ಸಿದ್ದರಾಮಯ್ಯ ಮೋಸದ ಗಿರಾಕಿ, ಕಾಂಗ್ರೆಸ್ ಸರ್ಕಾರ ನೀರಿನ ಮೇಲಿನ ಗುಳ್ಳೆ- ಆರ್.ಅಶೋಕ್

ದಾವಣಗೆರೆ: ಸಿದ್ದರಾಮಯ್ಯ ಮೋಸದ ಗಿರಾಕಿ ಎಂದು ವಿಧಾನ ಸಭೆ ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದರು.

ಇಂದು ಪಿ.ಬಿ. ರಸ್ತೆಯ ಅರುಣಾ ಟಾಕೀಸ್ ಮುಂಭಾಗದ ವಾಣಿ ಹೋಂಡಾಹಳೇ ಶೋ ರೂಂ ಆವರಣದಲ್ಲಿ ನಡೆದ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನೆ ಹಾಗೂ 10 ವರ್ಷದ ಸಾಧನೆಯ ರಿಪೋರ್ಟ್ ಕಾರ್ಡ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮೋಸ ಮಾಡಿರುವುದರಿಂದಲೇ ಅವರನ್ನು ಮೋಸದ ಗಿರಾಕಿ ಎಂದು ಹೇಳುತ್ತಿರುವುದಾಗಿ ತಿಳಿಸಿದರು.

ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬ ಮಹಿಳೆಯರಿಗೆ 2 ಸಾವಿರ ರೂಪಾಯಿ ನೀಡುವುದಾಗಿ ಹೇಳಿದ್ದಾರೆ. ಒಂದು ಕಡೆ 2 ಸಾವಿರ ರೂ. ಕೊಟ್ಟು ಇನ್ನೊಂದು ಕಡೆ ಮದ್ಯದ ಬೆಲೆ 50 ರೂಪಾಯಿ ಹೆಚ್ಚಿಸಿದ್ದಾರೆ. ಅದರಿಂದ ತಿಂಗಳಿಗೆ 1,800 ರೂಪಾಯಿ ಬರುತ್ತದೆ. ಹಾಲಿನ ದರ ಮೂರು ರೂ. ಹೆಚ್ಚಿಸಿದ್ದಾರೆ.

ವಿದ್ಯುತ್ ದರವನ್ನು 3 ರೂಪಾಯಿಯಿಂದ 7 ರೂ.ಗೆ ಹೆಚ್ಚಳ ಮಾಡಿದ್ದಾರೆ. ಎಲ್ಲದರಿಂದ ಸರ್ಕಾರಕ್ಕೆ 3 ಸಾವಿರ ದೊರೆಯುತ್ತದೆ. ಸಿದ್ದರಾಮಯ್ಯ 2 ಸಾವಿರ ರೂ. ಕೊಟ್ಟು 1 ಸಾವಿರ ರೂಪಾಯಿ ಜೇಬಿಗೆ ಹಾಕಿಕೊಳ್ಳುತ್ತಾರೆ ಎಂದು ದೂರಿದರು.

ನಾನು ಕಂದಾಯ ಸಚಿವನಾಗಿದ್ದಾಗ ಸ್ಟ್ಯಾಂಪ್ ಡ್ಯೂಟಿ, ಗೈಡೆನ್ಸ್ ವ್ಯಾಲ್ಯೂಕಡಿಮೆ ಮಾಡಿದ್ದೆ. ಸಿದ್ದರಾಮಯ್ಯ ಎಲ್ಲ ವನ್ನೂ ಹೆಚ್ಚಿಸಿ ತೆರಿಗೆ ಹೆಚ್ಚಿಸಿದ್ದಾರೆ. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂದು ಗ್ಯಾರಂಟಿ ಯೋಜನೆಗೆ ಬಳಕೆ ಮಾಡುತ್ತಿದ್ದಾರೆ. ದೇಶದಲ್ಲಿ ಮೋದಿ ಅವರದ್ದೇ ಒಂದು ಒರಿಜನಲ್ ಗ್ಯಾರಂಟಿ. ಕಾಂಗ್ರೆಸ್ ಸರ್ಕಾರ ಕೊಡುತ್ತಿರುವ ಎಲ್ಲ ಗ್ಯಾರಂಟಿ ಡೂಪ್ಲಿಕೇಟ್ ಗ್ಯಾರಂಟಿ ಎಂದು ಲೇವಡಿ ಮಾಡಿದರು.

ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳುತ್ತಾರೆ. ಈಗ 5 ಕೆಜಿ ಜಾಗದಲ್ಲಿ 3 ಕೆಜಿ ಕೊಡುತ್ತಿದ್ದಾರೆ. ಅದೂ ಕಾಂಗ್ರೆಸ್‌ನವರದ್ದಲ್ಲ. ಮೋದಿ ಅವರು ಕೊಡುತ್ತಿರುವುದು. ಕಾಂಗ್ರೆಸ್ ಒಂದೇ ಒಂದು ಅಕ್ಕಿ ಕಾಳು ಕೊಡುತ್ತಿಲ್ಲ. ಅನ್ನಭಾಗ್ಯ ಅಲ್ಲ ಅದು ಮೋದಿ ಭಾಗ್ಯ ಎಂದು ತಿಳಿಸಿದರು.

ರಾಜ್ಯದಲ್ಲಿ ಬರಗಾಲ ಬಂದು ಜನ, ಜಾನುವಾರುಗಳಿಗೆ ನೀರಿಲ್ಲ. ಹಾಹಾಕಾರವೆದ್ದಿದೆ ಬೋರ್‌ವೆಲ್ ಕೊರೆ ಸಲಿಕ್ಕೂ ಕಾಂಗ್ರೆಸ್ ಸರ್ಕಾರಕ್ಕೆ ಯೋಗ್ಯತೆ ಇಲ್ಲ. ಪಾಪರ್, ಗತಿಗೆಟ್ಟ ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕಾರ್ಯಕ್ಕೆ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ. ಬಿಜೆಪಿ ಸರ್ಕಾರದಲ್ಲಿನ ಅನುದಾನವೇ ಈಗೂ ಬಿಡುಗಡೆ ಆಗುತ್ತಿದೆ. ಗ್ಯಾರಂಟಿ ಯೋಜನೆಗಳಿಗಾಗಿ 1 ಲಕ್ಷ 5 ಕೋಟಿ ಸಾಲ ಮಾಡಿರುವ ಸರ್ಕಾರ ಪ್ರತಿಯೊಬ್ಬರ ತಲೆ ಮೇಲೆ 97 ಸಾವಿರ ರೂ. ಸಾಲ ಹೊರಿಸಿದೆ. ಹೇಗೂ ಸಿದ್ದರಾಮಯ್ಯ ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳುತ್ತಿದ್ದಾರೆ. ರಾಜ್ಯದ ಎಲ್ಲರನ್ನೂ ಹಳ್ಳಕ್ಕೆ ತಳ್ಳಿ ಸಿದ್ದರಾಮಯ್ಯ ಮನೆಗೆ ಓಡಿ ಹೋಗುವ ಪ್ಲಾನ್ ಮಾಡಿದ್ದಾರೆ ಎಂದು ದೂರಿದರು.ರಾಜ್ಯ ಸರ್ಕಾರ ಧರ್ಮವಾಗಿ ನಡೆಯುತ್ತಲೇ ಇಲ್ಲ. ಹಾಗಾಗಿ ಬರಗಾಲ. ಅಧರ್ಮದ ಹಾದಿಯಲ್ಲಿ ನಡೆಯು ತ್ತಿರುವ ಕಾರಣಕ್ಕೆ ದೇವರು ಸಹ ಈ ಸರ್ಕಾರದ ಜೊತೆಗೆ ಇಲ್ಲ. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಕೊಡುತ್ತಿದ್ದ 4 ಸಾವಿರ ರೂಪಾಯಿ ಕಿತ್ತುಕೊಂಡಿರುವ ಮನೆಹಾಳ ಕಾಂಗ್ರೆಸ್ ಸರ್ಕಾರ ನೀರಿನ ಮೇಲಿನ ಗುಳ್ಳೆ ಇದ್ದಂತೆ ಯಾವಾಗ ಬೇಕಾದರೂ ಒಡೆದು ಹೋಗಬಹುದು ಎನ್ನುವ ಮೂಲಕ ಸರ್ಕಾರ ಪತನ ಆಗುತ್ತದೆ ಎಂದು ಭವಿಷ್ಯ ನುಡಿದರು.

Leave a Reply

Your email address will not be published. Required fields are marked *

error: Content is protected !!