ರಾಮೇಶ್ವರಂ ಕೆಫೆ ಸ್ಪೋಟ: ತಮಿಳುನಾಡಿನವರು ಬಾಂಬ್ ಇರಿಸಿದ್ದಾರೆಂದ ಶೋಭಾ ವಿರುದ್ಧ ಚುನಾವಣಾ ಆಯೋಗಕ್ಕೆ ಡಿಎಂಕೆ ದೂರು
ಚೆನ್ನೈ: ಮಾರ್ಚ್ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿದ್ದ ಬಾಂಬ್ ಸ್ಫೋಟಕ್ಕೆ ತಮಿಳುನಾಡು ವ್ಯಕ್ತಿ ಕಾರಣ ಎಂದು ಆರೋಪಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಎಂ.ಕೆ.ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಶೋಭಾ ಕರಂದ್ಲಾಜೆಯವರ ಹೇಳಿಕೆಯನ್ನು ಖಂಡಿಸಿರುವ ಶೋಭಾ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್, ಇದೊಂದು ಬೇಜವಾಬ್ದಾರಿ ಹೇಳಿಕೆಯಾಗಿದ್ದು, ತಮಿಳರು ಹಾಗೂ ಕನ್ನಡಿಗರು ಇಬ್ಬರೂ ಈ ಹೇಳಿಕೆಯನ್ನು ತಿರಸ್ಕರಿಸುತ್ತಾರೆ ಎಂದು ಹೇಳಿದ್ದಾರೆ.
ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವ ಡಿಎಂಕೆ, ಈ ಹೇಳಿಕೆಯು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಕನ್ನಡಿಗರು ಹಾಗೂ ತಮಿಳುನಾಡು ಜನರ ನಡುವೆ ದ್ವೇಷವನ್ನು ಹರಡಲು ಈ ಹೇಳಿಕೆಯನ್ನು ನೀಡಲಾಗಿದೆ ಎಂದು ಆರೋಪಿಸಿದೆ.
ಇದಕ್ಕೂ ಮುನ್ನ, ರಾಮೇಶ್ವರಂ ಕೆಫೆಯಲ್ಲಿನ ಬಾಂಬ್ ಸ್ಫೋಟದ ಕುರಿತು ನಿನ್ನೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, “ತಮಿಳುನಾಡಿನ ಜನರು ಇಲ್ಲಿಗೆ ಬಂದು, ತರಬೇತಿ ಪಡೆದು, ಇಲ್ಲಿ ಬಾಂಬ್ ಇರಿಸಿದ್ದಾರೆ” ಎಂದು ಆರೋಪಿಸಿದ್ದರು. ನಂತರ ತನ್ನ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.