ಕಾಂಗ್ರೆಸ್ನ 2ನೇ ಪಟ್ಟಿ ಬಿಡುಗಡೆ: ಕಮಲ್ ನಾಥ್ ಹಾಗೂ ಅಶೋಕ್ ಗೆಹ್ಲೋಟ್ ಪುತ್ರರಿಗೆ ಟಿಕೆಟ್!
ನವದೆಹಲಿ: 2024ರ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದೆ.
ಈ ಪಟ್ಟಿಯಲ್ಲಿ 43 ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಮಾಜಿ ಸಿಎಂ ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಅವರಿಗೆ ಚಿಂದ್ವಾರದಿಂದ ಮತ್ತು ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಅವರ ಪುತ್ರ ವೈಭವ್ ಗೆಹ್ಲೋಟ್ ಗೆ ಜಲೋರ್ ನಿಂದ ಟಿಕೆಟ್ ನೀಡಲಾಗಿದೆ.
ಈ ಹಿಂದೆ ಪಕ್ಷದ ಮೊದಲ ಪಟ್ಟಿಯಲ್ಲಿ 39 ಹೆಸರುಗಳನ್ನು ಪ್ರಕಟಿಸಲಾಗಿತ್ತು. ಈ ಮೂಲಕ ಕಾಂಗ್ರೆಸ್ ಇದುವರೆಗೆ 82 ಹೆಸರುಗಳನ್ನು ಪ್ರಕಟಿಸಿದೆ. ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ (ಸಿಇಸಿ) ಎರಡನೇ ಸಭೆ ನಿನ್ನೆ ಸಂಜೆ ನಡೆದಿತ್ತು. ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಸಿಇಸಿ ಸದಸ್ಯರು ಭಾಗವಹಿಸಿದ್ದರು. ರಾಜಸ್ಥಾನ ಮತ್ತು ಉತ್ತರಾಖಂಡದ ಹಿರಿಯ ಕಾಂಗ್ರೆಸ್ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.
ಸಿಇಸಿಯ ಮೊದಲ ಸಭೆ ಮಾರ್ಚ್ 7ರಂದು ನಡೆಯಿತು. 39 ಸ್ಥಾನಗಳ ಮೊದಲ ಪಟ್ಟಿಯನ್ನು ಮಾರ್ಚ್ 8 ರಂದು ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ ಛತ್ತೀಸ್ಗಢ, ಕರ್ನಾಟಕ, ಕೇರಳ, ಲಕ್ಷದ್ವೀಪ, ಮೇಘಾಲಯ, ನಾಗಾಲ್ಯಾಂಡ್, ಸಿಕ್ಕಿಂ, ತೆಲಂಗಾಣ ಮತ್ತು ತ್ರಿಪುರಾ ಲೋಕಸಭಾ ಸ್ಥಾನಗಳಿಗೆ ಹೆಸರುಗಳನ್ನು ಪ್ರಕಟಿಸಲಾಯಿತು. ಇವರಲ್ಲಿ ಕೇರಳದಿಂದ 16, ಕರ್ನಾಟಕದ 7, ಛತ್ತೀಸ್ಗಢದಿಂದ 6 ಮತ್ತು ತೆಲಂಗಾಣದಿಂದ 4 ಅಭ್ಯರ್ಥಿಗಳು ಸೇರಿದ್ದಾರೆ