ಉಡುಪಿ: ಬೀದಿ ನಾಯಿಗೆ ಅನ್ನ ಹಾಕಿದ ದಲಿತ ಮಹಿಳೆಗೆ ಮಾರಣಾಂತಿಕ ಹಲ್ಲೆ- ದಸಂಸ ತೀವ್ರ ಖಂಡನೆ 

ಉಡುಪಿ: ಇಂದ್ರಾಳಿ ರೈಲ್ವೇ ಸ್ಟೇಶನ್ ಪಕ್ಕದ ದಲಿತ ಮಹಿಳೆ ಬೇಬಿ ಎನ್ನುವವರಿಗೆ ಸ್ಥಳೀಯ ಮೇಲ್ವರ್ಗದ ಚಂದ್ರಕಾಂತ್ ಭಟ್ ಎನ್ನುವವರು ಬೀದಿ ನಾಯಿಗಳಿಗೆ ಅನ್ನ ಹಾಕಿದ ಕಾರಣಕ್ಕೆ ಮಾರಾಣಾಂತಿಕ ಹಲ್ಲೆ ನಡೆಸಿದ್ದನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸುತ್ತದೆ. ಬುದ್ಧಿವಂತರ ಜಿಲ್ಲೆ ಎಂದು ಕರೆಯಲ್ಪಡುವ ಉಡುಪಿ ಜಿಲ್ಲೆಯಲ್ಲೂ ಮೇಲ್ವರ್ಗದವರ ಊಳಿಗಮಾನ್ಯ ಪದ್ದತಿಯ ಮನಸ್ಥಿತಿ ಹಾಗೇ ಮುಂದುವರಿದಿದೆ ಎನ್ನುವುದು ಮತ್ತೋಮ್ಮೆ ಸಾಬಿತಾಗಿದೆ.

ನಿನ್ನೆ ತನ್ನ ದೈನಂದಿನ ದಿನಚರಿಯಂತೆ ಬೀದಿ ನಾಯಿಗಳಿಗೆ ಅನ್ನಹಾಕಿ ಸಲಹಿ ತನ್ನ ಪ್ರಾಣಿ ಪ್ರೀತಿ ಔಧಾರ್ಯ ಮೆರೆಯುತ್ತಿದ್ದ ಸಂದರ್ಭದಲ್ಲಿ ಚಂದ್ರಕಾಂತ ಭಟ್ ಎನ್ನುವವರು ರೀಪಿನಿಂದ ತಲೆಗೆ ಮಾರಾಣಾಂತಿಕವಾಗಿ ಕೊಲೆ ಮಾಡುವ ಉದ್ದೇಶದಿಂದ ಹೊಡೆದಿದ್ದಾರೆ. ಬೇಬಿಯವರ ತಲೆಗೆ ಗಂಭೀರ ಗಾಯಗೊಂಡಿದ್ದು ಜಿಲ್ಲಾ ಅಜ್ಜರಕಾಡು ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುದ್ದಿ ತಿಳಿದ ತಕ್ಷಣ ದ.ಸಂ.ಸ‌ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ ಮಾಸ್ತರ್ ನೇತ್ರತ್ವದಲ್ಲಿ ದ.ಸಂ‌.ಸ ನಿಯೋಗ ಆಸ್ಪತ್ರೆಗೆ ಭೇಟಿ ನೀಡಿದ್ದು,ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿ ಘಟನೆಯ ಮಾಹಿತಿ ಪಡೆದರು. ಈ ಹಲ್ಲೆಯನ್ನು ಉಗ್ರವಾಗಿ ಖಂಡಿಸಿದ ದಲಿತ ಸಂಘರ್ಷ ಸಮಿತಿಯು, ಆರೋಪಿಗೆ ಯಾವ ಕಾರಣಕ್ಕೂ ಜಾಮೀನು ಸಿಗಬಾರದು. ಮೇಲ್ವರ್ಗದವರ ಗೂಂಡಾಗಿರಿ ದಲಿತರ ಮೇಲೆ ನಿರಂತರವಾಗಿ ನಡೆಯುತ್ತಿದೆ. ಈಗ ಉಡುಪಿಯ ಪೋಲಿಸ್ ವ್ಯವಸ್ಥೆ ತೀರಾ ಹದಗೆಟ್ಟಿದ್ದು ದಲಿತರಿಗೆ ರಕ್ಷಣೆಯೇ ಇಲ್ಲವಾಗಿದೆ. ಆರೋಪಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ದ.ಸಂ.ಸ ಆಗ್ರಹಿಸುತ್ತದೆ‌.

ತಲೆ ಒಡೆದು ಕೊಲೆಗೆ ಪ್ರಯತ್ನಿಸಿದ ಆರೋಪಿಗೆ ಸಣ್ಣ ಪುಟ್ಟ ಕೇಸುಗಳನ್ನು ಹಾಕಿ, ಆತನಿಗೆ ಜಾಮೀನು ಸಿಗುವಂತೆ ಪ್ರಯತ್ನಿಸಿದರೆ ದ.ಸಂ.ಸ. ದೊಡ್ಡ ಪ್ರತಿಭಟನೆಗೆ ಕರೆಕೊಡಬೇಕಾಗಬಹುದು ಎಂದು ದ.ಸಂ.ಸ. ಪದಾಧಿಕಾರಿಗಳಾದ ಸುಂದರ ಮಾಸ್ತರ್, ಮಂಜುನಾಥ ಗಿಳಿಯಾರು, ಶ್ಯಾಮರಾಜ್ ಬಿರ್ತಿ, ವಾಸುದೇವ ಮುದೂರು, ಭಾಸ್ಕರ್ ಮಾಸ್ತರ್, ಪರಮೇಶ್ವರ ಉಪ್ಪೂರು, ಶ್ಯಾಮಸುಂದರ್ ತೆಕ್ಕಟ್ಟೆ, ಶ್ರಿಪತಿ ಕುಂಜಿಬೆಟ್ಟು, ಶ್ರೀಧರ್, ರಾಜುಬೆಟ್ಟಿನಮನೆ, ಮಂಜುನಾಥ ಬಾಳ್ಕದ್ರು, ಉಡುಪಿ ನಗರ ಸಭಾ ಸದಸ್ಯ ರಾಜು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!