ಗ್ಯಾರಂಟಿ ಯೋಜನೆ ನಿಲ್ಲೋದಿಲ್ಲ, ಬಿಜೆಪಿಯಿಂದ ಅನಾವಶ್ಯಕ ಅಪಪ್ರಚಾರ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ: ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳನ್ನು ಕೇವಲ ಪ್ರಚಾರಕ್ಕಾಗಿ ಜಾರಿಗೆ ತಂದಿಲ್ಲ‌. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಹೇಳಿದ್ದಾರೆ. 

ಉಡುಪಿಯ ಕುಂಜಿಬೆಟ್ಟುವಿನ ಲಕ್ಷ್ಮೀ ನಾರಾಯಣ ರಾವ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಗ್ಯಾರಂಟಿ ಯೋಜನೆಗಳ ಸಮಾವೇಶ ಹಾಗೂ ಜಿಲ್ಲೆಯ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಸಚಿವರು, ಗ್ಯಾರಂಟಿ ಯೋಜನೆಗಳ ಬಗ್ಗೆ ವಿರೋಧ ಪಕ್ಷಗಳು ಅನಾವಶ್ಯಕವಾಗಿ ಟೀಕೆ ಮಾಡುತ್ತಿವೆ ಎಂದು ಕಿಡಿ ಕಾರಿದರು.

ರಾಜ್ಯದ ಜನತೆಯ ಅಭೂತಪೂರ್ವ ಆಶೀರ್ವಾದದಿಂದ ಆಡಳಿತಕ್ಕೆ ಬಂದ ನಮ್ಮ ಸರ್ಕಾರವು ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ರಾಜ್ಯದ ಜನತೆಯ ಸಂಜೀವಿನಿಯಾಗಿವೆ.
ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ, ಐದಕ್ಕೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ನಮ್ಮ ಸರ್ಕಾರವು ನುಡಿದಂತೆ ನಡೆದಿದೆ ಎಂದು ಹೇಳಿದರು.

ಈಗ ದೇಶವೇ ನಮ್ಮ ರಾಜ್ಯದತ್ತ ನೋಡುತ್ತಿದೆ. ಇತರೆ ರಾಜ್ಯಗಳಿಗೆ ನಮ್ಮ ಸರ್ಕಾರವು ಮಾದರಿಯಾಗಿದೆ. ನಮ್ಮ ಸರ್ಕಾರದಂತೆಯೇ ಅಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದಾರೆ. ಮಹಿಳೆಯರನ್ನು ಸಶಕ್ತರನ್ನಾಗಿ ಮಾಡಲು ಈ ಯೋಜನೆಗಳನ್ನು ರೂಪಿಸಿದೆ. ತಾಯಂದಿರು, ಅಕ್ಕ ತಂಗಿಯರು ಗ್ಯಾರಂಟಿ ಯೋಜನೆಗಳಿಂದ ಬಹಳ ಸಂತುಷ್ಟರಾಗಿದ್ದಾರೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

ಜನಪರ ಕಾಳಜಿಯಿರುವ ಯೋಜನೆಗಳನ್ನೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಜಾರಿಗೊಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಇರುವವರೆಗೂ ನಮ್ಮ ಯೋಜನೆಗಳು ನಿಲ್ಲೋದಿಲ್ಲ. ಲೋಕಸಭಾ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳನ್ನು ಇರೋದಿಲ್ಲ ಎಂದು ವಿರೋಧ ಪಕ್ಷಗಳು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇಂಥ‌ ಊಹಾಪೋಹಗಳಿಗೆ ಕಿವಿಗೊಡದೆ ಸರ್ಕಾರವನ್ನು ಬೆಂಬಲಿಸಿ ಎಂದು ಸಚಿವರು ಕೋರಿದರು.

