ಶಿಬರೂರು: ಎ.22-30 ಬ್ರಹ್ಮಕುಂಭಾಭಿಷೇಕ, ನಾಗಮಂಡಲ 27-30ರ ತನಕ ವಿಶೇಷ ಜಾತ್ರಾ ಮಹೋತ್ಸವ

ಸುರತ್ಕಲ್: “1976ರಲ್ಲಿ ಶಿಬರೂರುಗುತ್ತು ಮುದ್ದಣ್ಣ ಶೆಟ್ಟರ ಮುತುವರ್ಜಿಯಲ್ಲಿ ಶಿಬರೂರು ಕ್ಷೇತ್ರವು ಸಂಪೂರ್ಣ ನವೀಕರಣಗೊಂಡಿದ್ದು 2010ರಲ್ಲಿ ಕೊಂಜಾಲಗುತ್ತು ಪ್ರಭಾಕರ ಶೆಟ್ಟರ ನೇತೃತ್ವದಲ್ಲಿ ಹಾಗೂ ಊರವರ ಸಹಕಾರದಿಂದ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡು ಈಗ ಮತ್ತೊಮ್ಮೆ ಧ್ವಜಸ್ತಂಭ ಸಹಿತ ಸುತ್ತುಪೌಳಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಈ ವರ್ಷ ಕೈಗೊಂಡಿದ್ದು ಸುಮಾರು 9 ಕೋಟಿ ರೂ. ವೆಚ್ಚದಲ್ಲಿ ಪುನ‌ರ್ ನಿರ್ಮಾಣ ನಡೆಯುತ್ತಿದೆ. ಕ್ಷೇತ್ರವು ದೈವ ಕ್ಷೇತ್ರ ಮಾತ್ರವಲ್ಲದೆ ನಾಗ ಕ್ಷೇತ್ರವು ಆಗಿರುತ್ತದೆ. ಕ್ಷೇತ್ರದ ವಿಶೇಷವೇನೆಂದರೆ ಬ್ರಹ್ಮಕುಂಭಾಭಿಷೇಕ
ನಡೆಯುವ ಸಂದರ್ಭದಲ್ಲಿ ನಾಗಮಂಡಲ ಸೇವೆಯು ನಡೆಯುವುದು ಗಮನಾರ್ಹ. ಇದೇ ಬರುವ ಏಪ್ರಿಲ್ 22ರಿಂದ 30ರ ತನಕ ಬ್ರಹ್ಮಕುಂಭಾಭಿಷೇಕ ಕಾರ್ಯಕ್ರಮಗಳು ಜರಗಲಿದ್ದು 26ರಂದು ಶ್ರೀ ಉಳ್ಳಾಯ ಕೊಡಮಣಿತ್ತಾಯ ದೈವಗಳಿಗೆ
ಬ್ರಹ್ಮಕುಂಭಾಭಿಷೇಕವು ಬ್ರಹ್ಮಶ್ರೀ ವೇದವ್ಯಾಸ ತಂತ್ರಿ, ಶಿಬರೂರುರವರ ನೇತೃತ್ವದಲ್ಲಿ ಜರಗಲಿದ್ದು ಅದೇ ದಿನ ರಾತ್ರಿ ಕ್ಷೇತ್ರದ ನಾಗಮಂಡಲ ಸೇವೆ ಜರುಗಲಿದೆ. ಎಪ್ರಿಲ್ 27ರಿಂದ 30ರ ತನಕ ವಿಶೇಷ ಜಾತ್ರಾ ಮಹೋತ್ಸವವು ಜರಗಲಿದ್ದು ಈ ಸಂದರ್ಭದಲ್ಲಿ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ” ಎಂದು ತಿಬರಗುತ್ತಿನಾರ್ ಉಮೇಶ್ ಎನ್. ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಳಿಕ ಮಾತಾಡಿದ ಮೊಕ್ತೇಸರ ಮಧುಕರ ಅಮೀನ್ ಅವರು, “ಕ್ಷೇತ್ರದಲ್ಲಿ ಸಂಪೂರ್ಣ ಅಭಿವೃದ್ಧಿ ಕಾಮಗಾರಿಗಳು ವೇಗಗತಿಯಲ್ಲಿ ನಡೆಯುತ್ತಿದೆ. ದೈವಕ್ಕೆ ಸ್ವರ್ಣ ಪಲ್ಲಕ್ಕಿಯನ್ನು ಸೇವೆಯ ರೂಪದಲ್ಲಿ ಸಲ್ಲಿಸಲು ಚಿಂತಿಸಲಾಗಿದೆ. ರಸ್ತೆ ಅಭಿವೃದ್ಧಿ ಮತ್ತು ಗೋಪುರ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಬ್ರಹ್ಮಕುಂಭಾಭಿಷೇಕ, ನಾಗಮಂಡಲ ಸಂದರ್ಭದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳನ್ನು ಸ್ವಾಮೀಜಿಗಳ ಸಮಕ್ಷಮದಲ್ಲಿ ಧಾರ್ಮಿಕ ಮುಖಂಡರ ಹಾಗೂ ಅನೇಕ ಸಾಂಸ್ಕೃತಿಕ ತಂಡಗಳ ಹಾಗೂ ಭಜನಾ ಮಂಡಳಿಗಳ ಮುಖಾಂತರ ನಿರಂತರ ಭಜನಾ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ” ಎಂದರು. ಜೀರ್ಣೋದ್ಧಾರ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್ ಮಾತಾಡಿ, “ಕಟೀಲು ಕ್ಷೇತ್ರಕ್ಕೂ ಕೊಡಮಣಿತ್ತಾಯ ಕ್ಷೇತ್ರಕ್ಕೂ ಅವಿನಾಭಾವ ನಂಟಿದೆ. ಕಟೀಲು ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ದೇವಿ ಮತ್ತು ದೈವದ ಭೇಟಿ ಅಪರೂಪವಾಗಿದೆ. ಬ್ರಹ್ಮಕುಂಭಾಭಿಷೇಕ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ದೇಶ ವಿದೇಶಗಳಲ್ಲಿ ಸಾಕಷ್ಟು ಸಂಖ್ಯೆಯ ಭಕ್ತರು ದೈವದ ಸೇವೆಯಲ್ಲಿ ಕೈಜೋಡಿಸುವ ವಿಶ್ವಾಸವಿದೆ” ಎಂದರು.

ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪ್ರದ್ಯುಮ್ನ ರಾವ್ ಮಾತನಾಡಿ, “ಕಳೆದ 8 ತಿಂಗಳಲ್ಲಿ 3.5 ಕೋಟಿ ವೆಚ್ಚದ ಸಿವಿಲ್ ಕಾಮಗಾರಿ, 1.5 ಕೋಟಿ ರೂ. ವೆಚ್ಚದಲ್ಲಿ ಧ್ವಜಸ್ಥಂಭ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬ್ರಹ್ಮಕುಂಭಾಭಿಷೇಕ ಸಂದರ್ಭದಲ್ಲಿ ನಿತ್ಯ ಉಪಹಾರ, ಅನ್ನದಾನ ನಡೆಯಲಿದ್ದು ರಾಜ್ಯಾದ್ಯಂತ 3-4 ಲಕ್ಷ ಜನ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯನ್ನು ನಾವು ಇಟ್ಟುಕೊಂಡಿದ್ದೇವೆ” ಎಂದರು.

ಪತ್ರಿಕಾ ಗೋಷ್ಠಿಯಲ್ಲಿ ತಿಬರಗುತ್ತಿನಾರ್ ಉಮೇಶ್ ಎನ್. ಶೆಟ್ಟಿ, ಕೊರ್ಯಾರುಗುತ್ತು ಜೀತೇಂದ್ರ ಶೆಟ್ಟಿ, ಪರ್ಲಬೈಲುಗುತ್ತು ತುಕರಾಮ ಶೆಟ್ಟಿ, ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಪ್ರದ್ಯುಮ್ನ ರಾವ್, ಮೊಕ್ತೇಸರ ಮಧುಕರ ಅಮೀನ್, ಮೊಕ್ತೇಸರ ಕಾಂತಪ್ಪ ಸಾಲಿಯಾನ್, ಜೀರ್ಣೋದ್ಧಾರ ಸಮಿತಿ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಸೂರಿಂಜೆ ಗ್ರಾ.ಪಂ. ಅಧ್ಯಕ್ಷೆ ಗೀತಾ ಶೆಟ್ಟಿ, ದಿವಾಕರ ಸಾಮಾನಿ, ಶಿಬರೂರು ಗುತ್ತು ಸುಧಾಕರ ಶೆಟ್ಟಿ, ಚಂದ್ರಹಾಸ ಶಿಬರೂರು, ಪ್ರಭಾಕರ ಶೆಟ್ಟಿ ಹೊಸಕಟ್ಟ, ಸುದೀಪ್ ಶೆಟ್ಟಿ, ಜಗದೀಶ ಶೆಟ್ಟಿ, ಸುರೇಂದ್ರ ಶೆಟ್ಟಿ, ವಿನೀತ್ ಶೆಟ್ಟಿ, ಗಿರೀಶ್ ಶೆಟ್ಟಿ, ಸುಪ್ರಜ ಸುಬ್ರಮಣ್ಯ ಪ್ರಸಾದ್, ಸುಮನ್ ಶೆಟ್ಟಿ, ಮಾಧ್ಯಮ‌ ಸಮಿತಿಯ ಬಾಳ ಜಗನ್ನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಆಂಗ್ಲ ಮಾಧ್ಯಮ ಶಾಲೆ: ದೈವಸ್ಥಾನದ ವತಿಯಿಂದ ಪ್ರತಿ ತಿಂಗಳು ವೈದಕಿಯ ತಪಾಸಣೆ ಹಾಗೂ ದೈವಸ್ಥಾನದ ವತಿಯಿಂದ ಈಗಾಗಲೇ ಶ್ರೀ ಕೊಡಮನಿತಾಯ ಆಂಗ್ಲ ಮಾಧ್ಯಮ ಶಾಲೆ ಕಳೆದ ವರ್ಷ ಎಲ್ ಕೆಜಿ ಪ್ರಾರಂಭಿಸಿದ್ದು, ಬರುವ ವರ್ಷ ನರ್ಸರಿ ಹಾಗೂ ಯುಕೆಜಿ ಪ್ರಾರಂಭಗೊಳ್ಳಲಿದೆ.

