ಉಡುಪಿ ಜಿಲ್ಲಾ ಆಸ್ಪತ್ರೆಯ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸಲು ಮನವಿ

ಉಡುಪಿ: ಕಳೆದ ಹಲವು ತಿಂಗಳಿನಿಂದ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸರ್ಜನ್ ನಿಯುಕ್ತಿ ಇಲ್ಲದ ಕಾರಣ ಆಸ್ಪತ್ರೆಯಲ್ಲಿ ಸಾಕಷ್ಟು ಅವ್ಯವಸ್ಥೆ ಇದ್ದು ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿದ್ದರು. ಈ ನಿಟ್ಟಿನಲ್ಲಿ ಈ ಸಮಸ್ಯೆಗಳ ಬಗ್ಗೆ ಗಮನಹರಿಸಿ ಪರಿಹರಿಸಿ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ನೀಡುವಂತೆ ಉಡುಪಿ ಶಾಸಕರಾದ ಯಶಪಾಲ್ ಸುವರ್ಣ ಹಾಗೂ ಉಡುಪಿ ಜಿಲ್ಲಾಸ್ಪತ್ರೆಗೆ ನೂತನವಾಗಿ ನಿಯುಕ್ತಿಗೊಂಡ ಜಿಲ್ಲಾ ಸರ್ಜನ್ ಡಾ.ಅಶೋಕ್ ಎಚ್. ಅವರಿಗೆ ಮನವಿ ಸಲ್ಲಿಸಲಾಯಿತು.

ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಸರಿಯಾಗಿ ಮಾಹಿತಿ ನೀಡಿ ರೋಗಿಗಳಿಗೆ ಈ ಯೋಜನೆಯ ಸದುಪಯೋಗ ಪಡೆಯುವಲ್ಲಿ ಯಾವುದೇ ವಿಳಂಬ ಮಾಡದೆ ಮಾರ್ಗದರ್ಶನ ನೀಡುವುದು ಮತ್ತು ತುರ್ತು ಸಂದರ್ಭಗಳಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಹೋದವರಿಗೆ ಯಾವುದೇ ತೊಂದರೆ ನೀಡದೆ ಬೇಕಾದ ಶಿಫಾರಸು ಪತ್ರಗಳನ್ನು ನೀಡುವುದು.

ಬ್ಲಡ್ ಬ್ಯಾಂಕ್ ನಲ್ಲಿ ರಕ್ತದ ನಿರ್ವಹಣೆಯಲ್ಲಿ ಸಾಕಷ್ಟು ನ್ಯೂನ್ಯತೆಗಳಿದ್ದು ಇದರ ವೈಧ್ಯಾಧಿಕಾರಿಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲಾ ಮತ್ತು ಕೇವಲ ಒಂದು ಯುನಿಟ್ ರಕ್ತವನ್ನು ಯಾವುದೇ ರಕ್ತದಾನಿಯ ಮರುಪೂರೈಕೆ ಇಲ್ಲದ ನೀಡುತ್ತಿದ್ದು ಹೆಚ್ಚುವರಿ ರಕ್ತ ಬೇಕಾದಲ್ಲಿ ಕಡ್ಡಾಯವಾಗಿ ರಕ್ತದಾನಿಯನ್ನು ಕರೆ ತರುವಂತೆ ಒತ್ತಾಯಿಸುವುದು. ಸಂಜೆ 4 ಗಂಟೆಯ ನಂತರ ರಕ್ತನಿಧಿ ವಿಭಾಗದಲ್ಲಿ ರಕ್ತದಾನಕ್ಕೆ ಅವಕಾಶ ಇಲ್ಲದಿರುವುದು. ರಕ್ತದ ತುರ್ತು ಅವಶ್ಯಕತೆ ಇದ್ದರೂ ಇವರು ಸಂಪರ್ಕಕ್ಕೆ ಸಿಗುವುದಿಲ್ಲ ಹಾಗೂ ರಕ್ತ ಪಡೆಯಲು ಹರ ಸಾಹಸ ಮಾಡಬೇಕಾಗುತ್ತದೆ ಎಂದು ದೂರಲಾಗಿದೆ.

ಉಡುಪಿ ಜಿಲ್ಲೆಯ ಎಲ್ಲಾ‌ ರಕ್ತನಿಧಿ ಕೇಂದ್ರ ಸಂಜೆ 7 ಗಂಟೆಯವರೆಗೆ ರಕ್ತದಾನಕ್ಕೆ ಅವಕಾಶವಿದ್ದು ಜಿಲ್ಲಾ ಆಸ್ಪತ್ರೆಯಲ್ಲು ರಕ್ತದಾನಿಗಳಿಗೆ ರಕ್ತದಾನ ಮಾಡಲು ಸಂಜೆ 7 ಗಂಟೆಯವರೆಗೆ ಅವಕಾಶ ನೀಡಬೇಕು.

ಲ್ಯಾಬ್ ರಿಪೋರ್ಟ್ ಗಳನ್ನು ನೀಡುವಲ್ಲಿ ಬಹಳ ವಿಳಂಬವನ್ನು ತೋರಿಸುತ್ತಿದ್ದು ಸಾಮಾನ್ಯ ರಕ್ತ ಪರೀಕ್ಷೆಯ ರಿಪೋರ್ಟ್ ಗಳಿಗೂ 2 ದಿನ ತೆಗೆದುಕೊಳ್ಳುತ್ತಿದ್ದಾರೆ. ಸ್ಕಾನಿಂಗ್ ಸೆಂಟರ್ ನಲ್ಲಿ ಸಿಬ್ಬಂದಿ ಕೊರತೆ ಇದ್ದು ರೋಗಿಗಳು ಬಹಳ ಹೊತ್ತು ಕಾಯುವ ಪರಿಸ್ಥಿತಿ ಇದೆ. ಔಷಧದ ಲಭ್ಯತೆಯ ಕೊರತೆ ಇದ್ದು ರೋಗಿಗಳಿಗೆ ಔಷಧಗಳು ಲಭ್ಯವಾಗುವಂತೆ ಮಾಡಬೇಕು.ಆಸ್ಪತ್ರೆಯ ಶುಚಿತ್ವ ಮತ್ತು ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಕೊಡಬೇಕು.

ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಸಿಬ್ಬಂದಿಗಳ ವೇತನವನ್ನು ಸರಿಯಾದ ಸಮಯಕ್ಕೆ ನೀಡಿ ಆಸ್ಪತ್ರೆಗೆ ಬರುವ ರೋಗಿಗಳ ಸೇವೆಯಲ್ಲಿ ಯಾವುದೇ ವ್ಯತ್ಯವಾಗದಂತೆ ನೋಡಿಕೊಳ್ಳುವುದರ ಬಗ್ಗೆ ಮನವಿ ನೀಡಲಾಯಿತು.

ಈ ಸಂಧರ್ಭದಲ್ಲಿ ನಗರಸಭಾ ಸದಸ್ಯ ವಿಜಯ ಕೊಡವೂರು, ಸತೀಶ್ ಸಾಲ್ಯಾನ್ ಮಣಿಪಾಲ, ರತ್ನಾಕರ್ ಶೆಟ್ಟಿ ಆತ್ರಾಡಿ, ಪ್ರಜೀತ್ ಮಲ್ಪೆ, ಅನಿಲ್ ಹನುಮಂತ ನಗರ ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!