ಲೋಕಸಭೆ ಚುನಾವಣೆ: ಕಾಂಗ್ರೆಸ್‌ನಿಂದ 5 ಗ್ಯಾರಂಟಿ ಘೋಷಣೆ- ಮಹಿಳೆಯರಿಗೆ 1ಲಕ್ಷ ರೂ, ಶೇ.50ರಷ್ಟು ಮೀಸಲಾತಿ

ನವದೆಹಲಿ: ಕರ್ನಾಟಕದ ಗ್ಯಾರಂಟಿ ಯೋಜನೆಗಳಿಂದ ಪ್ರೇರಿತವಾಗಿರುವ ಕಾಂಗ್ರೆಸ್, ಲೋಕಸಭೆ ಚುನಾವಣೆಗೂ ಮಹಿಳೆಯರಿಗೆ ಐದು ಗ್ಯಾರಂಟಿಗಳನ್ನು ಬುಧವಾರ ಘೋಷಿಸಿದೆ.

‘ನಾರಿ ನ್ಯಾಯ ಗ್ಯಾರಂಟಿ’ ಯೋಜನೆ ಅಡಿಯಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ಐದು ಭರವಸೆಗಳನ್ನು ನೀಡಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ದೇಶದ ಬಡ ಕುಟುಂಬದ ಮಹಿಳೆಗೆ ವಾರ್ಷಿಕ 1 ಲಕ್ಷ ರೂ. ಆರ್ಥಿಕ ಸಹಾಯವನ್ನು ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡುವುದಾಗಿ ಮತ್ತು ಕೇಂದ್ರ ಸರ್ಕಾರಿ ಉದ್ಯೋದಗಲ್ಲಿ ಮಹಿಳೆಯರಿಗೆ ಶೇಕಡಾ 50 ರಷ್ಟು ಮೀಸಲಾತಿ ನೀಡುವುದಾಗಿ ಹೇಳಿದೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಪಕ್ಷವು ಮಹಿಳೆಯರಿಗೆ “ನಾರಿ ನ್ಯಾಯ ಗ್ಯಾರಂಟಿ”ಯನ್ನು ಘೋಷಿಸಿದೆ. ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷ ರೈತ ನ್ಯಾಯ ಮತ್ತು ಯುವ ನ್ಯಾಯದ ಭರವಸೆಗಳನ್ನು ಘೋಷಿಸಿದೆ ಎಂದು ಹೇಳಿದರು.

ನಮ್ಮ ಗ್ಯಾರಂಟಿಗಳು ಖಾಲಿ ಭರವಸೆ ಮತ್ತು ಹೇಳಿಕೆಗಳಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಹಿಂದಿಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ನೀವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡುತ್ತಿರಿ ಮತ್ತು ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸುವ ಈ ಹೋರಾಟದಲ್ಲಿ ನಮ್ಮ ಕೈಗಳನ್ನು ಬಲಪಡಿಸಬೇಕು ಎಂದು ಖರ್ಗೆ ಮನವಿ ಮಾಡಿದ್ದಾರೆ.

“ಮಹಾಲಕ್ಷ್ಮಿ” ಗ್ಯಾರಂಟಿ ಯೋಜನೆ ಅಡಿ ದೇಶದ ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕವಾಗಿ 1 ಲಕ್ಷ ರೂ. ವರ್ಗಾವಣೆ ಮಾಡಲಾಗುವುದು. ಇದಲ್ಲದೆ, “ಆದಿ ಆಬಾದಿ, ಪುರ ಹಕ್” ಅಡಿಯಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಗಳಲ್ಲಿ ಎಲ್ಲಾ ಹೊಸ ನೇಮಕಾತಿಗಳಲ್ಲಿ ಶೇಕಡಾ 50 ರಷ್ಟು ಮಹಿಳೆಯರಿಗೆ ಮೀಸಲಿಡಲಾಗುವುದು.

“ಶಕ್ತಿ ಕಾ ಸಮ್ಮಾನ್” ಖಾತರಿ ಅಡಿಯಲ್ಲಿ, ಆಶಾ, ಅಂಗನವಾಡಿ ಮತ್ತು ಮಧ್ಯಾಹ್ನದ ಊಟದ ಕಾರ್ಯಕರ್ತೆಯರ ಮಾಸಿಕ ವೇತನಕ್ಕೆ ಕೇಂದ್ರದ ಹಣವನ್ನು ಡಬಲ್ ಮಾಡಲಾಗುವುದು ಎಂದು ಖರ್ಗೆ ಹೇಳಿದ್ದಾರೆ.

“ಅಧಿಕಾರ ಮೈತ್ರಿ” ಗ್ಯಾರಂಟಿ ಅಡಿಯಲ್ಲಿ, ಮಹಿಳೆಯರಿಗೆ ತಮ್ಮ ಕಾನೂನು ಹಕ್ಕುಗಳ ಬಗ್ಗೆ ಶಿಕ್ಷಣ ನೀಡಲು ಮತ್ತು ಅವರಿಗೆ ಸಹಾಯ ಮಾಡಲು ಪ್ಯಾರಾ-ಲೀಗಲ್ ಕಾರ್ಯಕಾರಿಯಾಗಿ ಸೇವೆ ಸಲ್ಲಿಸಲು ಕಾಂಗ್ರೆಸ್ ಪ್ರತಿ ಪಂಚಾಯತ್‌ನಲ್ಲಿ “ಅಧಿಕಾರ ಮೈತ್ರಿ” ಯನ್ನು ನೇಮಿಸುತ್ತದೆ.

ಇನ್ನು “ಸಾವಿತ್ರಿ ಬಾಯಿ ಫುಲೆ ಹಾಸ್ಟೆಲ್‌ಗಳು” ಗ್ಯಾರಂಟಿ ಯೋಜನೆ ಅಡಿ, ದೇಶದಲ್ಲಿ ಉದ್ಯೋಗದಲ್ಲಿರುವ ಮಹಿಳೆಯರಿಗಾಗಿ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದರಂತೆ ಹಾಸ್ಟೆಲ್‌ಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.

Leave a Reply

Your email address will not be published. Required fields are marked *

error: Content is protected !!