ಮೋದಿ 3ನೇ ಬಾರಿ ಪ್ರಧಾನಮಂತ್ರಿ ಆಗುವುದನ್ನು ಯಾವ ದುಷ್ಟ ಶಕ್ತಿಗಳೂ ತಡೆಯಲು ಸಾಧ್ಯವಿಲ್ಲ- ಬಿ.ವೈ.ವಿಜಯೇಂದ್ರ

ಬೆಂಗಳೂರು: ಕೇಂದ್ರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಗಳಿಸಲಿದೆ ಮತ್ತು ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಬಿಜೆಪಿ ಮತ್ತೆ ಗೆಲ್ಲುವುದು ಖಚಿತ ಎಂದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು ಕೇಂದ್ರ ಜಿಲ್ಲಾ ಲೋಕಸಭಾ ಕ್ಷೇತ್ರದ ಚುನಾವಣಾ ಕಾರ್ಯಾಲಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ, ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮೂಲಕ ನರೇಂದ್ರ ಮೋದಿಯವರು ಪ್ರಧಾನ ಮಂತ್ರಿಯಾಗಿ 3ನೇ ಬಾರಿ ಪ್ರಮಾಣವಚನ ಪಡೆಯುವುದನ್ನು ಯಾವ ದುಷ್ಟ ಶಕ್ತಿಗಳೂ ತಡೆಯಲು ಸಾಧ್ಯವಿಲ್ಲ ಎಂದು ಅವರು ನುಡಿದರು.

ನರೇಂದ್ರ ಮೋದಿಜೀಯವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ ಕೇ ಸಾಥ್ ಎಂದು ಯಾವಾಗಲೂ ಹೇಳುತ್ತಾರೆ. ಮೋದಿಜೀಯವರು 2047ರ ಹೊತ್ತಿಗೆ ಈ ದೇಶವನ್ನು ಅಭಿವೃದ್ಧಿ ಹೊಂದಿದ ದೇಶಗಳ ಸಾಲಿನಲ್ಲಿ ತಂದು ನಿಲ್ಲಿಸುವ ಸಂಕಲ್ಪ ಮಾಡಿದ್ದಾರೆ ಎಂದು ಅವರು ತಿಳಿಸಿದರು. ಪಿ.ಸಿ.ಮೋಹನ್ ಅವರು ಜನರಿಂದ ಆಯ್ಕೆಯಾಗಿ ಜನರಿಗಾಗಿ ಮತ್ತು ಜನರಿಗೋಸ್ಕರ ಎಂಬಂತೆ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು. ದೇಶದ ಅಭಿವೃದ್ಧಿ ಮತ್ತು ಈ ಭಾಗದ ಅಭಿವೃದ್ಧಿಗಾಗಿ ಮೋಹನ್ ಅವರನ್ನು ಅತಿ ಹೆಚ್ಚು ಅಂತರದಿಂದ ಗೆಲ್ಲಿಸಲು ಶ್ರಮಿಸಿ ಎಂದು ಮನವಿ ಮಾಡಿದರು.

ಮೋದಿಜೀ ಅವರು ತಮ್ಮ ಸರಕಾರದ ಮೂಲಕ ರಾಜ್ಯಕ್ಕೆ ಕೊಟ್ಟ ಕೊಡುಗೆಗಳನ್ನು ಗಮನಿಸಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28ಕ್ಕೆ 28 ಕ್ಷೇತ್ರಗಳಲ್ಲಿ ಬಿಜೆಪಿ- ಜೆಡಿಎಸ್ ಅಭ್ಯರ್ಥಿಗಳನ್ನು ಜನರು ಗೆಲ್ಲಿಸುತ್ತಾರೆ. ಈ ಮೂಲಕ ‘ರಾಜ್ಯಕ್ಕೆ ಮೋದಿಯವರ ಕೊಡುಗೆ ಏನು?’ ಎಂಬ ಸಿದ್ದರಾಮಯ್ಯನವರ ಪ್ರಶ್ನೆಗೆ ಉತ್ತರ ಕೊಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಂಸದ ಹಾಗೂ ಬೆಂಗಳೂರು ಕೇಂದ್ರ ಲೋಕಸಭಾ ಅಭ್ಯರ್ಥಿ ಪಿ.ಸಿ. ಮೋಹನ್ ಅವರು ಮಾತನಾಡಿ, ಇಂದು ಬಂದ ಕಾರ್ಯಕರ್ತರ ಹುಮ್ಮಸ್ಸನ್ನು ಗಮನಿಸಿದರೆ ಇದು ವಿಜಯೋತ್ಸವದಂತಿದೆ ಎಂದು ಹೇಳಿದರು.

ಮೋದಿಯವರು ಕಳೆದ 10 ವರ್ಷಗಳಲ್ಲಿ ಭ್ರಷ್ಟಾಚಾರ ರಹಿತ ಅಭಿವೃದ್ಧಿಪರ ಆಡಳಿತ ನೀಡಿದ್ದಾರೆ. 2014ರಲ್ಲಿ ನಾವು ಮತ ಕೇಳಲು ಹೋದಾಗ ಕಾಂಗ್ರೆಸ್- ಯುಪಿಎ ಸರಕಾರದ 10 ವರ್ಷಗಳ 2 ಜಿ ಸಹಿತ ವಿವಿಧ ಭ್ರಷ್ಟಾಚಾರ ಹಗರಣಗಳ ಪುಸ್ತಕವನ್ನೇ ಒಯ್ದಿದ್ದೆವು ಎಂದು ನೆನಪಿಸಿದರು.

Leave a Reply

Your email address will not be published. Required fields are marked *

error: Content is protected !!