ಅಕ್ರಮ ಹಣ ವರ್ಗಾವಣೆಯ ತನಿಖೆ ಎದುರಿಸುತ್ತಿರುವ ‘ಲಾಟರಿ ಕಿಂಗ್ʼ ಮಾರ್ಟಿನ್, ಚುನಾವಣಾ ಬಾಂಡ್ ಖರೀದಿಯಲ್ಲಿ ಅಗ್ರಸ್ಥಾನಿ!

ಹೊಸದಿಲ್ಲಿ: ಭಾರತದ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ಚುನಾವಣಾ ಬಾಂಡ್ ಕುರಿತ ಅಂಕಿ ಅಂಶಗಳಲ್ಲಿ ʼಲಾಟರಿ ಕಿಂಗ್ʼ ಕುಖ್ಯಾತಿಯ ಮಾರ್ಟಿನ್ ಸ್ಯಾಂಟಿಯಾಗೊನ ಲಾಟರಿ ಕಂಪನಿಯು ಚುನಾವಣಾ ಬಾಂಡ್‌ಗಳ ಅಗ್ರ ಖರೀದಿದಾರ ಎಂದು ಬಹಿರಂಗವಾಗಿದೆ.

ಚುನಾವಣಾ ಬಾಂಡ್ ಗಳ ಇತರ ಗಮನಾರ್ಹ ಖರೀದಿದಾರರಲ್ಲಿ ಹೈದರಾಬಾದ್ ಮೂಲದ ಮೂಲಸೌಕರ್ಯ ದೈತ್ಯ ಸಂಸ್ಥೆ ಮೇಘಾ ಇಂಜಿನಿಯರಿಂಗ್ & ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್, ರಿಲಯನ್ಸ್-ಸಂಯೋಜಿತ ಕಂಪನಿ ಕ್ವಿಕ್‌ಸಪ್ಲೈ ಚೈನ್, ವೇದಾಂತ ಮತ್ತು ಕೋಲ್ಕತ್ತಾ ಮೂಲದ ಸಂಜೀವ್ ಗೋಯೆಂಕಾ ಗ್ರೂಪ್ ನ ಅಂಗಸಂಸ್ಥೆ ಯೂ ಸೇರಿದೆ ಎಂದು ತಿಳಿದು ಬಂದಿದೆ.

ಪ್ರಮುಖ ಲಾಟರಿ ದೈತ್ಯ ಸಂಸ್ಥೆಯಾದ ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ ಚುನಾವಣಾ ಬಾಂಡ್ ಗಳ ಅಗ್ರ ಖರೀದಿದಾರರಾಗಿ ಹೊರಹೊಮ್ಮಿದೆ . ಈ ಸಂಸ್ಥೆಯು 1,208 ಕೋಟಿ ರೂ. ಮೌಲ್ಯದ 1,208 ಬಾಂಡ್‌ಗಳನ್ನು ಖರೀದಿಸಿದೆ ಎಂದು ತಿಳಿದು ಬಂದಿದೆ. ‘ಲಾಟರಿ ಕಿಂಗ್’ ಮಾರ್ಟಿನ್ ಸಂಟಿಯಾಗೊ ಮಾಲಕತ್ವದ ಕಂಪೆನಿ 7,000 ಕೋಟಿ ವಹಿವಾಟು ಹೊಂದಿದೆ. ಫ್ಯೂಚರ್ ಗೇಮಿಂಗ್ ಕಂಪೆನಿಯ ಮೇಲೆ ಈಗಾಗಲೇ ಅಕ್ರಮ ಹಣ ವರ್ಗಾವಣೆ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.

ಚುನಾವಣಾ ಬಾಂಡ್‌ ಖರೀದಿಯಲ್ಲಿ ನಂತರದ ಸ್ಥಾನದಲ್ಲಿ ಮೇಘಾ ಇಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಮತ್ತು ವೆಸ್ಟರ್ನ್ ಯುಪಿ ಪವರ್‌ ಟ್ರಾನ್ಸ್‌ಮಿಷನ್ ಕಂಪನಿಗಳಿದೆ. ಮೇಘಾ ಇಂಜಿನಿಯರಿಂಗ್ 1 ಕೋಟಿ ರೂ ಮೌಲ್ಯದ 966 ಬಾಂಡ್‌ಗಳನ್ನು ಖರೀದಿಸಿದೆ. ಈ ಬಾಂಡ್ ಗಳ ಒಟ್ಟು ಮೌಲ್ಯ ರೂ. 966 ಕೋಟಿ. ವೆಸ್ಟರ್ನ್‌ ಯುಪಿ ಪವರ್ ರೂ. 220 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿ ಮಾಡಿದೆ. ಅಂದರೆ ಮೇಘಾ ಇಂಜಿನಿಯರಿಂಗ್‌ನ ಒಟ್ಟು ಚುನಾವಣಾ ಬಾಂಡ್‌ ಖರೀದಿ ಮೌಲ್ಯ ರೂ.1,186 ಕೋಟಿ. ಹೈದರಾಬಾದ್ ಮೂಲದ ಮೇಘಾ ಸಮೂಹವು ಹಲವಾರು ಸರ್ಕಾರಿ ಯೋಜನೆಗಳನ್ನು ಪಡೆದುಕೊಂಡಿದೆ. ಪ್ರಮುಖವಾಗಿ ತೆಲಂಗಾಣದ 1.15 ಲಕ್ಷ ಕೋಟಿ ರೂ. ವೆಚ್ಚದ ಕಾಳೇಶ್ವರಂ ಏತ ನೀರಾವರಿ ಯೋಜನೆ, 14,400 ಕೋಟಿ ರೂ. ವೆಚ್ಚದ ಮಹಾರಾಷ್ಟ್ರದ ಥಾಣೆ-ಬೋರಿವಲಿ ಅವಳಿ ಸುರಂಗ ಯೋಜನೆಯೂ ಸೇರಿದೆ.

ಮಹಾರಾಷ್ಟ್ರದಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್, ರೂ 410 ಕೋಟಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದೆ. ಈ ಕಂಪನಿಯ ನಿರ್ದೇಶಕರಲ್ಲಿ ಒಬ್ಬರಾದ ತಪಸ್ ಮಿತ್ರ ಅವರು ರಿಲಯನ್ಸ್-ಸಂಯೋಜಿತ ಘಟಕಗಳಲ್ಲಿ ನಿರ್ದೇಶಕ ಸ್ಥಾನಗಳನ್ನು ಹೊಂದಿದ್ದಾರೆ.

ಚುನಾವಣಾ ಬಾಂಡ್ ಗಳನ್ನು ಖರೀದಿಸಿದ ಇತರ ಖರೀದಿದಾರರು ಹಲ್ದಿಯಾ ಎನರ್ಜಿ ಲಿಮಿಟೆಡ್, ವೇದಾಂತ ಲಿಮಿಟೆಡ್, ಮತ್ತು ಉತ್ತರ ಪ್ರದೇಶದ ಗಾಝಿಯಾಬಾದ್ ಮೂಲದ ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.

Leave a Reply

Your email address will not be published. Required fields are marked *

error: Content is protected !!