ಬಿಜೆಪಿಯ ಶೇ.90ರಷ್ಟು ದೇಣಿಗೆ ನೀತಿಸಂಹಿತೆ ಅವಧಿಯಲ್ಲೇ ಬಂದಿದೆ: ಅಮಿತ್ ಶಾ

ಹೊಸದಿಲ್ಲಿ: ಭಾರತದ ಚುನಾವಣಾ ಆಯೋಗ ಯಾವುದೇ ಕ್ಷಣದಲ್ಲಿ ಚುನಾವಣಾ ಬಾಂಡ್ ಗಳನ್ನು ಬಹಿರಂಗಪಡಿಸುವ ಸಾಧ್ಯತೆ ಇರುವ ಬೆನ್ನಲ್ಲೇ, ಗೃಹಸಚಿವ ಅಮಿತ್ ಶಾ ಬುಧವಾರ ಹೇಳಿಕೆ ನೀಡಿ, ಕಾನೂನು ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ಚುನಾವಣಾ ಬಾಂಡ್ ಮೂಲಕ ದೇಣಿಗೆ ಸಂಗ್ರಹಿಸುವ ಅಸ್ತ್ರವಾಗಿ ಬಿಜೆಪಿ ಬಳಸಿ ಕೊಂಡಿದೆ ಎಂಬ ಆರೋಪಗಳನ್ನು ಬಲವಾಗಿ ಅಲ್ಲಗಳೆದಿದ್ದಾರೆ. ಪಕ್ಷಕ್ಕೆ ಬಂದಿರುವ ಶೇಕಡ 90ರಷ್ಟು ದೇಣಿಗೆಗಳು ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಬಂದಿವೆ ಎಂದು ಸಮರ್ಥಿಸಿಕೊಂಡಿದ್ದಾರೆ.

“2019ರಲ್ಲಿ ನಮಗೆ ದೊಡ್ಡ ಪ್ರಮಾಣದ ದೇಣಿಗೆ ಮಾದರಿ ನೀತಿಸಂಹಿತೆ ಜಾರಿಯಲ್ಲಿರುವ ಅವಧಿಯಲ್ಲಿ ಬಂದಿದೆ. ಈ ಅವಧಿಯಲ್ಲಿ ಯಾವುದೇ ಹೊಸ ಯೋಜನೆ ಅಥವಾ ನೀತಿಗಳನ್ನು ಘೋಷಿಸುವಂತಿಲ್ಲ. ನಮಗೆ ಬಂದಿರುವ ಶೇ.90ರಷ್ಟು ದೇಣಿಗೆಗಳು ಎಂಸಿಸಿ ಜಾರಿಯಲ್ಲಿರುವ ಅವಧಿಯಲ್ಲಿ ಬಂದಿವೆ. ಆದ್ದರಿಂದ ಇದು ಸರ್ಕಾರಿ ನೀತಿಗಳ ಮೇಲೆ ಪ್ರಭಾವ ಬೀರಿದೆ ಎಂಬ ವಾದ ಸುಳ್ಳು” ಎಂದು ಅವರು ಹೇಳಿದರು. ಕಾನೂನು ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆಯ ಕ್ರಮಗಳ ಬಳಿಕ ಬಿಜೆಪಿಗೆ ಕಾರ್ಪೊರೇಟ್ ಕಂಪನಿಗಳ ದೇಣಿಗೆಗಳು ಹರಿದಿವೆ ಎಂಬ ಆರೋಪವನ್ನು ಅಲ್ಲಗಳೆದರು.

ನ್ಯೂಸ್18 ಸಮೂಹ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ಬಿಜೆಪಿ ವಸೂಲಿ ದಂಧೆಗೆ ಇಳಿದಿದೆ ಎಂಬ ಕಾಂಗ್ರೆಸ್ ಮುಖಂಡ ರಾಹುಲ್ ಹೇಳಿಕೆಯನ್ನು ಕಟುವಾಗಿ ಟೀಕಿಸಿದರು. “ಹಾಗಾದರೆ ಕಾಂಗ್ರೆಸ್ ಪಕ್ಷ 1600 ಕೋಟಿ ರೂಪಾಯಿಗಳನ್ನು ಬಾಂಡ್ ಗಳ ಮೂಲಕ ಹೇಗೆ ಪಡೆದಿದೆ” ಎಂದು ಪ್ರಶ್ನಿಸಿದರು. ಇಂಡಿಯಾ ಮೈತ್ರಿಕೂಟ ಹೇಗೆ ಬಾಂಡ್ ಗಳ ಮೂಲಕ ಹಣ ಪಡೆದಿದೆ? ಇಂಡಿಯಾ ಕೂಟದ ಡಿಎಂಕೆ, ಟಿಎಂಸಿ ಕೂಡಾ ವಸೂಲಿಗೆ ಇಳಿದಿವೆ ಎಂದು ರಾಹುಲ್ ಒಪ್ಪಿಕೊಂಡಂತಲ್ಲವೇ ಎಂದು ಶಾ ಕೇಳಿದರು.

ಚುನಾವಣಾ ಬಾಂಡ್ ಗಳ ವಿವರಗಳನ್ನು ಆಯೋಗ ಬಹಿರಂಗಪಡಿಸಿದ ಬಳಿಕ ಅಡಗಿಕೊಳ್ಳಲು ಇವರಿಗೆ ಜಾಗವೇ ಇರುವುದಿಲ್ಲ ಎಂದ ಅಮಿತ್ ಶಾ, ಇಂಡಿಯಾ ಮೈತ್ರಿಕೂಟದ ಪಕ್ಷಗಳು ಇದೇ ಸಾಧನದ ಮೂಲಕ ಪಡೆದ ಹಣಕ್ಕಿಂತ ಹೆಚ್ಚಿನ ದೇಣಿಗೆಯನ್ನೇನೂ ಬಿಜೆಪಿ ಪಡೆದಿಲ್ಲ ಎಂದು ಸಮರ್ಥಿಸಿಕೊಂಡರು.

Leave a Reply

Your email address will not be published. Required fields are marked *

error: Content is protected !!