ಹಾಡಹಗಲೇ ಚಿನ್ನಾಭರಣ ಅಂಗಡಿಗೆ ನುಗ್ಗಿ ಗುಂಡಿನ ದಾಳಿ, ಇಬ್ಬರಿಗೆ ಗಂಭೀರ ಗಾಯ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದ್ದು ಹಾಡಹಗಲೇ ದುಷ್ಕರ್ಮಿಗಳು ಚಿನ್ನಾಭರಣ ಅಂಗಡಿ ಮೇಲೆ ದಾಳಿ ಮಾಡಿದ್ದಾರೆ.

ಬೆಂಗಳೂರಿನ ಕೊಡಿಗೆಹಳ್ಳಿ ಬಳಿಯ ದೇವಿ ನಗರದಲ್ಲಿರುವ ಲಕ್ಷ್ಮೀ ಜುವೆಲ್ಲರ್ಸ್‌ನಲ್ಲಿ ಗುರುವಾರ ಹಾಡಹಗಲೇ ಈ ಘಟನೆ ನಡೆದಿದ್ದು, ಅಂಗಡಿಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಹಣ ಕೊಡಲು ಒಪ್ಪದ ಮಾಲೀಕನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಇಬ್ಬರಿಗೆ ಗುಂಡಿನ ಗಾಯಗಳಾಗಿದ್ದು,‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ ಅಂದಾ ರಾಮ್‌ ಹಾಗು ಆಪುರಾಮ್ ಎಂಬವರಿಗೆ ಸೇರಿದ ಲಕ್ಷ್ಮೀ ಜುವೆಲ್ಲರಿಗೆ ಇಂದು ಇಬ್ಬರು ದರೋಡೆಕೋರರು ನುಗ್ಗಿದ್ದರು. ಬೈಕ್‌ನಲ್ಲಿ ಬಂದಿದ್ದ ಅವರು ಬೈಕ್‌ ನಿಲ್ಲಿಸಿ ನೇರವಾಗಿ ಅಂಗಡಿಗೆ ನುಗ್ಗಿದ್ದಾರೆ. ಚಿನ್ನದ ಅಂಗಡಿ ಮಾಲೀಕರ ಬಳಿ ತಮಗೆ ಹಣ ನೀಡುವಂತೆ ಕೇಳಿದ್ದಾರೆ. ಈ ವೇಳೆ ಹಣ ನೀಡಲು ನಿರಾಕರಿಸಿದಾಗ ಪಿಸ್ತೂಲು ತೋರಿಸಿ ಹೆದರಿಸಿದ್ದಾರೆ. ಆಗಲೂ ಮಾಲೀಕರು ಹಣ ಕೊಡಲು ಒಪ್ಪದೆ ಇದ್ದಾಗ ಹಲ್ಲೆ ನಡೆಸಿದ್ದಲ್ಲದೆ ಗುಂಡು ಹಾರಿಸಿದ್ದಾರೆ.

ಗುಂಡಿನ ಸದ್ದು ಕೇಳುತ್ತಿದ್ದಂತೆಯೇ ಸುತ್ತಲಿದ್ದ ಜನರು ಓಡಿಬಂದಿದ್ದಾರೆ. ಆಗ ಈ ದರೋಡೆಕೋರರು ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದಾರೆ. ಗುಂಡಿನ ದಾಳಿ ನಡೆಸಿ ಪರಾರಿಯಾಗುವ ಭರದಲ್ಲಿ ಪಿಸ್ತೂಲನ್ನು ಅಲ್ಲೇ ಬಿಟ್ಟು ಓಡಿ ಹೋಗಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕೊಡಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜುವೆಲ್ಲರಿಯ ಸಿಸಿಟಿವಿ ಮತ್ತು ಅಕ್ಕಪಕ್ಕದ ಅಂಗಡಿಗಳ ಸಿಸಿಟಿವಿ ಪರಿಶೀಲಿಸಲಾಗುತ್ತಿದೆ.

2 ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಂದ ಗುಂಡು

ದರೋಡೆಕೋರರು ಎರಡು ಬೈಕ್ ಗಳಲ್ಲಿ ಬಂದು ಮೂರು ಸುತ್ತು ಗುಂಡು ಹಾರಿಸಿದ್ದು, ಇಬ್ಬರು ಗಾಯಗೊಂಡ ಬಳಿಕ ಪಿಸ್ತೂಲು ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಮಾತನಾಡಿರುವ ಬೆಂಗಳೂರು ಪೊಲೀಸ್ ಕಮಿಷನರ್, ಬಿ ದಯಾನಂದ ಅವರು ಸಣ್ಣ ಅಂಗಡಿಯು “ಅತ್ಯಂತ ಆಂತರಿಕ ಪ್ರದೇಶದಲ್ಲಿ” ಇದೆ. “ನಾಲ್ವರು ದುಷ್ಕರ್ಮಿಗಳು ಬಂದು ದರೋಡೆಗೆ ಯತ್ನಿಸಿ ದ್ದಾರೆ. ಅಂಗಡಿ ಮಾಲೀಕರು ಮತ್ತು ಸಿಬ್ಬಂದಿ ವಿರೋಧಿಸಿದಾಗ, ಅವರು ಎರಡು-ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ ಇಬ್ಬರು ಗಾಯಗೊಂಡಿದ್ದಾರೆ ಮತ್ತು ಅವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಆರೋಪಿಗಳನ್ನು ಸೆರೆಹಿಡಿಯಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!