ಬಿಜೆಪಿ ಕೇವಲ ಜನರ ಭಾವನೆಗಳನ್ನು ಕೆರಳಿಸುತ್ತದೆ, ಕಾಂಗ್ರೆಸ್ ಜನರ ಬದುಕಿಗೆ ಬೇಕಾದ ಕಾರ್ಯಕ್ರಮಗಳನ್ನು ರೂಪಿಸುತ್ತದೆ. ನಮ್ಮ ಸರ್ಕಾರ ಎಂದೂ ದೇವರು-ಧರ್ಮದ ಹೆಸರಲ್ಲಿ ಮರಳು ಮಾಡಿ ಅಧಿಕಾರ ನಡೆಸುವುದಿಲ್ಲ ಎಂದರು. ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯವು ಇನ್ನಷ್ಟು ಅಭಿವೃದ್ಧಿಯತ್ತ ಸಾಗಲಿದೆ. ಇದು ಶತಸಿದ್ಧ ಎಂದರು.

ಅಂಗನವಾಡಿ ಕಾರ್ಯಕರ್ತರಿಗೆ ಧನ್ಯವಾದ ಅರ್ಪಿಸಿದ ಸಚಿವೆ
ನಮ್ಮ ಯೋಜನೆಗಳನ್ನ ಜನರಿಗೆ ತಲುಪಿಸುವಲ್ಲಿ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಯಶಸ್ವಿಯಾಗಿದ್ದಾರೆ. ಅವರಿಗೆ ವೈಯಕ್ತಿಕವಾಗಿ ಅನಂತ ಧನ್ಯವಾದಗಳು ಎಂದರು. ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಕರಾವಳಿ ಜಿಲ್ಲೆಗಳ ಅಭಿವೃದ್ಧಿಗೆ ಬದ್ಧ
ಸಿದ್ದರಾಮಯ್ಯ ನವರು ಬಜೆಟ್‌ನಲ್ಲಿ ಮೀನುಗಾರಿಕೆಗೆ ಮೂರು ಸಾವಿರ ಕೋಟಿ ಅನುದಾನ ನೀಡಿದ್ದಾರೆ. ಇದು ಕರಾವಳಿ ಜಿಲ್ಲೆಗಳ ಮೇಲೆ ಸರ್ಕಾರಕ್ಕೆ ಇರುವ ಕಾಳಜಿ. ಮುಂದಿನ ದಿನಗಳಲ್ಲಿ ಈ ಜಿಲ್ಲೆಗಳ ಅಭಿವೃದ್ಧಿಗೆ ನಮ್ಮ ಸರ್ಕಾರ ಕಂಕಣ ಬದ್ಧವಾಗಿದೆ. ನಾನು ಈ‌ ಜಿಲ್ಲೆಯ ಉಸ್ತುವಾರಿ ಸಚಿವೆಯಾಗಿರುವುದು ನನ್ನ ಪುಣ್ಯ ಎಂದು ಹೇಳಿದರು.

ಸಮಾರಂಭದಲ್ಲಿ ಮೀನುಗಾರಿಕೆ ಸಚಿವರಾದ ಮಂಕಾಳ ವೈದ್ಯ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಪುಷ್ಪ ಅಮರ್ ನಾಥ್, ಎಂಎಲ್ ಸಿ ಮಂಜುನಾಥ್ ಭಂಡಾರಿ, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಂಶುಮಾನ್, ಗೇರು ಬೀಜ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಗಟ್ಟಿ, ಮುಖಂಡರಾದ ವಿನಯ್ ಕುಮಾರ್ ಸೊರಕೆ, ಉದಯ್ ಕುಮಾರ್ ಶೆಟ್ಟಿ, ಪ್ರಸಾದ್ ಕಾಂಚನ್, ದಿನೇಶ್ ಹೆಗ್ಡೆ ಮೊಗಳಿ, ಸರ್ಕಾರದ ಕಾರ್ಯದರ್ಶಿಗಳಾದ ಡಾ.ಎಂ.ಟಿ.ರೇಣು, ಐಜಿಪಿ‌ ಬೋರಲಿಂಗಯ್ಯ, ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್, ಜಿ.ಪಂ ಸಿಇಒ ಪ್ರತೀಕ್ ಬಾಯಲ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!