ಮೂರು ತಿಂಗಳ ವೇತನ ಬಾಕಿ, ವೇತನ ಕಡಿತ: 108 ಸಿಬ್ಬಂದಿಗಳಿಂದ ಮುಷ್ಕರದ ಬೆದರಿಕೆ
ಉಡುಪಿ: ರಾಜ್ಯದ ಆರೋಗ್ಯ ಇಲಾಖೆಯ 108 ಆರೋಗ್ಯ ಕವಚ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಳೆದ ಮೂರು ತಿಂಗಳಿಂದ ವೇತನ ಬಾಕಿ ಹಾಗೂ 2023ರ ಎಪ್ರಿಲ್ ತಿಂಗಳಿನಿಂದ ವೇತನದಲ್ಲಿ ಏಕಾಏಕಿ ಮಾಡಿರುವ ಆರು ಸಾವಿರ ರೂ.ಕಡಿತಕ್ಕೆ ಕಾರಣ ನೀಡಿ ಸರಿಪಡಿಸುವಂತೆ ಆಗ್ರಹಿಸಿ ಸುವರ್ಣ ಕರ್ನಾಟಕ ಆರೋಗ್ಯ ಕವಚ ನೌಕರರ ಸಂಘ ಸಂಬಂಧಿತರಿಗೆ ಮನವಿ ಸಲ್ಲಿಸಿದ್ದು ಹತ್ತು ದಿನಗಳ ಗಡುವು ನೀಡಿದೆ ಎಂದು ಸಂಘದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಕೊಟ್ರಪ್ಪ ಜಿ. ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೊಟ್ರಪ್ಪ, ಇಡೀ ರಾಜ್ಯದಲ್ಲಿ ಇದೇ ಪರಿಸ್ಥಿತಿ ಇದ್ದು, ಆರೋಗ್ಯ ಕವಚ ಯೋಜನೆಯಲ್ಲಿ ಕಾರ್ಯಾಚರಿಸುತ್ತಿರುವ 3500ಕ್ಕೂ ಅಧಿಕ ಸಿಬ್ಬಂದಿಗಳು ಇದರಿಂದ ಭಾರೀ ತೊಂದರೆ ಅನುಭವಿಸುತಿದ್ದಾರೆ ಎಂದು ದೂರಿದರು.
ಉಡುಪಿ ಜಿಲ್ಲೆಯಲ್ಲಿ ಒಟ್ಟು 18 ಆರೋಗ್ಯ ಕವಚ ಅಂಬುಲೆನ್ಸ್, ಗಳಿದ್ದು ಇದರಲ್ಲಿ 45 ಮಂದಿ ಚಾಲಕರು ಹಾಗೂ 45 ಮಂದಿ ನರ್ಸ್‌ಗಳು ಸೇರಿ 90 ಮಂದಿ ಸಿಬ್ಬಂದಿಗಳು ದುಡಿಯುತಿದ್ದಾರೆ. ಸದ್ಯ ಜಿಲ್ಲೆಯಲ್ಲಿ 45 ಚಾಲಕರು ಹಾಗೂ 15 ಮಂದಿ ನರ್ಸ್‌ಗಳು ಸೇರಿ 60 ಹುದ್ದೆಗಳನ್ನು ಮಾತ್ರ ತುಂಬಿದ್ದು, 30 ನರ್ಸ್ ಹುದ್ದೆ ಖಾಲಿ ಇದೆ ಎಂದವರು ವಿವರಿಸಿದರು.
ವೇತನದ ವಿಚಾರದಲ್ಲಿ 108 ಆರೋಗ್ಯ ಕವಚ ಸಿಬ್ಬಂದಿಗಳು ಕಳೆದ ಐದಾರು ವರ್ಷಗಳಿಂದ ತೊಂದರೆ ಎದುರಿಸುತಿದ್ದು, ಗುತ್ತಿಗೆದಾರರಾದ ಜಿವಿಕೆ ಸಂಸ್ಥೆ ಹಾಗೂ ಸರಕಾರದ ನಡುವೆ ಆದ ಒಪ್ಪಂದದಂತೆ ವಾರ್ಷಿಕ ವೇತನ ಹೆಚ್ಚಳ ಆಗಬೇಕಿತ್ತು. ಇದರೊಂದಿಗೆ 2023ರಲ್ಲಿ ಆಗಬೇಕಿದ್ದ ಶೇ.15 ವೇತನ ಪರಿಷ್ಕರಣೆಯೂ ಆಗಿಲ್ಲ.ಆದರೂ ಇತ್ತೀಚೆಗೆ ಆರೋಗ್ಯ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ ಕನಿಷ್ಠ ವೇತನವನ್ನು ಜಾರಿ ಮಾಡಿದ್ದು, 108 ಸಿಬ್ಬಂದಿಗಳ ವೇತನವನ್ನು 36,080ರೂ.ಗಳಿಗೆ ನಿಗದಿ ಮಾಡಲಾಗಿತ್ತು ಎಂದು ಕೊಟ್ರಪ್ಪ ತಿಳಿಸಿದರು.
ಈ ವೇತನವನ್ನು ಸುಮಾರು ಆರು ತಿಂಗಳು ನೀಡಿದ ಬಳಿಕ, ಕಳೆದ ಎಪ್ರಿಲ್ ತಿಂಗಳಿನಿಂದ ವೇತನದಲ್ಲಿ ಏಕಾಏಕಿ 6,000ರೂ. ಕಡಿತ ಮಾಡಿದ್ದು, ಇದಕ್ಕೆ ಕಂಪೆನಿ ಯಾವುದೇ ಕಾರಣಗಳನ್ನು ನೀಡಿಲ್ಲ. ಹೀಗಾಗಿ ನಮಗೀಗ 30,000 ರೂ. ವೇತನ ಮಾತ್ರ ಸಿಗುತಿದ್ದು, ಅದರಲ್ಲೂ ಪಿಎಫ್ ಕಡಿತವಾಗಿ 28,287 ರೂ. ಕೈಗೆ ಸಿಗುತ್ತಿದೆ. ಈ ನಡುವೆ ಅಂಬುಲೆನ್ಸ್‌ನಲ್ಲಿ ದುಡಿಯುತ್ತಿರುವ ಸಿಬ್ಬಂದಿಗಳ ವೇತನವನ್ನು ಇನ್ನಷ್ಟು ಕಡಿತ ಮಾಡಲಾಗುತ್ತಿದೆ ಎಂಬ ಸಂದೇಶ ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದ್ದು ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿದೆ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ನಾವು ಕಳೆದ ಡಿಸೆಂಬರ್‌ನಿಂದ ಬಾಕಿ ಇರುವ ಮೂರು ತಿಂಗಳ ವೇತನವನ್ನು ಕೂಡಲೇ ಬಿಡುಗಡೆ ಗೊಳಿಸುವಂತೆ ರಾಜ್ಯ ಆರೋಗ್ಯ ಸಚಿವರಿಗೆ ಮನವಿಯನ್ನು ಮಾಡಿದ್ದೇವೆ. ಅಲ್ಲದೇಕಾರಣಗಳಿಲ್ಲದೇ ಕಡಿತವಾಗಿರುವ ಸಂಬಳವನ್ನು ಮತ್ತೆ ನೀಡಬೇಕೆಂದೂ ಮನವಿ ಮಾಡಿದ್ದೇವೆ ಎಂದವರು ತಿಳಿಸಿದರು.
ಇದೀಗ ಜಿಲ್ಲಾ ಸಿಬ್ಬಂದಿಗಳ ಪರವಾಗಿ ನಾವು ಉಡುಪಿ ಜಿಲ್ಲಾದಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಮುಂದಿನ 10 ದಿನಗಳಲ್ಲಿ ನಮ್ಮ ಮನವಿಗೆ ಸ್ಪಂಧಿಸುವಂತೆ ತಿಳಿಸಿದ್ದು, ಇಲ್ಲದಿದ್ದರೆ ರಾಜ್ಯ ಸಂಘ ಕೈಗೊಳ್ಳುವ ನಿರ್ಧಾರದಂತೆ ನಾವು ಮುಷ್ಕರ ನಡೆಸುವುದಕ್ಕೂ ಹಿಂಜರಿಯುವುದಿಲ್ಲ ಎಂದು ಕೊಟ್ರಪ್ಪ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಕಿಶೋರ್‌ಕುಮಾರ್, ಶಾಂತಗೌಡ ಹಾಗೂ ವಿಶ್ವನಾಥ್ ಉಪಸ್ಥಿತರಿದ್ದರು.