ಸಾರ್ವಜನಿಕ ಹೇಳಿಕೆ ಬಗ್ಗೆ ಎಚ್ಚರಿಕೆಯಿಂದ ಇರಿ: ರಾಹುಲ್‌ಗೆ ಚು. ಆಯೋಗ ತರಾಟೆ

ಹೊಸದಿಲ್ಲಿ: ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ಸಾರ್ವಜನಿಕ ಭಾಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪನೌತಿ (ಅಪಶಕುನ) ಮತ್ತು ಪಿಕ್ಪಾಕೆಟ್ ಎಂಬ ಪದಗಳನ್ನು ಬಳಸಿರುವುದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ಸಾರ್ವಜನಿಕ ಹೇಳಿಕೆ ಬಗ್ಗೆ ಜಾಗೃತೆ ವಹಿಸಬೇಕು ಹಾಗೂ ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಿದೆ.

ದೆಹಲಿ ಹೈಕೋರ್ಟ್ ಕಳೆದ ಡಿಸೆಂಬರ್‌ನಲ್ಲಿ ನೀಡಿದ ನಿರ್ದೇಶನದ ಅನ್ವಯ ಕ್ರಮ ಕೈಗೊಂಡಿರುವ ಆಯೋಗ, ತಾರಾ ಪ್ರಚಾರಕರು ಮತ್ತು ರಾಜಕೀಯ ಮುಖಂಡರು ಚುನಾವಣಾ ಪ್ರಚಾರದ ವೇಳೆ ಆಯೋಗ ನೀಡಿದ ಮಾರ್ಗಸೂಚಿ ಅನ್ವಯ ನಡೆಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.

ಚುನಾವಣಾ ನೀತಿಸಂಹಿತೆಯ ಉಲ್ಲಂಘನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಮಾರ್ಚ್ 1ರಂದು ಚುನಾವಣಾ ಆಯೋಗ ಎಲ್ಲ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ತಾರಾ ಪ್ರಚಾರಕರಿಗೆ ಎಚ್ಚರಿಕೆ ನೀಡಿತ್ತು. ಪದೇ ಪದೇ ನೀತಿಸಂಹಿತೆ ಉಲ್ಲಂಘಿಸುವ ನೋಟಿಸ್ ಪಡೆದ ತಾರಾ ಪ್ರಚಾರಕರು ಮತ್ತು ಅಭ್ಯರ್ಥಿಗಳು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಸಿದೆ.

ಪ್ರಧಾನಿ ವಿರುದ್ಧ ಪನೌತಿ ಮತ್ತು ಪಿಕ್ಪಾಕೆಟ್ ಶಬ್ದಗಳನ್ನು ಬಳಸಿದ್ದಕ್ಕಾಗಿ ಚುನಾವಣಾ ಆಯೋಗ, ರಾಹುಲ್ ಗಾಂಧಿಯವರಿಗೆ ನೋಟಿಸ್ ನೀಡಿತ್ತು. 2023ರ ನವೆಂಬರ್‌ನಲ್ಲಿ ಮಾಡಿದ ಭಾಷಣದಲ್ಲಿ ರಾಹುಲ್ ಬಳಸಿರುವ ಪದಗಳು ಸದಭಿರುಚಿಯ ಶಬ್ದಗಳಲ್ಲ ಎಂದು ಆಯೋಗ ಅಭಿಪ್ರಾಯಪಟ್ಟಿತ್ತು. ಜತೆಗೆ ಮುಂದೆ ಇಂಥ ಪದಗಳನ್ನು ಬಳಕೆ ಮಾಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು.

Leave a Reply

Your email address will not be published. Required fields are marked *

error: Content is protected !!