ದೇಶ ಬದಲಾವಣೆ ಬಯಸುತ್ತಿದೆ, ಮೋದಿ ಸರ್ಕಾರದ ಗ್ಯಾರಂಟಿಗಳು 2004 ರಂತೆಯೇ ಟೊಳ್ಳು- CWC ಸಭೆಯಲ್ಲಿ ಖರ್ಗೆ

ನವದೆಹಲಿ: ದೇಶ ಬದಲಾವಣೆ ಬಯಸುತ್ತಿದೆ ಎಂದು ಪ್ರತಿಪಾದಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮೋದಿ ಸರ್ಕಾರ ಹೇಳುತ್ತಿರುವ ಗ್ಯಾರಂಟಿಗಳು 2004 ರ ‘ಇಂಡಿಯಾ ಶೈನಿಂಗ್’ ಘೋಷಣೆಯಂತೆ ಯೇ ಇರಲಿವೆ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆ ಕುರಿತು ಚರ್ಚಿಸಲು ಮತ್ತು ಅನುಮೋದಿಸಲು ಪಕ್ಷದ ಉನ್ನತ ನಿರ್ಧಾರ ತೆಗೆದುಕೊಳ್ಳುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾದ ಪ್ರತಿಯೊಂದು ವಿಷಯವನ್ನು ಎಲ್ಲಾ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ತೆಗೆದುಕೊಂಡು ದೇಶಾದ್ಯಂತ ಪ್ರತಿ ಹಳ್ಳಿ, ಪಟ್ಟಣ ಹಾಗೂ ಮನೆ ಮನೆಗೆ ತಲುಪಿಸುವಂತೆ ಒತ್ತಾಯಿಸಿದರು.

ಖರ್ಗೆ ಅಧ್ಯಕ್ಷತೆಯ ಪಕ್ಷದ ಕೇಂದ್ರ ಚುನಾವಣಾ ಸಮಿತಿಯು (ಸಿಇಸಿ) ಸಂಜೆ ಚರ್ಚಿಸಿ ಉಳಿದ ಸ್ಥಾನಗಳಿಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸ ಲಿದೆ ಎಂದು ಮೂಲಗಳು ತಿಳಿಸಿವೆ. ಏಪ್ರಿಲ್ 19 ರಿಂದ ಪ್ರಾರಂಭವಾಗುವ ಏಳು ಹಂತದ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಇದುವರೆಗೆ 82 ಅಭ್ಯರ್ಥಿಗಳನ್ನು ಘೋಷಿಸಿದೆ.

ವಿವಿಧ ರಾಜ್ಯಗಳಲ್ಲಿ ಪ್ರಣಾಳಿಕೆ ಕುರಿತು ವ್ಯಾಪಕ ಪ್ರಚಾರ ಮಾಡುವ ಮೂಲಕ ನಮ್ಮ ಬದ್ಧತೆಗಳನ್ನು ದೇಶದಾದ್ಯಂತ ಪ್ರತಿ ಮನೆಗೆ ಮತ್ತು ಹೆಚ್ಚಿನ ಜನರಿಗೆ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಹಳ್ಳಿ ಮತ್ತು ಪಟ್ಟಣಗಳಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಪ್ರಣಾಳಿಕೆಯನ್ನು ಮನೆಮನೆಗೆ ತಲುಪಿಸಲು ಮುಂದಾಗಬೇಕು. ಪ್ರಣಾಳಿಕೆಯಲ್ಲಿ ಏನೆಲ್ಲಾ ಭರವಸೆ ನೀಡಲಾಗಿದೆಯೋ ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗುವುದು, ಈ ಭರವಸೆಗಳು ಅನುಷ್ಠಾನಗೊಳ್ಳುವ ಬಗ್ಗೆ ಆಳವಾದ ಚಿಂತನೆ ನಡೆಸಲಾಗಿದೆ. ಇದೇ ಕಾರಣದಿಂದ 1926 ರಿಂದಲೇ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ‘ವಿಶ್ವಾಸ ಮತ್ತು ಬದ್ಧತೆಯ ದಾಖಲೆ’ ಎಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಶ್ಲಾಘಿಸಿದ ಖರ್ಗೆ, ಈ ಮೂಲಕ ಜನರ ನಿಜವಾದ ಸಮಸ್ಯೆಯತ್ತ ದೇಶದ ಗಮನವನ್ನು ಸೆಳೆಯಲು ಕಾಂಗ್ರೆಸ್‌ಗೆ ಸಾಧ್ಯವಾಗಿದೆ ಎಂದು ಹೇಳಿದರು.

ಇವುಗಳು ಕೇವಲ ರಾಜಕೀಯ ಯಾತ್ರೆಗಳಾಗಿರಲಿಲ್ಲ, ಆದರೆ ನಮ್ಮ ರಾಜಕೀಯ ಇತಿಹಾಸದಲ್ಲಿ ಅತಿದೊಡ್ಡ ಜನಸಂಪರ್ಕ ಆಂದೋಲನಕ್ಕಾಗಿ ಗುರುತಿಸಲ್ಪಡುತ್ತವೆ. ನಮ್ಮ ಕಾಲದಲ್ಲಿ ಯಾರೂ ಇಂತಹ ಬೃಹತ್ ಕಸರತ್ತನ್ನು ಕೈಗೊಂಡಿಲ್ಲ ಎಂಬ ಅಂಶವನ್ನು ಯಾರೂ ದುರ್ಬಲಗೊಳಿಸಲು ಸಾಧ್ಯವಿಲ್ಲ. ಈ ಎರಡೂ ಯಾತ್ರೆಗಳು ಸಮಸ್ಯೆಯನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾದವು ಎಂದು ತಿಳಿಸಿದರು.

ಖರ್ಗೆ ಮತ್ತು ಪಕ್ಷದ ಮಾಜಿ ಮುಖ್ಯಸ್ಥರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಚಿದಂಬರಂ ಪಕ್ಷದ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರಾಗಿದ್ದಾರೆ. ಪಕ್ಷವು 25 ಗ್ಯಾರಂಟಿಗಳೊಂದಿಗೆ ‘ಐದು ನ್ಯಾಯ’ (ನ್ಯಾಯಗಳು)-‘ಭಾಗಿದಾರಿ ನ್ಯಾಯ’, ‘ಕಿಸಾನ್ ನ್ಯಾಯ’, ‘ನಾರಿ ನ್ಯಾಯ’, ‘ಶ್ರಮಿಕ್ ನ್ಯಾಯ’ ಮತ್ತು ‘ಯುವ’ ನ್ಯಾಯ’ ವಿಷಯದ ಮೇಲೆ ಚುನಾವಣೆಗಳನ್ನು ಎದುರಿಸುತ್ತಿದೆ.

Leave a Reply

Your email address will not be published. Required fields are marked *

error: Content is protected !!