ಸಿಎಂ ಸಿದ್ದರಾಮಯ್ಯ ನಾನೇ ಸ್ಟ್ರಾಂಗ್ ಎನ್ನುವ ಹೇಳಿಕೆ- 5 ವರ್ಷ ಸಿಎಂ ಆಗಿರುವ ಖಾತರಿಯೇ ನಿಮಗಿಲ್ಲ- ಸಿ.ಟಿ.ರವಿ

ಬೆಂಗಳೂರು, ಮಾ 20: ನಾನೇ ಸ್ಟ್ರಾಂಗ್ ಎನ್ನುವ ಸಿದ್ದರಾಮಯ್ಯನವರೇ ನಿಮ್ಮ ಪರಿಸ್ಥಿತಿ ಏನಿದೆ? 5 ವರ್ಷ ಸಿಎಂ ಆಗಿರುವ ಖಾತರಿಯೇ ನಿಮಗಿಲ್ಲ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ತಿಳಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೇ 5ವರ್ಷ ಸಿಎಂ, ಸಿದ್ದರಾಮಯ್ಯನವರೇ 5ವರ್ಷ ಸಿಎಂ ಎಂದು ಹೇಳಿಸಿಕೊಳ್ಳುವ ಸ್ಥಿತಿ ಅವರದು. ದುರ್ಬಲ ಆಡಳಿತ ಸಿದ್ದರಾಮಯ್ಯರದು. ಕಳೆದೊಂದು ವರ್ಷವನ್ನು ಗಮನಿಸಿದರೆ ಆಡಳಿತದ ಹಿಡಿತವೇ ಅವರಿಗೆ ಸಿಕ್ಕಿಲ್ಲ ಎಂದು ಅರಿವಾಗುತ್ತದೆ ಟೀಕಿಸಿದರು.

ನೀವೇ ನೇಮಕ ಮಾಡಿಕೊಂಡ ರಾಜಕೀಯ ಕಾರ್ಯದರ್ಶಿ, ಮುಖ್ಯಮಂತ್ರಿಗಳ ಸಲಹೆಗಾರರು ‘ಅಭಿವೃದ್ಧಿಗೆ ಬಿಡಿಗಾಸೂ ಕೊಡುತ್ತಿಲ್ಲ’ ಎಂದು ನಿಮ್ಮ ಗುಣಗಾನ ಮಾಡಿದ್ದಾರೆ ಎಂದು ವ್ಯಂಗ್ಯವಾಗಿ ತಿಳಿಸಿದರು.ಹಿರಿಯ ಸಚಿವರು ಮತ್ತು ಶಾಸಕರೇ ನಿಮ್ಮ ಸ್ಟ್ರಾಂಗ್ ಆಡಳಿತಕ್ಕೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ.ನಿಮ್ಮ ಸರಕಾರದ ನೀತಿಯ ಪರಿಣಾಮವಾಗಿ ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳಾ ದೌರ್ಜನ್ಯ ಮಾತ್ರವಲ್ಲ ಬೆತ್ತಲೆ ಮೆರವಣಿಗೆ ನಡೆಯುತ್ತಿದೆ. ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಆಗುತ್ತದೆ. ಹನುಮಾನ್ ಚಾಲೀಸ ಹಾಕುವುದು ಕೂಡ ಗಲಭೆಗೆ ಕಾರಣವಾಗುವಷ್ಟು ಆಡಳಿತ ಹದಗೆಟ್ಟಿದೆ ಎಂದು ಟೀಕಿಸಿದರು.

ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಇನ್ನೇನು ಸಾಕ್ಷಿ ಬೇಕು ಎಂದು ಅವರು ಪ್ರಶ್ನಿಸಿದರು. ಮುಖ್ಯಮಂತ್ರಿಗಳ ಜೊತೆಗೆ ಶ್ಯಾಡೋ ಮುಖ್ಯಮಂತ್ರಿ, ಸೂಪರ್ ಸಿಎಂ- ಇವರೆಲ್ಲರೂ ಸಕ್ರಿಯರಾಗಿದ್ದಾರೆ. ಮುಖ್ಯಮಂತ್ರಿ ದುರ್ಬಲವಾಗಿದ್ದಾರೆ ಎಂದೇ ಇದರ ಅರ್ಥ ಎಂದು ಅವರು ವಿಶ್ಲೇಷಣೆ ಮಾಡಿದರು.
ಮುಖ್ಯಮಂತ್ರಿಗಳು ತಮ್ಮ ಟ್ವೀಟ್‍ನಲ್ಲಿ ‘ನಾನೇ ಸ್ಟ್ರಾಂಗ್ ಸಿಎಂ; ವೀಕ್ ಪಿಎಂ’ ಎಂದಿದ್ದಾರೆ. ಯಾರು ತನ್ನನ್ನು ತಾನು ಸ್ಟ್ರಾಂಗ್ ಎನ್ನುವವರು ವೀಕ್ ಆಗಿರುತ್ತಾರೆ. ಮೋದಿಜೀ ಅವರು ಬಲಿಷ್ಠ ನಾಯಕ ಎಂದು ಕೇವಲ ನಮ್ಮ ಪಕ್ಷ, ನಮ್ಮ ನಾಯಕರು ಮತ್ತು ಕಾರ್ಯಕರ್ತರು ಹೇಳುತ್ತಿಲ್ಲ. ದೇಶದ ಜನತೆ ಮಾತ್ರವಲ್ಲದೆ ವಿಶ್ವದ ಅಗ್ರಗಣ್ಯ ನಾಯಕರು ಮೋದಿಯವರನ್ನು ಅತ್ಯಂತ ಬಲಿಷ್ಠ ನಾಯಕರು ಎನ್ನುತ್ತಾರೆ ಎಂದು ಸಿ.ಟಿ.ರವಿ ಅವರು ವಿಶ್ಲೇಷಿಸಿದರು. ಅಮೆರಿಕದ ಅಧ್ಯಕ್ಷರು ಮೋದಿಯವರು ವಿಶ್ವದ ಪ್ರಖ್ಯಾತ ನಾಯಕ ಎನ್ನುತ್ತಾರೆ. ಇಸ್ರೇಲ್ ಪ್ರಧಾನಿ ಕೂಡ ಮೋದಿಜೀ ಅವರನ್ನು ಅತ್ಯಂತ ಜನಪ್ರಿಯ ನಾಯಕ ಎಂದಿದ್ದಾರೆ. ಜಗತ್ತಿನ 11 ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಮೋದಿಯವರಿಗೆ ನೀಡಿವೆ ಎಂದು ಅವರು ವಿವರಿಸಿದರು. ಅತಿ ಹೆಚ್ಚು ವಿದೇಶದ ನಾಗರಿಕ ಪ್ರಶಸ್ತಿಯನ್ನು ಮೋದಿಯವರು ಪಡೆದುಕೊಂಡಿದ್ದಾರೆ ಎಂದರು

Leave a Reply

Your email address will not be published. Required fields are marked *

error: Content is protected !!