ಉಡುಪಿ: ಮಾ.13 ಎಂಜಿಎಂ ಕ್ರೀಡಾಂಗಣದಲ್ಲಿ ಗ್ಯಾರಂಟಿ ಸಮಾವೇಶ- ಜಿಲ್ಲಾಧಿಕಾರಿ

ಉಡುಪಿ, ಮಾ.11: ಗ್ಯಾರಂಟಿ ಯೋಜನೆಗಳ ಸಮಾವೇಶ ಹಾಗೂ ಜಿಲ್ಲೆಯ ವಿವಿಧ ಕಾಮಗಾರಿಗಳ ಉದ್ಘಾಟನಾ
ಕಾರ್ಯಕ್ರಮವು ಮಾರ್ಚ್ 13 ರಂದು ಬುಧವಾರ ಬೆಳಗ್ಗೆ 11 ಗಂಟೆಗೆ ನಗರದ ಕುಂಜಿಬೆಟ್ಟುವಿನ ಮಹಾತ್ಮ ಗಾಂಧೀ ಮೆಮೋರಿಯಲ್ ಕಾಲೇಜಿನ ಆರೂರು ಲಕ್ಷ್ಮಿ ನಾರಾಯಣ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ತಿಳಿಸಿದರು.

ಅವರು ಇಂದು ರಜತಾದ್ರಿ ವೀಡಿಯೋ ಕಾನ್ಫ್ರೆನ್ಸ್ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಸಮಾವೇಶ ಹಾಗೂ ವಿವಿಧ ಕಾಮಗಾರಿಗಳ ಅಯೋಜನೆ ಕುರಿತ ನಡೆದ ಪೂರ್ವಭಾವಿಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಾ.13 ರಂದು ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಗ್ಯಾರಂಟಿ ಯೋಜನೆಗಳ ಸಮಾವೇಶ ಹಾಗೂ ವಿವಿಧ ಕಾಮಗಾರಿಗಳ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಆರ್ ಹೆಬ್ಬಾಳಕರ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಕೆ.ಹೆಚ್. ಮುನಿಯಪ್ಪ, ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ, ಇಂಧನ ಸಚಿವರಾದ ಕೆ.ಜೆ ಜಾರ್ಜ್, ಕಂದಾಯ ಸಚಿವ ಕೃಷ್ಣ ಭೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಖ ಖರ್ಗೆ, ಕಾರ್ಮಿಕ ಸಚಿವ ಸಂತೋಷ್ ಎಸ್ ಲಾಡ್, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಹಿಂದುಳಿದ ವರ್ಗಗಳ ಇಲಾಖೆ ಸಚಿವ ತಂಗಡಗಿ ಶಿವರಾಜ್ ತಂಗಪ್ಪ, ಶಿಕ್ಷಣ ಸಚಿವ ಎಸ್ ಮಧು ಬಂಗಾರಪ್ಪ ಉನ್ನತ ಶಿಕ್ಷಣ ಸಚಿವರಾದ ಎನ್.ಸಿ ಸುಧಾಕರ್ ಹಾಗೂ ಮತ್ತಿತರ
ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಜಿಲ್ಲಾ ಮಟ್ಟದ ಸಮಾವೇಶ ಕಾರ್ಯಕ್ರಮಕ್ಕೆ ಸಹಸ್ರಾರು ಸಂಖ್ಯೆಯ ಫಲಾನುಭವಿಗಳೂ, ಸಾರ್ವಜನಿಕರು ಪಾಲ್ಗೊಳ್ಳಲಿದ್ದು, ಅವರಿಗೆ ಅಗತ್ಯವಿರುವ ಕುಡಿಯುವ ನೀರು, ಊಟದ ವ್ಯವಸ್ಥೆ ಹಾಗೂ ಬಸ್ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಯಾವುದೇ ನ್ಯೂನ್ಯತೆ ಇಲ್ಲದಂತೆ ಆಯೋಜಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯಗಳ ವಿತರಣೆ ನಡೆಯಲಿದೆ ಎಂದ ಅವರು, ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಶಿಷ್ಠಾಚಾರದಂತೆ ಜನಪ್ರತಿನಿಧಿಗಳಿಗೆ, ಗಣ್ಯರಿಗೆ ತಲುಪಿಸಬೇಕು ಎಂದರು.
ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ವಾಹನಗಳ ನಿಲುಗಡೆಗೆ ಪಾರ್ಕಿಂಗ್ ವ್ಯವಸ್ಥೆಗಳನ್ನು ಗುರುತಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು, ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವಿನಂತಿ ಮಾಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಸಮಾವೇಶದ ಯಶಸ್ವಿಗೆ ತಾಲೂಕು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮನ್ವಯದೊಂದಿಗೆ ಶಿಸ್ತು ಬದ್ಧವಾಗಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಜಿ. ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ.ಪಿ ಗಡಾಧ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ತಹಶೀಲ್ದಾರ್‌ಗಳು, ತಾಲೂಕು ಪಂಚಾಯತ್ ಇ.ಓ ಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!