘೋಷಿಸಲಾಗಿದೆ. ಚುನಾವಣಾ ಬಾಂಡ್‌ಗಳು ಬಿಜೆಪಿಗೆ ಭಾರಿ ಲಾಭ ತಂದುಕೊಟ್ಟಿವೆ. ಮತ್ತೊಂದೆಡೆ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಹಣಕಾಸು ದಾಳಿಗೆ ಒಳಗಾಗಿದೆ. ಇದು ಪ್ರಜಾಪ್ರಭುತ್ವವಲ್ಲ ಎಂದು ನಂಬುತ್ತೇವೆ.

ರಾಹುಲ್ ಗಾಂಧಿ ಮಾತನಾಡಿ, “ಇದು ಕಾಂಗ್ರೆಸ್ ಪಕ್ಷದ ಮೇಲೆ ಪ್ರಧಾನಿ ಮತ್ತು ಗೃಹ ಸಚಿವರು ಮಾಡಿದ ಕ್ರಿಮಿನಲ್ ಕ್ರಮ. ಹಾಗಾಗಿ, ಭಾರತ ಪ್ರಜಾಪ್ರಭುತ್ವ ಎಂಬ ಕಲ್ಪನೆ ಸುಳ್ಳು, ಇಂದು ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ ಎಂಬುದು ಸುಳ್ಳು ಸಂಪೂರ್ಣ ಸುಳ್ಳು ಭಾರತದ ಶೇ.20 ರಷ್ಟು ಜನರು ನಮಗೆ ಮತ ಹಾಕಿದ್ದು, ಯಾವುದಕ್ಕೂ 2 ರೂಪಾಯಿ ಕೊಡಲು ಸಾಧ್ಯವಾಗುತ್ತಿಲ್ಲ.ಚುನಾವಣೆಯಲ್ಲಿ ನಮ್ಮನ್ನು ಕುಗ್ಗಿಸಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು.

Leave a Reply

Your email address will not be published. Required fields are marked *

error: Content is protected !!