ಕರಾವಳಿಯಲ್ಲಿ ಮೀನು ಸಂತತಿ ವೃದ್ಧಿಗೆ 3 ಜಿಲ್ಲೆಗಳಲ್ಲಿ ‘ಕೃತಕ ಬಂಡೆ’ ಯೋಜನೆ ಜಾರಿ- ಸಚಿವ ಮಂಕಾಳಿ ವೈದ್ಯ
ಗಂಗೊಳ್ಳಿ: ರಾಜ್ಯದ ಪಶ್ಚಿಮ ಕರಾವಳಿಯಲ್ಲಿ ಮೀನಿನ ಸಂತತಿ ವೃದ್ಧಿಗಾಗಿ ಇದೇ ಮೊದಲ ಬಾರಿ ಕರಾವಳಿಯ ಮೂರು ಜಿಲ್ಲೆಗಳಲ್ಲಿ ‘ಕೃತಕ ಬಂಡೆ’ (ಆರ್ಟಿಫಿಷಿಯಲ್ ರೀಫ್) ಯೋಜನೆಯನ್ನು ಅರಬಿಸಮುದ್ರದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಮಂಕಾಳಿ ಎಸ್.ವೈದ್ಯ ತಿಳಿಸಿದ್ದಾರೆ.
ಗಂಗೊಳ್ಳಿ ಬಂದರಿನಲ್ಲಿ ಆಯೋಜಿಸಲಾದ ಕಾರ್ಯಕ್ರಮಲ್ಲಿ ಸಂತ್ರಸ್ಥ ಮೀನುಗಾರ ಕುಟುಂಬಗಳಿಗೆ ಪರಿಹಾರ ಹಾಗೂ ಮೀನುಗಾರರಿಗೆ ಇಲಾಖೆ ವಿವಿಧ ಸವಲತ್ತುಗಳನ್ನು ವಿತರಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.
ಈ ಯೋಜನೆಗೆ ನಿನ್ನೆ ಭಟ್ಕಳದಲ್ಲಿ ಚಾಲನೆ ನೀಡಲಾಗಿದೆ. ಕರಾವಳಿ ಮೂರು ಜಿಲ್ಲೆಗಳಲ್ಲಿ ಒಟ್ಟು 57 ಕಡೆಗಳಲ್ಲಿ ಕೃತಕ ಬಂಡೆಗಳನ್ನು ನಿರ್ಮಿಸಲಾಗು ತ್ತದೆ. ಇದಕ್ಕಾಗಿ 17.37 ಕೋಟಿ ರೂ.ಗಳ ಯೋಜನೆ ಯನ್ನು ಸಿದ್ಧಪಡಿಸಲಾಗಿದೆ. ಉತ್ತರ ಕನ್ನಡದ 25 ಕಡೆಗಳಲ್ಲಿ ಇದು ಅನುಷ್ಠಾನಗೊಂಡರೆ, ಉಡುಪಿ ಮತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ 32 ಗಳಲ್ಲಿ ಜಾರಿಗೊಳಿಸಲಾಗುತ್ತದೆ ಎಂದರು.
ಜಿಪಿಎಸ್ಗಳನ್ನು ಬಳಸಿ ಇದಕ್ಕಾಗಿ ಅರಬ್ಬೀ ಸಮುದ್ರ ದಲ್ಲಿ ಜಾಗಗಳನ್ನು ಗುರುತಿಸಲಾಗುವುದು. ಕೆಲವು ಕಡೆಗಳಲ್ಲಿ 4ರಿಂದ 5ಮೀ, ಹೆಚ್ಚಿನ ಕಡೆಗಳಲ್ಲಿ 10ಮೀ. ಆಳದಲ್ಲಿ ವಿವಿಧ ಆಕಾರಗಳಲ್ಲಿ ತಯಾರಿಸಿದ ಬಂಡೆಗಳನ್ನು ಇರಿಸಿ ಅಲ್ಲಿ ಪಾಚಿ, ಸಮುದ್ರ ಸಸ್ಯ ಬೆಳೆಯುವಂತೆ ಮಾಡಿ ಆಹಾರಕ್ಕಾಗಿ ಬರುವ ಮೀನುಗಳು ಬಂದು ಮೊಟ್ಟೆ ಇಟ್ಟು ಮರಿ ಮಾಡುವಂತೆ ನೋಡಿಕೊಳ್ಳಲಾಗುವುದು ಎಂದರು.
ಈಗಾಗಲೇ ಕೇರಳ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಜಾರಿಗೊಳಿಸಿ ರುವ ಈ ಯೋಜನೆ ಯಶಸ್ವಿಯಾಗಿದೆ. ಅಲ್ಲೀಗ ಹೊಸ ಹೊಸ ಜಾತಿಯ ಮೀನುಗಳು ದೊರೆಯುತಿದ್ದು, ಸಣ್ಣ ಪಾತಿಗಳಲ್ಲಿ ಮೀನುಗಾರಿಕೆ ಮಾಡುವವರಿಗೂ ಒಳ್ಳೆಯ ಮೀನು ಸಿಗುತ್ತಿದೆ ಎಂದು ಗೊತ್ತಾಗಿದೆ. ಇವುಗಳನ್ನು ಅಧ್ಯಯನ ಮಾಡಿರುವ ನಮ್ಮ ಅಧಿಕಾರಿಗಳು ಇಲ್ಲೂ ಅದನ್ನು ಅನುಷ್ಠಾನ ಮಾಡಲಿದ್ದಾರೆ ಎಂದರು.
ಕಾನೂನು ಜಾರಿಯಾಗಬೇಕು: ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರುವ ಮೀನುಗಳ ಕೊರತೆಗೆ ಅವೈಜ್ಞಾನಿಕ ಮೀನುಗಾರಿಕೆ ಕಾರಣವೇ ಎಂದು ಕೇಳಿದಾಗ, ದೇಶ ವಿಶಾಲವಾದ ಕಡಲ ತೀರವನ್ನು ಹೊಂದಿದೆ. ನಮ್ಮ ರಾಜ್ಯದಲ್ಲಿರು ವುದು ಕೇವಲ 320ಕಿ.ಮೀ. ಉದ್ದದ ತೀರ ಮಾತ್ರ. ಕೇಂದ್ರ ಸರಕಾರ ಇಡೀ ದೇಶಕ್ಕೆ ಅನ್ವಯವಾಗುವಂತೆ ಮೀನು ಗಾರಿಕಾ ಕಾನೂನನ್ನು ಜಾರಿಗೆ ತಂದರೆ ಮಾತ್ರ ಇಂಥ ಮೀನುಗಾರಿಕೆಯನ್ನು ನಿಲ್ಲಿಸಬಹುದು ಎಂದು ಅಭಿಪ್ರಾಯಪಟ್ಟರು.
ಆಗ ಎಲ್ಲಾ ಕಡೆಗಳಲ್ಲಿ ಕಡ್ಡಾಯವಾಗಿ ಮೂರು ತಿಂಗಳ ಮೀನುಗಾರಿಕಾ ರಜೆಯನ್ನು ಜಾರಿಗೆ ತರಬಹುದು ಎಂದರು.