ರಾಜ್ಯದಲ್ಲಿ ಇನ್ನುಮುಂದೆ ಆಸಿಡ್ ಮಾರಾಟ ನಿಷೇಧ: ಗೃಹ ಸಚಿವ ಡಾ.ಜಿ.ಪರಮೇಶ್ವರ್
ಬೆಂಗಳೂರು : ಆಸಿಡ್ ದಾಳಿಯಿಂದ ಹಲವು ಮುಗ್ದ ಜೀವಗಳು ಬಲಿಯಾಗಿದ್ದು ಮಹಿಳಾ ಮತ್ತು ಮಕ್ಕಳ ಸುರಕ್ಷತೆಯಾ ದೃಷ್ಟಿಯಿಂದ ಹಾಗೂ ಇತ್ತೀಚೆಗೆ ಮಂಗಳೂರಿನಲ್ಲಿ ವ್ಯಕ್ತಿಯೊಬ್ಬ ಮೂವರು ಕಾಲೇಜು ವಿದ್ಯಾರ್ಥಿನಿಯರ ಮೇಲೆ ಆಯಸಿಡ್ ದಾಳಿ ಮಾಡಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಸಿಡ್ ಮಾರಾಟ ನಿಷೇಧಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಈ ಕುರಿತು ‘ಮಹಿಳೆಯರ ಮೇಲಿನ ದೌರ್ಜನ್ಯ’ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಅವರು ಆಯಸಿಡ್ ದಾಳಿಗೆ ಒಳಗಾದ ಸಂತ್ರಸ್ತರಿಗೆ ನಿವೇಶನ ನೀಡಲಾಗುವುದು ಎಂದೂ ಹೇಳಿದ್ದಾರೆ.ವಿವಿಧ ಮಹಿಳಾ ಸಂಘಟನೆಗಳು ಹಾಗೂ ಸರ್ಕಾರೇತರ ಸಂಸ್ಥೆಗಳ ಸಲಹೆಗಳನ್ನು ಆಲಿಸಿ ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದುಅವರ ಮೇಲೆ ದೌರ್ಜನ್ಯ ನಡೆದರೆ ಸಹಿಸುವುದಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರು ತಮ್ಮ ಸಮಸ್ಯೆಗಳ ಕುರಿತು ದೂರು ನೀಡಲು ಠಾಣೆಗೆ ಬಂದರೆ ಕೂಡಲೆ ಸಮಸ್ಯೆಗಳನ್ನು ಆಲಿಸಬೇಕು. ಮಹಿಳೆಯರು ಮತ್ತು ಮಕ್ಕಳು ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ, ವಿಧಾನಸೌಧದ ಕಾರ್ಯಾಲಯ ಅಥವಾ ಗೃಹ ಕಚೇರಿಗೆ ಆಗಮಿಸಿ ನನ್ನನ್ನು ಭೇಟಿಯಾಗಿ ಸಮಸ್ಯೆಯನ್ನು ಹೇಳಿಕೊಳ್ಳಬಹುದು ನಮ್ಮ ಬೆನ್ನಿಗೆ ಪೊಲೀಸರು ಇದ್ದಾರೆ ಎಂಬ ಧೈರ್ಯ ಅವರಲ್ಲಿ ಮೂಡಬೇಕು. ಅವರ ದೂರುಗಳ ಬಗ್ಗೆ ತಾತ್ಸಾರ ಮಾಡಿದರೆ ಸಹಿಸುವುದಿಲ್ಲ. ಮಹಿಳೆಯರು ಧೈರ್ಯವಾಗಿದ್ದರೆ ಒಳ್ಳೆ ಆಡಳಿತ, ಜನಸ್ನೇಹಿ ಪೊಲೀಸ್ ಎನಿಸಿಕೊಳ್ಳಲು ಸಾಧ್ಯ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಬೆಂಗಳೂರು ನಗರದಲ್ಲಿ 7,500 ಸಿಸಿಟಿವಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ. ಪೊಲೀಸರು ನಿರಂತರ ಕಣ್ಗಾವಲು ಇಟ್ಟಿರುತ್ತಾರೆ. ನಮ್ಮ ಸರ್ಕಾರವು ಮಹಿಳಾ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದರು.