ಕಾಪು: ಮಾರಿಗುಡಿಗಳಲ್ಲಿ ಮಾ.26-27 ರವರೆಗೆ ಕಾಲಾವಧಿ ಸುಗ್ಗಿ ಮಾರಿಪೂಜೆ
ಕಾಪು: ಶ್ರೀಹಳೇ ಮಾರಿಗುಡಿ ದೇವಸ್ಥಾನ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಮತ್ತು 3ನೇ ಮಾರಿಗುಡಿ ದೇವಸ್ಥಾನದಲ್ಲಿ ಏಕಕಾಲದಲ್ಲಿ ಜರಗುವ ಇತಿಹಾಸ ಪ್ರಸಿದ್ಧ ಕಾಲಾವಧಿ ಸುಗ್ಗಿ ಮಾರಿಪೂಜೆಯು ಮಾ.26 ಮತ್ತು 27ರಂದು ನಡೆಯಲಿದೆ.
ಕಾಪುವಿನ ಮೂರೂ ಮಾರಿಗುಡಿಗಳಲ್ಲಿ 2 ದಿನಗಳ ಕಾಲ ಏಕಕಾಲದಲ್ಲಿ ನಡೆಯುವ ಕಾಲಾವಧಿ ಸುಗ್ಗಿ ಮಾರಿಪೂಜೆಗೆ ಉಡುಪಿ ಜಿಲ್ಲೆ ಮಾತ್ರವಲ್ಲದೇ ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಕಾಸರಗೋಡು, ಬೆಂಗಳೂರು, ಮುಂಬಯಿ ಹಾಗೂ ದೇಶ-ವಿದೇಶಗಳಿಂದಲೂ ಲಕ್ಷಾಂತರ ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದು ವಿವಿಧ ಹರಕೆ, ಸೇವೆಗಳನ್ನು ಸಲ್ಲಿಸುತ್ತಾರೆ.
ಸುಗ್ಗಿ ಮಾರಿಪೂಜೆ ಪ್ರಯುಕ್ತ ಮಾ.26ರಂದು ರಾತ್ರಿ ಹಳೇ ಮಾರಿಗುಡಿಗೆ ವೆಂಕಟರಮಣ ದೇವಸ್ಥಾನದಿಂದ ಹಾಗೂ ಹೊಸ ಮಾರಿಗುಡಿ ಮತ್ತು 3ನೇ ಮಾರಿಗುಡಿಗೆ ಶ್ರೀಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಮಾರಿಯಮ್ಮ ದೇವಿಯ ಬಿಂಬ ಮತ್ತು ಚಿನ್ನಾಭರಣಗಳನ್ನು ಮೆರವಣಿಗೆ ಮೂಲಕ ತಂದು ಗದ್ದೆಗೆಯೇರಿಸಿ ಮಾರಿಪೂಜೆಯ ಧಾರ್ಮಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.
ಮಾ.27ರಂದು ಸಂಜೆ ದರ್ಶನ ಸೇವೆ ನಡೆದು ಬಳಿಕ ಮಾರಿಯಮ್ಮ ದೇವಿಯ ಬಿಂಬ ವಿಸರ್ಜಿಸಲಾಗುತ್ತದೆ. ಕಾಪುವಿನ 3 ಮಾರಿಗುಡಿಗಳಲ್ಲೂ ಮಾರಿಪೂಜೆಗಾಗಿ ವಿವಿಧ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಶ್ರೀ ಹಳೇ ಮಾರಿಗುಡಿಯ ಆಡಳಿತ ಮೊಕ್ತೇಸರ ಪ್ರಸಾದ್ ಜಿ. ಶೆಣೈ, ಹೊಸ ಮಾರಿಗುಡಿ ದೇವಸ್ಥಾನದ ಆಡಳಿತಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ ಮತ್ತು ಕಾರ್ಯನಿರ್ವಹಣಾಧಿಕಾರಿ ರವಿಕಿರಣ್ ಕೆ. ಹಾಗೂ 3ನೇ ಮಾರಿಗುಡಿಯ ಕಾರ್ಯನಿರ್ವಹಣಾಧಿಕಾರಿ ಅರುಣ್ ಕುಮಾರ್ ಬಿ.ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.