ಉದ್ಯೋಗ ಆಮಿಷವೊಡ್ಡಿ ರಷ್ಯಾಗೆ ಭಾರತೀಯರ ಕಳ್ಳಸಾಗಣೆ: 7 ಕಡೆಗಳಲ್ಲಿ ಸಿಬಿಐ ದಾಳಿ
ನವದೆಹಲಿ: ರಷ್ಯಾದಲ್ಲಿ ಭಾರತೀಯರ ಸಾವು ಪ್ರಕರಣದ ಬೆನ್ನಲ್ಲೇ ಉದ್ಯೋಗ ಆಮಿಷವೊಡ್ಡಿ ರಷ್ಯಾಗೆ ಭಾರತೀಯರ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ 7 ನಗರಗಳಲ್ಲಿ ಸಿಬಿಐ ದಾಳಿ ನಡೆಸಿದೆ.
ರಷ್ಯಾದಲ್ಲಿ ಭದ್ರತಾ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ಭಾರತೀಯರನ್ನು ರಷ್ಯಾದ ಯುದ್ಧ ವಲಯಕ್ಕೆ ಕಳುಹಿಸಿದ್ದಾರೆ ಎಂಬ ಆರೋಪದ ಮೇಲೆ 7 ನಗರಗಳಲ್ಲಿನ ವೀಸಾ ಏಜೆಂಟ್ಗಳು, ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆಸಿದೆ.
ಮೂಲಗಳ ಪ್ರಕಾರ ರಷ್ಯಾ ಉದ್ಯೋಗದ ವಂಚನೆಗೊಳಗಾಗಿ ಉಕ್ರೇನ್ ವಿರುದ್ಧದ ರಷ್ಯಾದ ಯುದ್ಧಕ್ಕೆ ಬಲವಂತವಾಗಿ ಸೇರ್ಪಡೆಯಾಗಿದ್ದ ಹೈದರಾಬಾದ್ ಮೂಲದ ವ್ಯಕ್ತಿಯೋರ್ವರು ಮೃತಪಟ್ಟ ಒಂದು ದಿನದ ಬಳಿಕ, ಗುರುವಾರ ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡಿತು ಎಂದು ತಿಳಿದು ಬಂದಿದೆ. ರಷ್ಯಾಕ್ಕೆ ಭಾರತೀಯರನ್ನು ಕಳ್ಳಸಾಗಣೆ ಮಾಡುವ ಏಜೆಂಟ್ಗಳು ಮತ್ತು ಸಂಸ್ಥೆಗಳ ದಾಳಿ ಮಾಡಿದೆ ಎನ್ನಲಾಗಿದೆ.
ರಷ್ಯಾದಲಿ ಹೆಚ್ಚಿನ ಸಂಬಳದ ಉದ್ಯೋಗ ದೊರಕಿಸುವ ಆಮಿಷವೊಡ್ಡಿ, ಅಲ್ಲಿಗೆ ಹೋಗುವಂತೆ ಏಜೆಂಟ್ಗಳು ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಏಜೆಂಟ್ಗಳಿಂದ ವಂಚನೆ ಗೊಳಗಾದ ಸುಮಾರು 20ಕ್ಕೂ ಹೆಚ್ಚು ಭಾರತೀಯರು ರಷ್ಯಾ ಪರವಾಗಿ ಯುಕ್ರೇನ್ ವಿರುದ್ಧ ಹೋರಾಡಲು ಒತ್ತಾಯಿಸಲ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಈ ಪೈಕಿ ಇದೀಗ ಇಬ್ಬರು ಭಾರತೀಯರು ಸಾವನ್ನಪ್ಪಿದ್ದು, ಮಹಮದ್ ಅಸ್ಫಾನ್ ಎಂಬ ತೆಲಂಗಾಣ ಯುವಕ ವ್ಯಾಗ್ನರ್ ಗ್ರೂಪ್ ನೊಂದಿಗೆ ಕೆಲಸ ಮಾಡುತ್ತಿದ್ದಾಗ ಉಕ್ರೇನ್ ಡ್ರೋನ್ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ.