ಪಲಿಮಾರು: ಶಾಂಭವಿ ನದಿ ಪಾತ್ರದಿಂದ ನೀರು ಸರಬರಾಜು ಪೈಪ್‌ಲೈನ್ ಕಾಮಗಾರಿಗೆ ಗ್ರಾಮಸ್ಥರ ವಿರೋಧ
ಪಡುಬಿದ್ರಿ : ನಂದಿಕೂರಿನ ವಿಶೇಷ ಆರ್ಥಿಕ ವಲಯ ದೇವರಕಾಡು ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಕೈಗಾರಿಕಾ ಘಟಕವೊಂದಕ್ಕೆ ಪಲಿಮಾರಿನ ಶಾಂಭವಿ ನದಿ ಪಾತ್ರದಿಂದ ನೀರು ಸರಬರಾಜು ಪೈಪ್‌ಲೈನ್ ಕಾಮಗಾರಿಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ಪಲಿಮಾರಿನಲ್ಲಿ ನಡೆದಿದೆ.
ಇನ್ನಾ, ಬಳ್ಕುಂಜೆ ಹಾಗೂ ಪಲಿಮಾರು ಗ್ರಾಮಕ್ಕೆ ಕೃಷಿ ಹಾಗೂ ಕುಡಿಯುವ ನೀರಿಗೆ ಪ್ರಮುಖ ಮೂಲವಾಗಿರುವ ಶಾಂಭವಿ ನದಿ ನೀರನ್ನು ಸರಬರಾಜು ಮಾಡಲು ಗ್ರಾಮಗಳ ವಿರೋಧದ ನಡುವೆಯೂ ತರಾತುರಿಯಲ್ಲಿ ಕೆಲದಿನಗಳಿಂದ ಪೈಪುಲೈನ್ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಇದನ್ನು ತಿಳಿದ ಗ್ರಾಮಸ್ಥರು ಸಂಘಟಿತರಾಗಿ ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಶುಕ್ರವಾರ ಆಗಮಿಸಿ ವಿರೋಧ ವ್ಯಕ್ತಪಡಿಸಿದರಲ್ಲದೆ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.
ಕಾಮಗಾರಿಗೆ ಸಂಬಂಧಿಸಿ ಸ್ಥಳೀಯಾಡಳಿತದ ನಿರಾಕ್ಷೇಪಣಾ ಪತ್ರ ಸಹಿತ ಇಲಾಖೆಗಳ ಪರವಾನಿಗೆ ಪತ್ರವನ್ನು ನೀಡುವಂತೆ ಪಟ್ಟುಹಿಡಿದರು. ಆದರೆ ಗುತ್ತಿಗೆದಾರರಲ್ಲಿ ಸ್ಥಳೀಯಾಡಳಿತದ ಯಾವುದೇ ನಿರಾಕ್ಷೇಪಣಾ ಪತ್ರಿಲ್ಲದೆ, ಕೇವಲ ಉನ್ನತ ಮಟ್ಟದಲ್ಲಿ ಇಲಾಖೆಗಳಿಂದ ಪಡೆದ ಪರವಾನಿಗೆಯನ್ನಷ್ಟೇ ನೀಡಿದರು.
ಈ ಮಧ್ಯೆ ಗ್ರಾಮಸ್ಥರು ಸ್ಥಳೀಯ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರಿಗೂ ಕರೆ ಮಾಡಿ ಸಮಸ್ಯೆ ಬಗ್ಗೆ ವಿವರಿಸಿದ್ದು, ಅವರು ಊರಲ್ಲಿ ಇರದ ಕಾರಣ, ಅವರು ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಗ್ರಾಮಸ್ಥರಿಗೆ ಮೌಖಿಕವಾಗಿ ತಿಳಿಸಿದರು.
ಗ್ರಾಪಂನ ನಿರ್ಣಯವಿದ್ದರೂ, ಅಕ್ರಮವಾಗಿ ನೀರು ಸರಬರಾಜು ಕಾಮಗಾರಿಗೆ ಮುಂದಾಗಿರುವ ಗುತ್ತಿಗೆದಾರರಿಗೆ ಈಗ ಅಗೆದಿರುವ ಜಾಗವನ್ನು ಸಮತಟ್ಟು ಮಾಡಿ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ಗ್ರಾಮಸ್ಥರ ವಿರೋಧದಿಂದ ಗುತ್ತಿಗೆದಾರರು ಕಾಮಗಾರಿಯನ್ನು ಸ್ಥಗಿತಗೊಳಿಸಿ ಅಲ್ಲಿಂದ ತೆರಳಿದರು.
ಗ್ರಾಪಂ ಮಾಜಿ ಆಧ್ಯಕ್ಷನೇ ಗುತ್ತಿಗೆದಾರ?
ಪಲಿಮಾರು ಗ್ರಾಪಂ ಮಾಜಿ ಅಧ್ಯಕ್ಷರೊಬ್ಬರು ಈ ಪೈಪ್‌ಲೈನ್ ಕಾಮಗಾರಿಯ ಗುತ್ತಿಗೆಯನ್ನು ವಹಿಸಿದ್ದು, ಈ ಹಿಂದೆ ಗ್ರಾಮಸಭೆಯಲ್ಲಿ ಈ ಕೈಗಾರಿಕಾ ಘಟಕಕ್ಕೆ ನೀರು ಸರಬರಾಜಿಗೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಇದೀಗ ಅವರೇ ಗುತ್ತಿಗೆ ವಹಿಸಿಕೊಂಡಿದ್ದರಿಂದ ಆಕ್ರೋಶಿತರಾಗಿ ಗ್ರಾಮಸ್ಥರು ಪ್ರತಿಭಟನಾ ಸ್ಥಳಕ್ಕಾಗಮಿಸಿದ ಅವರನ್ನು ತರಾಟೆಗೆ ತೆಗೆದುಕೊಂಡರು.
ಘಟಕ ನಿರ್ಮಾಣಕ್ಕೆ ನಡೆಯದ ಸಾರ್ವಜನಿಕ ಸಂಪರ್ಕ ಸಭೆ:
ನಂದಿಕೂರಿನ ದೇವರಕಾಡಿನಲ್ಲಿ ತಲೆಎತ್ತುತಿರುವ ಈ ಘಟಕ ಕುರಿತಂತೆ ಈವರೆಗೆ ಯಾವುದೇ ಸಾರ್ವಜನಿಕ ಸಂಪರ್ಕ ಸಭೆ ನಡೆಸಲಾಗಿಲ್ಲ. ಘಟಕ ಅಕ್ರಮವಾಗಿ ಕೆಐಎಡಿಬಿ, ವಾರಾಹಿ ನಿಗಮ, ಸಣ್ಣ ನೀರಾವರಿ ಹಾಗೂ ಸ್ಥಳೀಯ ಗ್ರಾಪಂ ನಿರಾಕ್ಷೇಪಣಾ ಪತ್ರ ಸಹಿತ ಪರವಾನಿಗೆಯನ್ನು ಪಡೆಯದೆ ಅಕ್ರಮವಾಗಿ ನಿರ್ಮಾಣವಾಗುತ್ತಿದೆ. ಘಟಕಕ್ಕೆ ಕೊಳವೆ ಮೂಲಕ ದಿನವೊಂದಕ್ಕೆ 3ಲಕ್ಷ ಲೀಟರ್ ನೀರೆತ್ತಲು ಅನುಮತಿ ಪಡೆದಿದ್ದೇವೆ ಎಂದು ಸುಳ್ಳು ಹೇಳುತ್ತಾ ಜನರು ಕತ್ತಲೆಯಲ್ಲಿಟ್ಟು ಕಾಮಗಾರಿ ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.
ಮಾ.11ರಂದು ಪಲಿಮಾರಿನಲ್ಲಿ ಸಭೆ:
ಕಾಮಗಾರಿ ಹಾಗೂ ಘಟಕ ವಿರೋಧಿಸಿ ಪಲಿಮಾರು, ಬಳ್ಕುಂಜೆ ಹಾಗೂ ಇನ್ನಾ ಗ್ರಾಮಸ್ಥರೆಲ್ಲ ಸೇರಿ ಮಾ.11 ರಂದು ಬೆಳಗ್ಗೆ 10 ಗಂಟೆಗೆ ಪಲಿಮಾರು ಗ್ರಾಪಂ ವಠಾರದಲ್ಲಿ ಸಭೆ ನಡೆಯಲಿದೆ.
ದಕ್ಷಿಣಕನ್ನಡ ಜಿಲ್ಲಾ ವ್ಯಾಪ್ತಿಗೆ ಬರುವ ಬಳ್ಕುಂಜೆ ಭಾಗದಲ್ಲಿ ಶಾಂಭವಿ ನದಿಯಿಂದ ನೀರೆತ್ತಿ ಸರಬರಾಜಿಗೆ ಯೋಜನೆ ಹಾಕಿಕೊಳ್ಳಲಾಗಿದೆ. ಇದೇ ಗ್ರಾಮದಲ್ಲಿ ಖಾಸಗಿ ಜಮೀನನ್ನು ಲೀಸ್‌ಗೆ ಪಡೆದು ಕಟ್ಟಡ ನಿರ್ಮಾಣಕ್ಕೂ ಸಿದ್ದತೆ ನಡೆಸಲಾಗಿದೆ. ಬಳ್ಕುಂಜೆ, ಪಲಿಮಾರು ಹಾಗೂ ಇನ್ನಾ ಗ್ರಾಪಂನಿಂದ ಕಾಮಗಾರಿ ವಿರೋಧಿಸಿ ಜಿಲ್ಲಾಧಿಕಾರಿಗಳಿಗೆ ಆಕ್ಷೇಪಣೆಯನ್ನು ಸಲ್ಲಿಸಲಾಗಿತ್ತು. ಅದನ್ನು ಮೀರಿ ಕಾಮಗಾರಿ ನಡೆಸುವ ಕೈಗಾರಿಕಾ ಘಟಕಕ್ಕೆ ಯಾವುದೇ ಕಾರಣಕ್ಕೂ ನೀರು ಸರಬರಾಜಿಗೆ ಅವಕಾಶ ನೀಡುವುದಿಲ್ಲ. ಜನನವಿರೋಧವನ್ನು ಲೆಕ್ಕಿಸದೆ ಕಾಮಗಾರಿಗೆ ಮುಂದಾದಲ್ಲಿ ಬೃಹತ್ ಪ್ರತಿಭಟನೆ ನಡೆಸುವ ಬಗ್ಗೆ ಗ್ರಾಮಸ್ಥರು ನಿರ್ಧರಿಸಿದ್ದಾರೆ.