ಶಿಬರೂರು ಕ್ಷೇತ್ರದ ಇತಿಹಾಸ: ಕೊಡಮಣಿತ್ತಾಯ ಕ್ಷೇತ್ರವು ಮಂಗಳೂರಿನಿಂದ 25 ಕಿ.ಮೀ. ದೂರದಲ್ಲಿ ಕಟೀಲು ಕ್ಷೇತ್ರದಿಂದ 2 ಕಿ.ಮೀ (ಕಿನ್ನಿಗೋಳಿಯಿಂದ 3 ಕಿ.ಮೀ) ದೂರದಲ್ಲಿ ಪ್ರಕೃತಿ ರಮಣೀಯ ಕಾರಣಿಕ ಕ್ಷೇತ್ರವಾಗಿದ್ದು ನಂದಿನಿ ತಟದಲ್ಲಿ ಶ್ರೀ ಉಳ್ಳಾಯ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳು ಸುಮಾರು 700 ವರ್ಷಗಳ ಹಿಂದೆ ದೈವ ಭಕ್ತರಾದ ಶಿಬರೂರು ಗುತ್ತು ತಿಮ್ಮತ್ತಿ ಕರಿವಾಳರವರ ಭಕ್ತಿಗೆ ಒಲಿದು ನೆಲೆ ನಿಂತಿವೆ. ಶ್ರೀ ಕ್ಷೇತ್ರ ಶಿಬರೂರಿಗೂ ಶ್ರೀ ಕ್ಷೇತ್ರ ಕಟೀಲಿಗೂ ಅವಿನಾಭಾವ ಸಂಬಂಧವಿದ್ದು ಕಟೀಲು ಜಾತ್ರಾ ಸಂದರ್ಭದಲ್ಲಿ ಶ್ರೀ ದೈವವು ಭೇಟಿ ನೀಡುತ್ತಿರುವುದು ಅನಾದಿಕಾಲದಿಂದ ನಡೆದುಕೊಂಡು ಬಂದಿದೆ.

ಶ್ರೀ ಕ್ಷೇತ್ರವು ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ‘A’ ದರ್ಜೆಯ ದೈವಸ್ಥಾನವಾಗಿದ್ದು ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಧನು ಸಂಕ್ರಮಣದಂದು ಧ್ವಜಾರೋಹಣಗೊಂಡು ಎಂಟು ದಿನಗಳ ಪರ್ಯಂತ ಜಾತ್ರಾ ಮಹೋತ್ಸವ ಜರುಗುತ್ತಿದ್ದು ಲಕ್ಷಾಂತರ ಭಕ್ತರ ಆರಾಧ್ಯ ಕೇಂದ್ರವಾಗಿದೆ. ಕ್ಷೇತ್ರದ ತೀರ್ಥವು ವಿಷವನ್ನು ಅಮೃತ ಮಾಡುವಂತಹ ಶಕ್ತಿಯನ್ನು ಹೊಂದಿದ್ದು ಲಕ್ಷಾಂತರ ಭಕ್ತರು ತೀರ್ಥವನ್ನು ಸೇವಿಸಿ ಧನ್ಯರಾಗುತ್ತಾರೆ.

Leave a Reply

Your email address will not be published. Required fields are marked *

error: Content is protected !!