ಮಾದಕ ವಸ್ತುಗಳ ದುಷ್ಪರಿಣಾಮಗಳ ಜಾಗೃತಿಗಾಗಿ ಪೊಲೀಸರಿಂದ ಮ್ಯಾರಥಾನ್
ಉಡುಪಿ: ಕರ್ನಾಟಕ ರಾಜ್ಯ ಪೊಲೀಸ್ 50ನೇ ವರ್ಷದ ಸುವರ್ಣ ಮಹೋತ್ಸವ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಡ್ರಗ್ಸ್ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಆಶಯದೊಂದಿಗೆ ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಪೊಲೀಸರಿಂದ ಮ್ಯಾರಥಾನ್ ಓಟವನ್ನು ರವಿವಾರ ಮಣಿಪಾಲದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಮ್ಯಾರಥಾನ್ಗೆ ಮಣಿಪಾಲ ಪೊಲೀಸ್ ಠಾಣೆಯ ಎದುರು ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ ಚಾಲನೆ ನೀಡಿದರು. ಈ ಸಂದರ್ಭ ಉಡುಪಿ ವಿಭಾಗದ ಡಿವೈಎಸ್ಪಿ ಪ್ರಭು ಡಿ.ಟಿ., ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ಮೊದಲಾದವರು ಉಪಸ್ಥಿತರಿದ್ದರು.
ಮಣಿಪಾಲದಿಂದ ಆರಂಭಗೊಂಡ 5ಕಿ.ಮೀ. ದೂರದ ಓಟವು ಸಿಂಡಿಕೇಟ್ ಸರ್ಕಲ್, ಡಿಸಿ ಕಚೇರಿ ರಸ್ತೆ, ಕಾಯಿನ್ ಸರ್ಕಲ್, ಪೆರಂಪಳ್ಳಿ, ಮರೀನಾ ರಸ್ತೆ, ಎಂಐಟಿ ಮಾರ್ಗದಲ್ಲಿ ಸಾಗಿ ಮಣಿಪಾಲ ಠಾಣೆಯಲ್ಲಿ ಸಮಾಪ್ತಿಗೊಂಡಿತು. ಇದರಲ್ಲಿ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ಸಾರ್ವಜನಿಕರು ಸೇರಿದಂತೆ ಸುಮಾರು 400 ಮಂದಿ ಪಾಲ್ಗೊಂಡಿದ್ದರು. ಪೊಲೀಸ್ ಮತ್ತು ಸಾರ್ವಜನಿಕ ವಿಭಾಗದಲ್ಲಿ ಐದು ಕಿ.ಮೀ. ಓಟ ನಡೆಯಿತು.
ಓಟದ ವಿಜೇತರಿಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ.ಸಿದ್ದಲಿಂಗಪ್ಪ ವಿತರಿಸಿದರು.