ಕಾಪು: ಸುಲಿಗೆ ಪ್ರಕರಣದ ಆರೋಪಿ ಸೆರೆ
ಕಾಪು, ಮಾ.11(ಉಡುಪಿ ಟೈಮ್ಸ್ ವರದಿ): ಠಾಣಾ ವ್ಯಾಪ್ತಿಯಲ್ಲಿ ಮಾರ್ಚ್ 2ರಂದು ನಡೆದಿದ್ದ ವ್ಯಕ್ತಿಯ ಸುಲಿಗೆ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಂತೋಷ್ ಕುಮಾರ್ (28) ಪ್ರಕರಣದ ಬಂಧಿತ ಆರೋಪಿ. ಬಂದಿತ ಆರೋಪಿಯಿಂದ 1,00,200 ರೂ. ನಗದು, ಒಂದು ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮಾ.2 ರಂದು ಉಡುಪಿಯ ಸಂತೆಕಟ್ಟೆ ನಿವಾಸಿ ಉಮೇಶ್ ಪ್ರಭು ಅವರು ತಮ್ಮ ವಾಹನದಲ್ಲಿ ಸಾಮಗ್ರಿಗಳನ್ನ ತುಂಬಿಕೊಂಡು ಅಂಗಡಿಗಳಿಗೆ ಲೈನ್ ಸೇಲ್ ಮಾಡುವ ಸಲುವಾಗಿ ತೆಗೆದುಕೊಂಡು ಹೋಗಿದ್ದರು. ಬಳಿಕ ಸಾಮಾಗ್ರಿಗಳನ್ನು ಮಾರಾಟ ಮಾಡಿ ಬಂದ ಹಣ 1,25,000 ರೂ. ನಗದನ್ನು ಬ್ಯಾಗಿನಲ್ಲಿ ಹಾಕಿಕೊಂಡು ವಾಪಸ್ ಆಗುತ್ತಿದ್ದರು. ಈ ವೇಳೆ ಕಾಪು ಮಾರಿಗುಡಿ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ದ್ವಿಚಕ್ರ ವಾಹನದಲ್ಲಿ ಅಲ್ಲಿಗೆ ಬಂದ ಆರೋಪಿ ಸಂತೋಷ್ ಕುಮಾರ್ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿ ಉಮೇಶ್ ಪ್ರಭು ಅವರ ಬಳಿಯಿದ್ದ 1,25,000 ರೂ. ಹಣ ಇದ್ದ ಬ್ಯಾಗನ್ನು ಕದ್ದು ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕಾಪು ಪೊಲೀಸರು ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿ ಇಂದು ಆರೋಪಿಯನ್ನ ಬಂಧಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಕಾರ್ಕಳ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಅರವಿಂದ ಕಲಗುಜ್ಜಿ ಇವರ ಮಾರ್ಗದರ್ಶನದಲ್ಲಿ, ಕಾಪು ವೃತ್ತ ನಿರೀಕ್ಷಕರಾದ ಜಯಶ್ರೀ ಎಸ್ ಮಾನೆ ಇವರ ನೇತೃತ್ವದಲ್ಲಿ ಕಾಪು ಠಾಣೆ ಪಿಎಸ್ಐ ಪುರುಷೋತ್ತಮ, ಅಪರಾಧ ಪತ್ತೆ ತಂಡದ ಪ್ರವೀಣ್ ಕುಮಾರ್, ಕಾಪು ಠಾಣೆಯ ನಾರಾಯಣ, ಪಡುಬಿದ್ರೆ ಠಾಣೆಯ ರಾಜೇಶ್ ಭಾಗವಹಿಸಿರುತ್ತಾರೆ.