ಜುಲೈವರೆಗೆ ಬೆಂಗಳೂರು ಪರಿಸ್ಥಿತಿ ನಿಭಾಯಿಸುವಷ್ಟು ನೀರು ಇದೆ: ರಾಮಪ್ರಸಾತ್ ಮನೋಹರ್

ಬೆಂಗಳೂರು: ಆತಂಕ ಬೇಡ, ವದಂತಿಗಳಿಗೆ ಕಿವಿಕೊಡ ಬೇಡಿ, ಜುಲೈವರೆಗೆ ಬೆಂಗಳೂರು ಪರಿಸ್ಥಿತಿ ನಿಭಾಯಿಸುವಷ್ಟು ನೀರು ನಮ್ಮಲ್ಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಬಿಡಬ್ಲ್ಯುಎಸ್‌ಎಸ್‌ಬಿ) ಅಧ್ಯಕ್ಷ ರಾಮಪ್ರಸಾತ್ ಮನೋಹರ್ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರ ಮತ್ತು ಹೊರವಲಯದಲ್ಲಿ ಜುಲೈವರೆಗೆ ಸರಬರಾಜು ಮಾಡಲು ಸಾಕಷ್ಟು ನೀರು ನಮ್ಮಲ್ಲಿದೆ. ಆತಂಕ ಬೇಡ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಬೆಂಗಳೂರು ಕುಡಿಯುವ ನೀರು ಬಿಕ್ಕಟ್ಟು ಎದುರಿಸುವ ಸಾಧ್ಯತೆ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದರು.

ಮಂಡಳಿಯು ಪ್ರತಿನಿತ್ಯ 1,470 ಎಂಎಲ್ ಡಿ ನೀರನ್ನೂ ಪೂರೈಸುತ್ತಿದೆ. ಮೇ 15 ರಂದು ಕಾವೇರಿ 5ನೇ ಹಂತದ ಯೋಜನೆಗೆ ಚಾಲನೆ ನೀಡಿದ ನಂತರ ಬೆಂಗಳೂರಿಗೆ ಹೆಚ್ಚುವರಿಯಾಗಿ 775 ಎಂಎಲ್‌ಡಿ ನೀರು ಸಿಗಲಿದೆ. ನಗರ ಮತ್ತು ಹೊರವಲಯಕ್ಕೆ 2,100 ಎಂಎಲ್‌ಡಿ ನೀರಿನ ಅಗತ್ಯವಿದೆ.

ನಗರದ ಹೊರವಲಯದಲ್ಲಿರುವ ಜನರು ಬೋರ್‌ ವೆಲ್‌ಗಳನ್ನು ಅವಲಂಬಿಸಿದ್ದಾರೆ. ಹಲವು ಕೆರೆಗಳು ಒಣಗುವ ಹಂತದಲ್ಲಿದೆ. ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಅಣೆಕಟ್ಟುಗಳಲ್ಲಿ ನಗರದ ಅಗತ್ಯಗಳನ್ನು ಪೂರೈಸಲು ಸಾಕಷ್ಟು ನೀರಿದೆ. ನಗರಕ್ಕೆ ತಿಂಗಳಿಗೆ 1.54 ಟಿಎಂಸಿ ಅಡಿ ನೀರು ಮಾತ್ರ ಬೇಕಾಗುತ್ತದೆ. ಹೊರವಲಯವೂ ಕಾವೇರಿ ನೀರನ್ನು ಅವಲಂಬಿಸಿದೆ. ನಗರ ಮತ್ತು ಹೊರವಲಯಕ್ಕೆ ಜುಲೈವರೆಗೆ 17 ಟಿಎಂಸಿ ಅಡಿ ನೀರು ಬೇಕು. ಅಣೆಕಟ್ಟುಗಳಲ್ಲಿ ಈಗ 34 ಟಿಎಂಸಿ ಅಡಿ ನೀರಿದೆ ಎಂದು ಮಾಹಿತಿ ನೀಡಿದರು.

ನಗರ ಹೊರವಲಯದ ಜನರಿಗೆ ಸಂಸ್ಕರಿಸಿದ ನೀರನ್ನು ದ್ವಿತೀಯ ಉದ್ದೇಶಗಳಿಗೆ ಬಳಸುವಂತೆ ಮಂಡಳಿಯು ಮನವಿ ಮಾಡಿದೆ. ದಿನಕ್ಕೆ ಸುಮಾರು 1,300 ಎಂಎಲ್‌ಡಿ ನೀರು ಲಭ್ಯವಿದೆ. “ಇದಲ್ಲದೆ, ಸಂಸ್ಕರಿಸಿದ ನೀರಿನ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸಲು ಚಿಂತನೆ ನಡೆಸಲಾಗುತ್ತಿದ್ದು, ನಗರದ ಕೆರೆಗಳ ತುಂಬಲು ತಜ್ಞರ ಸಲಹೆಗಳ ಪಡೆಯಲಾಗುತ್ತಿದೆ.

200 ಬೋರ್‌ವೆಲ್‌ಗಳ ಕೊರೆಯಲು ಆಡಳಿತ ಮಂಡಳಿ ಆದೇಶ ನೀಡಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು. ಕಾವೇರಿ ಐದನೇ ಹಂತದ ಕಾಮಗಾರಿ ಇನ್ನೂ ಪೂರ್ಣಗೊಳ್ಳದ ಕಾರಣ ನಗರ ವ್ಯಾಪ್ತಿಗೆ ತರಲಾದ 110 ಹಳ್ಳಿಗಳಲ್ಲಿ ಕೇವಲ 40,000 ಬಿಡಬ್ಲ್ಯುಎಸ್‌ಎಸ್‌ಬಿ ನೀರಿನ ಸಂಪರ್ಕಗಳಿವೆ. ಈ ಪ್ರದೇಶಗಳಿಗೆ 79 ಟ್ಯಾಂಕರ್‌ಗಳ ಮೂಲಕ ಉಚಿತ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.

ಈ ನಡುವೆ ನೀರಿನ ಸಮಸ್ಯೆ ಕುರಿತು ಸೋಮವಾರ ಪ್ರತಿಭಟನೆ ನಡೆಸಲಾಗುವುದು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಪ್ರತಿಭಟನೆ ಬದಲು ಕುಡಿಯುವ ನೀರಿನ ಕೊರತೆ ನೀಗಿಸಲು ವಿರೋಧ ಪಕ್ಷಗಳು ಸಲಹೆಗಳನ್ನು ನೀಡಲಿ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!